ಕೊಪ್ಪಳ: ಕಳೆದ ಅ. 10ರಂದು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿ ಮಾಡಿದ್ದ ಮೀಸಲಾತಿಯನ್ನು ಹೈಕೋರ್ಟ್ ಒಂದು ಪ್ರಕರಣದಲ್ಲಿ ಮತ್ತೆ ರದ್ದುಪಡಿಸಿದೆ. ಇದರಿಂದಾಗಿ ಈಗಾಗಲೇ ಅಧಿ ಕಾರದ ಗದ್ದುಗೆ ಹಿಡಿದವರಿಗೆ ದಿಗಲು ಬಡಿದಂತಾಗಿದೆ. ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಲ್ಲೂ ಚುನಾವಣೆ ನಡೆದಿದೆ.
ಈಗ ಕೋರ್ಟ್ ತೀರ್ಪು ಸದಸ್ಯರಿಗೆ ಸಂಕಷ್ಟ ತಂದಿಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು 2 ವರ್ಷ 3 ತಿಂಗಳಾದರು ಇನ್ನೂ ಮೀಸಲಾತಿಯ ವಿವಾದ ಬಗೆ ಹರಿಯುತ್ತಲೇ ಇಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 4 ಬಾರಿ ಮೀಸಲಾತಿ ಪ್ರಕಟವಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕೆನ್ನುವಷ್ಟರಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿರುವುದರಿಂದ ಎಲ್ಲವೂ ವಿಳಂಬವಾಗಿವೆ.
ಹೈಕೋರ್ಟ್ ಹಾಸನದ ಒಂದು ರಿಟ್ ಅರ್ಜಿ ಪ್ರಕರಣ ವಿಚಾರಣೆ ಮಾಡಿ, ರಾಜ್ಯ ಸರ್ಕಾರ ಅ. 8ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಹೊರಡಿಸಿದ ಅ ಧಿಸೂಚನೆಯನ್ನು ರದ್ದುಪಡಿಸಿದೆಯಲ್ಲದೇ ರೋಸ್ಟರ್ ಪ್ರಕಾರ ಹೊಸದಾಗಿ ಮತ್ತೆ ಮೀಸಲಾತಿ ಸಿದ್ಧಪಡಿಸಿ ನಾಲ್ಕು ವಾರದಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿ, 10 ದಿನದಲ್ಲಿ ನಿಮ್ಮ ಅಭಿಪ್ರಾಯ ತಿಳಿಸುವಂತೆ ಅವಕಾಶ ನೀಡಿದೆ.
ಅಧಿಕಾರಕ್ಕೇರಿದವರಿಗೆ ದಿಗಿಲು: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಕೆಲವೆಡೆ ಮೀಸಲಾತಿ ಅನುಸಾರ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಆದರೆ ಫಲಿತಾಂಶ ಪ್ರಕಟ ಮಾಡದೇ ಕೋರ್ಟ್ ನಿರ್ದೇಶನದಂತೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಫಲಿತಾಂಶ ಸಲ್ಲಿಸಲಾಗಿದೆ. ಕೋರ್ಟ್ ತೀರ್ಪಿನ ಬಳಿಕ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿ ಆಡಳಿತ ನಡೆಸಿದೆ. ಅಲ್ಲದೆ, ತಾವರಗೇರಾ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವೆಡೆ ಸುಗಮ ಆಡಳಿತನಡೆದಿವೆ. ಈ ವೇಳೆಗೆ ಹೈಕೋರ್ಟ್ ತೀರ್ಪು ಹಾಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ನಿಜಕ್ಕೂ ದಿಗಿಲು ತಂದಿಟ್ಟಿದೆ.
ನಾಲ್ಕು ಬಾರಿ ಮೀಸಲಾತಿ ಬದಲು: ಕೊಪ್ಪಳ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಎರಡು ವರ್ಷದಲ್ಲಿ ನಾಲ್ಕು ಬಾರಿ ಬದಲಾಗಿದೆ. ಆರಂಭದಲ್ಲಿ ಮೀಸಲಾತಿ ಬರುತ್ತಿದ್ದಂತೆ ಕೆಲವು ರಾಜಕೀಯ ನಾಯಕರು ರಾಜ್ಯಮಟ್ಟದಲ್ಲಿ ಪ್ರಯತ್ನ ನಡೆಸಿ ಮೀಸಲಾತಿ ಬದಲಾವಣೆ ಮಾಡಿದ್ದರು. ಮೀಸಲಾತಿ ಬದಲಾವಣೆಯಾಗಿದ್ದನ್ನು ಪ್ರಶ್ನಿಸಿ ಹಾಲೇಶ ಕಂದಾರಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಮೀಸಲಾತಿಮತ್ತೆ ಬದಲಾದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು. ಇದಾದ ಬಳಿಕವೂ ಎರಡು ಬಾರಿ ಮೀಸಲಾತಿ ಬದಲಾಗಿದೆ. ಈಗ ಹೈಕೋರ್ಟ್ ತೀರ್ಪು ಮತ್ತೆ ಮೀಸಲು ಬದಲಿಸುವಂತೆ ತಿಳಿಸಿದೆ.
ಅಧಿಕಾರಕ್ಕೇರಿದ ದಿನವೇ ಅಧಿಕಾರ ಕಳೆದುಕೊಂಡ್ರು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಆದರೆ ಭಾಗ್ಯನಗರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ಗುರುವಾರವಷ್ಟೇ ಪದಗ್ರಹಣ ಮಾಡಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ದಿನದಂದೇ ಮೀಸಲು ರದ್ದಾದ ಹಿನ್ನೆಲೆಯಲ್ಲಿ ಅವರು ಅಧಿಕಾರ ಕಳೆದುಕೊಂಡಂತಾಗಿದೆ. ಅಧಿಕಾರ ಪದಗ್ರಹಣ ಖುಷಿಯಿಂದಲೇ ನಡೆದಿತ್ತಾದರೂ ಸಂಜೆ ವೇಳೆಗೆ ಮೀಸಲು ರದ್ದು ಎನ್ನುವ ವಿಷಯ ಕೇಳಿ ದಿಗಲೇ ಬಡಿದಂತಾಗಿದೆ.
ಗಂಗಾವತಿಯಲ್ಲಿ ಮೊದಲ ಸಭೆ : ಗಂಗಾವತಿಯಲ್ಲೂ ಸಹಿತ ಈಚೆಗೆ ಹಲವು ಹೈಡ್ರಾಮಾ ನಡುವೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಒಂದು ಮತದ ಅಂತರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಗುರುವಾರ ನಗರಸಭೆಯ ಮೊದಲ ಸಭೆ ನಡೆದಿದೆ. ಈ ಬೆನ್ನಲ್ಲೇ ಹೈಕೋರ್ಟ್ ತೀರ್ಪು ಅಧ್ಯಕ್ಷ, ಉಪಾಧ್ಯಕ್ಷರಿಗೆ ದಿಕ್ಕೇ ತೋಚದ ಸ್ಥಿತಿಯಂತಾಗಿದೆ.
-ದತ್ತು ಕಮ್ಮಾರ