Advertisement

ಎಫ್ಐಆರ್‌ಗೆ ಹೈ ಕೋರ್ಟ್‌ ತಡೆ

06:54 AM Feb 07, 2019 | Team Udayavani |

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಭಕ್ತರಿಗೆ ಮೋಸ ಮತ್ತು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ ಹಾಗೂ ಮುಂದಿನ ವಿಚಾರಣೆಗೆ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌. ಸಂತೋಷ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯಪೀಠ ಸುಬ್ರಹ್ಮಣ್ಯ ಮಠದ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ ಹಾಗೂ ಮುಂದಿನ ವಿಚಾರಣೆಗೆ ತಡೆ ನೀಡಿ, ಪ್ರಕರಣದ ಪ್ರತಿವಾದಿಗಳಾದ ಸುಬ್ರಹ್ಮಣ್ಯ ಠಾಣೆ ಹಾಗೂ ಕುಕ್ಕೆ ಸುಬ್ರ ಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ಪ್ರಕರಣವೇನು?: ರಾಜ್ಯ ಮುಜರಾಯಿ ಇಲಾಖೆಗೊಳಪಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವರ ಮೂಲ ವಿಗ್ರಹ, ಉತ್ಸವ ಮೂರ್ತಿ, ಜಾತ್ರೆ, ದೇವಳದ ಮುಂಭಾಗದ ಗೋಪುರ, ದೇವಳದ ಮಾಹಿತಿಗಳು ಹಾಗೂ ಸೇವಾ ವಿವರಗಳನ್ನು ಸಂಪುಟ ಟ್ರಸ್ಟ್‌ ಖಾಸಗಿ ವೆಬ್‌ಸೈಟ್‌ನಲ್ಲಿ ಅಕ್ರಮವಾಗಿ ಪ್ರಕಟಿಸಿ ಕುಕ್ಕೆ ಸುಬ್ರಹ್ಮಣ್ಯ ದೇವರ ಹೆಸರಲ್ಲಿ ಭಕ್ತಾದಿಗಳಿಗೆ ಮೋಸ ಮಾಡಲಾಗಿದೆ. ಎಂದು ಆರೋಪಿಸಿ ದೇವಸ್ಥಾನದ ಆಡಳಿತ ಮಂಡಳಿ ದೂರು ಸಲ್ಲಿಸಿತ್ತು.

ಈ ದೂರನ್ನು ಆಧರಿಸಿ 2018ರ ನ.17ರಂದು ಎಫ್ಐಆರ್‌ ದಾಖಲಿಸಿ ಕೊಂಡಿದ್ದ ಸುಬ್ರಹ್ಮಣ್ಯ ಠಾಣೆ ಪೊಲೀಸರು, ಅದನ್ನು ಸುಳ್ಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಹಾಗೂ ಸಂಪುಟ ಟ್ರಸ್ಟ್‌ನ ಮುಖ್ಯಸ್ಥರು ಮತ್ತು ಪದಾಧಿಕಾರಿ ಗಳಿಗೆ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯ 2018ರ ನ.24ರಂದು ಜಾಮೀನು ಮಂಜೂರು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next