ಬೆಂಗಳೂರು: ಮಾತನಾಡುವುದು ವಕೀಲ ಮೂಲಭೂತ ಹಕ್ಕು ಎಂದು ಹೇಳಿರುವ ಹೈಕೋರ್ಟ್, ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವಂತಹ ಆದೇಶಗಳನ್ನು ಹೊರಡಿಸುವ ಅಧಿಕಾರ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಇಲ್ಲ ಎಂದು ಆದೇಶಿಸಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ 2024ರ ಏಪ್ರಿಲ್ 12ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹಿರಿಯ ವಕೀಲ ಎಸ್. ಬಸವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಆಗಿರುವ ಹಣ ದುರ್ಬಳಕೆ ಬಗ್ಗೆ ಧ್ವನಿ ಎತ್ತಿದ್ದ ವಕೀಲ ಎಸ್. ಬಸವರಾಜು ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.
ಅಲ್ಲದೆ, ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು ಯಾವುದೇ ವಕೀಲರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಹ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಮಾಡಿರುವಂತೆ ಸಕ್ಷಮ ಸಿವಿಲ್ ನ್ಯಾಯಾಲಯ ಅಥವಾ ಸಾಂವಿಧಾನಿಕ ನ್ಯಾಯಾಲಯಗಳ ಅಧಿಕಾರವನ್ನು ಭಾರತೀಯ ವಕೀಲರ ಪರಿಷತ್ ನ ಅಧ್ಯಕ್ಷರು ಕಿತ್ತುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಅದೇ ರೀತಿ ಬಾರ್ ಕೌನ್ಸಿಲ್ ಆಫ್ ಇಂಡಿ ಯಾದ ಆದೇಶ ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧವಲ್ಲ, ಇಡೀ ವಕೀಲರ ಸಮುದಾಯದ ವಿರುದ್ಧವಾಗಿದೆ. ವಕೀಲರ ಕಾಯ್ದೆ ಸೆಕ್ಷನ್ ಪ್ರಕಾರ, ವಕೀಲರ ಷರಿಷತ್ತಿನ ಚಟುವಟಿಕೆಗಳ ಮೇಲೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಗಾ ವಹಿಸಬಹುದಾಗಿದೆ. ಆದರೆ ಅದು ವಕೀಲರು ಮಾತನಾಡದಂತೆ ನಿರ್ಬಂಧಿಸುವ ಆದೇಶ ಹೊರಡಿಸುವ ಅಧಿಕಾರ ಕೌನ್ಸಿಲ್‌ಗೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.