ಬೆಂಗಳೂರು: ನಗರದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಅಲ್ಲಿ ಬಡವರಿಗೆ ಆಹಾರ ಕಿಟ್ ತಲುಪಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂದು ಕೆಂಡಾ ಮಂಡಲವಾದ ಹೈಕೋರ್ಟ್‌ಈ ಕುರಿತು ವಿವರಣೆ ನೀಡಲು ಮಂಗಳವಾರ ಮಧ್ಯಾಹ್ನ 2.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿದೆ.
ಲಾಕ್ ಡೌನ್ ಘೋಷಣೆಯಾದ ಬಳಿಕ ಜನರಿಗೆ ಉಂಟಾದ ಅನಾನುಕೂಲತೆಗಳ ಬಗ್ಗೆ ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಆಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ತಾಕೀತು ಮಾಡಿದೆ. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಸಲ್ಲಿಸಿದ ಪ್ರಮಾಣಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ, ನಗರದ ಕಂಟೈನ್ಮೆಂಟ್ ವಲಯಗಳಲ್ಲಿನ ಬಡ ಹಾಗೂ ನಿರ್ಗತಿಕರನ್ನು ಗುರುತಿಸುವ ಕನಿಷ್ಟ ಕೆಲಸವನ್ನು ಬಿಬಿಎಂಪಿ ಮಾಡಿಲ್ಲ. ಅಲ್ಲಿ ಎಸ್ ಒಪಿ ಜಾರಿ ಮಾಡುವ ಹಾಗೂ ನಿರ್ಗತಿಕರಿಗೆ ಆಹಾರ ಕಿಟ್ ಹಂಚುವ ಈ ವಿಚಾರ ಸಂಬಂಧ ಹೈಕೋರ್ಟ್ ಜೂ. 25 ಮತ್ತು ಜು. 9ರಂದು ಕೋರ್ಟ್ ನೀಡಿರುವ ಯಾವ ಆದೇಶಗಳ ಪಾಲನೆಯೂ ಮಾಡಿಲ್ಲ. ಕೇವಲ ದಾಖಲೆಗಳು ಕೋರ್ಟ್‌ಗೆ ನೀಡುತ್ತದೆ. ಆದರೆ, ಅವುಗಳ ಅನುಷ್ಠಾನ ಮಾತ್ರ ಶೂನ್ಯ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಕಂಟೈನ್ಮೆಂಟ್ ವಲಯಗಳಲ್ಲಿರುವ ಜನರು ಹೊರಗಡೆ ತೆರಳಿ ದಿನವೆಲ್ಲಾ ಸುತ್ತಾಗಿ ಹಾಗೂ ದುಡಿಮೆಗೂ ಹೋಗಿ ವಾಪಸ್ ಬರುತ್ತಾರೆ ಎಂದು ಸ್ವತಃ ಬಿಬಿಎಂಪಿಯೇ ಹೇಳುತ್ತದೆ. ಇದರಿಂದ ಬಿಬಿಎಂಪಿ ವೈಫಲ್ಯ ಅನೇಕ ಪ್ರಕರಣಗಳಲ್ಲಿ ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಮುಂದೆ ಬಂದು ಪರಿಸ್ಥಿತಿ ನಿರ್ವಹಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಸರ್ಕಾರಕ್ಕೂ ತರಾಟೆ : ನಗರದ ಕಂಟೈನ್ಮೆಂಟ್ ವಲಯದಲ್ಲಿ ಬಡ ಜನರಿಗೆ ರೇಷನ್ ನೀಡಲು ತನಗೆ ಸಾಧ್ಯವಿಲ್ಲ ಎಂದು ಬಿಬಿಎಂಪಿ ಹೇಳಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಆಡಳಿತ ಯಂತ್ರ ಉಪಯೋಗಿಸಿ ಕಂಟೈನ್ಮೆಂಟ್ ವಲಯದ ಜನರಿಗೆ ಆಹಾರ ಸಾಮಾಗ್ರಿ ನೀಡಬೇಕು. ಎಸ್‌ಒಪಿ ಅನುಷ್ಠಾನ ಮಾಡಬೇಕೆಂದು ನ್ಯಾಯಪೀಠ ಸೂಚನೆ ನೀಡಿತ್ತು. ಈ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಉತ್ತರ ನೀಡಿಲ್ಲ. ಸರ್ಕಾರಕೋರ್ಟ್ ಆದೇಶಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರು ಮಂಗಳವಾರ ಮಧ್ಯಾಹ್ನ 2.30ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿತು.
ಪ್ರಕರಣಗಳ ನಿರ್ವಹಣೆ ಸಮಗ್ರ ಮಾಹಿತಿ ನೀಡಿ : ವ್ಯಕ್ತಿಯೊಬ್ಬರಿಗೆ ಕೋವಿಡ್ ಪತ್ತೆಯಾದ ಕೂಡಲೇ ಆತ ನಿಗದಿತ ಲ್ಯಾಬ್‌ಗ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದ ರಿಂದ ಹಿಡಿದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯವ ಹಂತದವರಿಗೆ ಅನುಸರಿಸಬೇಕಾದ ವಿಧಾನಗಳು, ಸಂಪರ್ಕಿಸಬೇಕಾದ ಸ್ಥಳಗಳು ಇತ್ಯಾದಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಹೈಕೋರ್ಟ್ ಈ ಬಗ್ಗೆ ಮಂಗಳವಾರ (ಜು.14) ವಿವರವಾದ ಉತ್ತರ ನೀಡುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿಗಳು, ಒಬ್ಬ ವ್ಯಕ್ತಿ ಕೋವಿಡ್-19 ಟೆಸ್ಟ್ ಒಳಗಾಗಬೇಕೆಂದರೆ ಡೆಸಿಗ್ನೇಟೆಡ್ ಲ್ಯಾಬ್‌ಗ ಹೋಗುವುದು ಹೇಗೆ? ತಪಾಸಣೆ ಕುರಿತು ಮಾರ್ಗಸೂಚಿ ಇದೆಯೇ? ಪರೀಕ್ಷಾ ವರದಿ ನೀಡಲು ಕಾಲಮಿತಿ ನಿಗದಿಯಾಗಿದೆಯೇ? ಕೋವಿಡ್ ದೃಢಪಟ್ಟ ತಕ್ಷಣವೇ ಯಾವೆಲ್ಲಾ ವೈದ್ಯಕೀಯ ಸೌಲಭ್ಯ ಪಡೆಯಬಹುದು? ಅವುಗಳನ್ನು ಪಡೆಯಲು ಯಾವ ವ್ಯವಸ್ಥೆ ಇದೆ? ಪಾಸಿಟಿವ್ ಬಂದರೆ ಆಸ್ಪತ್ರೆಗೆ ಹೋಗುವ ಪ್ರಕ್ರಿಯೆ ಏನು? ಯಾರನ್ನು ಮೊದಲು ಸಂಪರ್ಕಿಸಬೇಕು ಎಂದು ಪ್ರಶ್ನಿಸಿದರು.ದಿನಕ್ಕೆ ಸಾವಿರಾರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ, ಈ ಎಲ್ಲಾ ವಿಷಯಗಳ ಬಗ್ಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ರಿಜಿಸ್ಟ್ರಾರ್ ಅಡ್ಮಿನ್‌ಗೆ ಸಿಗದ ಐಸಿಯು: ಕಳೆದ ವಾರ ಹೈಕೋರ್ಟ್ ಸಿಬ್ಬಂದಿಯೊಬ್ಬರ ಕುಟುಂಬ ಸದಸ್ಯರಿಗೆ ಕೋವಿಡ್ ದೃಢಪಟ್ಟಿತು. ರಿಜಿಸ್ಟ್ರಾರ್ ಅಡ್ಮಿನ್ ಮೂರು ಗಂಟೆ ಕಾಲ ಸತತವಾಗಿ ಪ್ರಯತ್ನಿಸಿದರೂ ನಗರದ ಯಾವೊಂದು ಆಸ್ಪತ್ರೆಯಲ್ಲಿ ಐಸಿಯು ಸಿಗಲಿಲ್ಲ. ಇಂತಹ ಪರಿಸ್ಥಿತಿ ಎದುರಿಸುವಾಗ ಇನ್ನೂ ಜನ ಸಾಮಾನ್ಯ ಪರಿಸ್ಥಿತಿ ಏನು? ಎಂದು ಖಾರವಾಗಿ ಪೀಠ ಖಾರವಾಗಿ ಪ್ರಶ್ನಿಸಿತು.