ಬೆಂಗಳೂರು: ಬಡ್ತಿ ಮೀಸಲಾತಿ ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ಪಾಲಿಸಿದೆ. ರಾಜ್ಯಸರ್ಕಾರದ ವ್ಯಾಪ್ತಿಗೆ ಒಳಪಡದ ಮುಖ್ಯನ್ಯಾಯಮೂರ್ತಿಗಳ ನಿರ್ದೇಶನದಂತೆ ನಡೆಯುವ ಹೈಕೋರ್ಟ್‌ನಲ್ಲಿ ಸುಪ್ರೀಂ ತೀರ್ಪು ಜಾರಿಯಾಗಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಶೋಕ್ ನಿಜಗಣ್ಣನವರ್, ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶ್ರೇಣಿಯ ಸಿಬ್ಬಂದಿಯ ಹುದ್ದೆಗಳನ್ನು ಸೇವಾ ಹಿರಿತನ ಪರಿಗಣಿಸಿ, ಪರಿಷ್ಕೃತ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆಗೊಳಿಸಿ ಆದೇಶಹೊರಡಿಸಿದ್ದಾರೆ.
ಹೊಸದಾಗಿ ಪರಿಷ್ಕೃತ ಪಟ್ಟಿಯಲ್ಲಿ ಜಂಟಿ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಸೇರಿದಂತೆ ಹೈಕೋರ್ಟ್‌ನ ಸಿಬ್ಬಂದಿ ಹಲವು ಹುದ್ದೆಗಳಲ್ಲಿ ಏರುಪೇರಾಗಿದೆ. ಸೇವಾ ಹಿರಿತನದ ಆಧಾರದಲ್ಲಿ ಹಲವು ಮಂದಿ ಪದೋನ್ನತಿ ಹೊಂದಿದ್ದು, ಕೆಲವರು ಹಿಂಬಡ್ತಿ ಪಡೆದುಕೊಂಡಿದ್ದಾರೆ.
ತಾತ್ಕಾಲಿಕ ಪರಿಷ್ಕೃತ ಪಟ್ಟಿಗೆ ಮುಂದಿನ 15ದಿನಗಳ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಲಾಗಿದ್ದು, ಬೆಂಗಳೂರಿನ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಬಳಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಡ್ತಿ ಮೀಸಲಾತಿ ರದ್ದುಗೊಳಿಸಿ ಎಲ್ಲಾ ರಾಜ್ಯಗಳೂ ಆದೇಶ ಪಾಲಿಸುವಂತೆ ಸುಪ್ರೀಂಕೋರ್ಟ್ ಫೆ.9ರಂದು ತೀರ್ಪು ನೀಡಿತ್ತು. ಈ ಸಂಬಂಧ ರಾಜ್ಯಸರ್ಕಾರ ಸಲ್ಲಿಸಿದ್ದ ಎಸ್‌ಎಲ್‌ಪಿ ಅರ್ಜಿಯನ್ನೂ ವಜಾಗೊಳಿಸಿರುವ ಸುಪ್ರೀಂಕೋರ್ಟ್, ಡಿಸೆಂಬರ್ ಅಂತ್ಯದೊಳಗೆ ಆದೇಶ ಪಾಲಿಸುವಂತೆ ಗಡುವು ನೀಡಿದೆ.