ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಗಳಲ್ಲಿ ಸಿಬಂದಿ ಕೊರತೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಣೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹ ಹಾಗೂ ಪ್ರಶಂಸನೀಯ.
ಪರಿಶಿಷ್ಟ ಜಾತಿಯ ಬಾಲಕಿಯರ ಮತ್ತು ಬಾಲಕರ ಹಾಸ್ಟೆಲ್‌ನಲ್ಲಿ ಮಂಜೂರಾತಿ ಪ್ರಮಾಣಕ್ಕಿಂತ ಕಡಿಮೆ ಸಿಬಂದಿ ಇ¨ªಾರೆ. ಜತೆಗೆ ಕೆಲವು ಜಿಲ್ಲೆಗಳ ವಸತಿ ನಿಲಯಗಳಲ್ಲಿ ಎರಡು-ಮೂರು ಹಾಸ್ಟೆಲ…ಗಳಲ್ಲಿ ಒಬ್ಬರೇ ವಾರ್ಡನ್ ಮತ್ತು ಒಬ್ಬರೇ ಮೇಲ್ವಿಚಾರಕರಿದ್ದಾರೆ. ಇದರಿಂದಾಗಿ ಮಕ್ಕಳ ಲ್ಲಿನ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. ಜತೆಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಗುರಿ ಯಾಗುವಂತಾಗಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಖಾಲಿ ಹುದ್ದೆಗಳ ವಿಚಾರ ಕೇವಲ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ್ದಲ್ಲ. ರಾಜ್ಯ ಸರಕಾರದ ಪ್ರಮುಖ 72 ಇಲಾಖೆಗಳ ಜತೆಗೆ ವಿವಿಧ ನಿಗಮ, ಮಂಡಳಿಗಳು, ಪ್ರಾಧಿಕಾರಗಳು ಸೇರಿದಂತೆ ಒಟ್ಟು 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 7.70 ಲಕ್ಷ ಹುದ್ದೆಗಳ ಪೈಕಿ ಸದ್ಯ 5.20 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಉಳಿದಂತೆ ಶೇ.39ರಷ್ಟು ಹುದ್ದೆಗಳು ಖಾಲಿ ಇವೆ. ಅದರಲ್ಲೂ ವಿಶೇಷವಾಗಿ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಣ ಇಲಾಖೆಯಲ್ಲಿಯೇ ಸಾವಿರಾರು ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಉಳಿದಿವೆ. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 1,88,531 ಮಂಜೂರಾದ ಶಿಕ್ಷಕ ಹುದ್ದೆಗಳ ಪೈಕಿ ಅಂದಾಜು 40 ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 16,455 ಮಂಜೂರಾದ ಬೋಧಕ ಸಿಬಂದಿಯಲ್ಲಿ 699 ಹುದ್ದೆಗಳು, ಮಂಜೂರಾದ 19,682 ಬೋಧಕೇತರ ಸಿಬಂದಿಯಲ್ಲಿ 13,558 ಹುದ್ದೆಗಳು ಖಾಲಿ ಇವೆ. ಆರೋಗ್ಯ ಇಲಾಖೆಯಲ್ಲಿ 13,853 ಹುದ್ದೆಗಳು ಖಾಲಿ ಉಳಿದಿವೆ. ಶಿಕ್ಷಣ ಹಾಗೂ ಆರೋಗ್ಯದಂತಹ ಪ್ರಮುಖ ಇಲಾಖೆಗಳಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇರುವಾಗ ವಿದ್ಯಾರ್ಥಿ
ಗಳಿಗೆ ಯಾವ ರೀತಿಯ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ? ಶ್ರೀಸಾಮಾನ್ಯರಿಗೆ ಸಕಾಲಕ್ಕೆ ಆರೋಗ್ಯ ಸೇವೆ ಸಿಗುವುದೇ? ಎಂಬುದನ್ನು ಸರಕಾರ ಯೋಚಿಸಬೇಕಿದೆ.
ಸರಕಾರಿ ವ್ಯವಸ್ಥೆಯಲ್ಲಿ ಸಿವಿಲ್ ಕಾಮಗಾರಿಗಳಿಗೆ (ಕಟ್ಟಡ, ರಸ್ತೆ,ಸೇತುವೆ ನಿರ್ಮಾಣ) ಕೊಡುವಷ್ಟು ಆದ್ಯತೆಯನ್ನು ಯಾವುದೇ ಸಚಿವರು, ಅಧಿಕಾರಿಗಳು ಸಿಬಂದಿ ನೇಮಕಾತಿಗೆ ಕೊಡುವುದಿಲ್ಲ. ಕಾರಣ ಸಿಬಂದಿ ನೇಮಕಾತಿ ಅಷ್ಟೊಂದು “ಆಕರ್ಷಕ’ವಾಗಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳು ಶಿಕ್ಷಣದ ಗುಣಮಟ್ಟ ಹೆಚ್ಚಳ ಹಾಗೂ ಸಂಶೋಧನೆಗಳಿಗೆ ಆದ್ಯತೆ ಕೊಡುವುದಕ್ಕಿಂತಲೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ ಎಂಬುದನ್ನು ಸ್ವತಃ ಉನ್ನತ ಶಿಕ್ಷಣ ಸಚಿವರೇ ಹೇಳಿದ್ದಾರೆಂದರೆ ಅಲ್ಲಿಗೆ ವಿವಿಗಳ ಆದ್ಯತೆ ಏನಾಗಿದೆ ಎಂಬುದು ತಿಳಿಯುತ್ತದೆ. ಸರಕಾರಿ ಸೇವೆಗಳು ಸಕಾಲಕ್ಕೆ ಶ್ರೀಸಾಮಾನ್ಯರಿಗೆ ಲಭ್ಯವಾಗಬೇಕಾದರೆ ಖಾಲಿ ಹುದ್ದೆಗಳನ್ನು ವರ್ಷಾನುಗಟ್ಟಲೆ ಖಾಲಿ ಉಳಿಸಿಕೊಳ್ಳುವುದು ಸೂಕ್ತವಲ್ಲ. ಅಗತ್ಯಕ್ಕೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳುವ ಕಡೆ ಸರಕಾರ ತುರ್ತಾಗಿ ಕಾರ್ಯೋನ್ಮುಖವಾಗಬೇಕಿದೆ.