ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರ ಜತೆ ರಾಹುಲ್‌ಗಾಂಧಿ ಮಂಗಳವಾರ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಚರ್ಚೆಗಾಗಿ ದೆಹಲಿಯಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆ ಸುದೀರ್ಘ ಐದು ಗಂಟೆಗಳ ಕಾಲ ಚರ್ಚಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ನಡೆಸಿರುವ ಸಮೀಕ್ಷೆ, 224 ಕ್ಷೇತ್ರಗಳಲ್ಲಿನ ಪರಿಸ್ಥಿತಿ, ಯಾರ ನಾಯಕತ್ವಕ್ಕೆ ಹೆಚ್ಚು ಒಲವು ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಜ್ಯ ನಾಯಕರ ಜತೆ ರಾಹುಲ್‌ಗಾಂಧಿ ಸವಿವರವಾಗಿ ಚರ್ಚಿಸಿದರು.
ಹೈಕಮಾಂಡ್ ನಡೆಸಿರುವ ಸಮೀಕ್ಷೆ ಪ್ರಕಾರ, ಯಾವ ಕ್ಷೇತ್ರದಲ್ಲಿ ಹಿನ್ನೆಡೆ ಹಾಗೂ ಅದಕ್ಕೆ ಕಾರಣ, ಹಾಲಿ ಶಾಸಕರಿಗೆ ಇರುವ ವಿರೋಧ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಳಿ ರಾಹುಲ್‌ಗಾಂಧಿ ಮುಕ್ತವಾಗಿ ಹಂಚಿಕೊಂಡರು.
ವಿಧಾನಸಭೆ ಚುನಾವಣೆ ಎದುರಿಸುವ ಕೈಗೊಳ್ಳಬೇಕಾದ ಸಿದ್ಧತೆ, ಪ್ರವಾಸ, ಸಮುದಾಯವಾರು ಸಮಾವೇಶ ಕುರಿತು ರೂಪು-ರೇಷೆ ಕುರಿತು ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿನ ಬೆಳವಣಿಗೆ, ಇತ್ತೀಚೆಗೆ ಪ್ರಧಾನಿ ನರೇಂದ್ರಮೋದಿ ರಾಜ್ಯ ಪ್ರವಾಸ ಸೇರಿದಂತೆ ಹಲವು ವಿಚಾರಗಳು ಈ ಸಂದರ್ಭದಲ್ಲಿ ಪ್ರಸ್ತಾಪವಾದವು ಎಂದು ಹೇಳಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.