Advertisement

ಹೈಕಮಾಂಡ್‌ ಹೇಳಿದ್ರೆ ಸ್ಪರ್ಧಿಸುವೆ ಎಂದ ಎಸ್‌.ಎಸ್‌.ಮಲ್ಲಿಕಾರ್ಜುನ್‌

08:28 AM Mar 30, 2019 | Team Udayavani |

ದಾವಣಗೆರೆ : ನಾಮಪತ್ರ ಆರಂಭವಾಗಿ 2 ದಿನ ಕಳೆದರೂ ದಾವಣಗೆರೆ
ಲೋಕಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ಇನ್ನೂ ಬಗೆಹರಿದಿಲ್ಲ. ಶುಕ್ರವಾರ ಕೆಪಿಸಿಸಿಯಿಂದ ದಿಢೀರ್‌ ಬುಲಾವ್‌ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಬೆಂಗಳೂರಿಗೆ ತೆರಳಿದ್ದಾರೆ.

Advertisement

ಬೆಂಗಳೂರಿಗೆ ತೆರಳುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, “ಪಕ್ಷದ ಹೈಕಮಾಂಡ್‌ ಈ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಸೂಚಿಸಿದರೆ ಸ್ಪರ್ಧಿಸುವೆ.ಪಕ್ಷದ ವರಿಷ್ಠರು ಗುರುವಾರ ನನ್ನ ಜತೆ ಮಾತನಾಡಿದರು. ಅದೇ
ಮೊದಲ ಮಾತುಕತೆ. ನೀವು ಮೂರು ಸಲ ನಿಂತಿದ್ದೀರಾ, ನಿಮ್ಮ ತಂದೆಯವರಿಗೆ ಟಿಕೆಟ್‌ ಕೊಡ ಬೇಕು ಅಂತ ಹೇಳಿ ದ್ದರು. ನಿಮ್ಮ ತಂದೆಯವರೊಂದಿಗೆ ಮಾತನಾಡಿದಾಗ ಫ್ಯಾಮಿಲಿ ಹಾಗೂ ಆರೋಗ್ಯದ ಸಮಸ್ಯೆ ಪ್ರಸ್ತಾಪವಾಯಿತು. ನಾವ್ಯಾರೂ ಟಿಕೆಟ್‌
ಬೇಡ ಅಂತಾ ಹೇಳಿಲ್ಲ. ಹೈಕಮಾಂಡ್‌ ನೀನೇ ನಿಲ್ಲಬೇಕು ಅಂತ ಹೇಳಿದ್ರೆ
ಸ್ಪರ್ಧಿಸಲೇಬೇಕು ಎಂದು ತಿಳಿಸಿದ್ದಾರೆ’ ಎಂದರು.

“ರಾಹುಲ್‌ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಮಧ್ಯೆ, ನನಗೆ ಕರೆ ಬಂದಿದೆ. ಹಾಗಾಗಿ, ಅಲ್ಲಿಗೆ ಹೋಗುವೆ. ವರಿಷ್ಠರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಎಲ್ಲಾ ತೀರ್ಮಾನ ಆಗಲಿದೆ. ಏಪ್ರಿಲ್‌ 4ರ ವರೆಗೆ ನಾಮಪತ್ರ
ಸಲ್ಲಿಸಲು ಕಾಲಾವಕಾಶ ಇದೆ. ಅಲ್ಲಿಯ ತನಕ ಕಾದು ನೋಡಿ’ ಎಂದರು.

ತೇಜಸ್ವಿ ಪಟೇಲರನ್ನು ಕೆಪಿಸಿಸಿ ಅಧ್ಯಕ್ಷರು ಬೆಂಗಳೂರಿಗೆ ಕರೆಸಿಕೊಂಡು ಮಾತನಾಡಿದ
ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ತೇಜಸ್ವಿ ಪಟೇಲ್‌ ಸಹ ನನ್ನೊಂದಿಗೆ ಮಾತನಾಡಿದ್ದಾರೆ. ಅವರು ನಿಂತರೆ ನಾವು ಕೆಲಸ ಮಾಡಬೇಕು. ನಾವು ನಿಂತಲ್ಲಿ
ಅವರು ಕೆಲಸ ಮಾಡಬೇಕು. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಗೆಲುವಿಗೆ ಕೆಲಸ ಮಾಡಲೇಬೇಕು. ಅದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದರು.

ಯಾರೇ ಅಭ್ಯರ್ಥಿಯಾದರೂ ನನಗೆ ಓಕೆ: ಶಾಮನೂರು
ದಾವಣಗೆರೆ: “ಸಚಿವ ಸ್ಥಾನ ಕೇಳಿದರೆ ವಯಸ್ಸಾಗಿದೆ ಅಂತ ಹೇಳಿ ಈಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೊಡುತ್ತಾರೆ. ಇದೇ ಕಾರಣಕ್ಕೆ ನಾನು ಟಿಕೆಟ್‌ ಬೇಡವೆಂದು ಹೇಳಿದ್ದೇನೆ’ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, “ಈಗಾಗಲೇ ನನ್ನಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿರುವೆ. ಬೇರೆ ಯಾರಾದರೂ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸುವೆ. ನಾನು ಹೈಕಮಾಂಡ್‌ ಬಳಿ ಯಾರ ಹೆಸರನ್ನೂ ಹೇಳಿಲ್ಲ. ನನ್ನ ಪುತ್ರ ಎಸ್‌.ಎಸ್‌ ಮಲ್ಲಿಕಾರ್ಜುನ್‌ ಸ್ಪರ್ಧಿಸಿದರೂ ಸಹ ಸಂತೋಷ. ಸಚಿವ ಸ್ಥಾನ ನೀಡದಿರುವುದಕ್ಕೆ ನನಗೆ ಬೇಸರವೂ ಆಗಿದೆ’ ಎಂದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಲು ರೆಡಿ: ಎಚ್‌.ಬಿ. ಮಂಜಪ್ಪ
ದಾವಣಗೆರೆ: “ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಿಂದೆ ಸರಿದಿದ್ದು, ನನಗೇ ಟಿಕೆಟ್‌ ಕೊಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, “ಮಾಜಿ ಸಚಿವ ಎಸ್‌. ಎಸ್‌.ಮಲ್ಲಿಕಾರ್ಜುನ್‌ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಆಲೋಚಿಸಿಲ್ಲ. ಇಬ್ಬರೂ ಸಹ ನನ್ನ ಹೆಸರನ್ನು ಪರಿಗಣಿಸುವಂತೆ ಹೈಕಮಾಂಡ್‌ಗೆ ತಿಳಿಸಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next