ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ ಇಲ್ಲಿ ಮಾಜಿ ಸಚಿವ ಮುಖಂಡ ಇಕ್ಬಾಲ್ ಅನ್ಸಾರಿಯವರು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಯಾಗಿದ್ದು, ಈಗಾಗಲೇ ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆಂದು ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ಅನ್ಯ ಧರ್ಮಿಯರಿಗೆ ಕಿರುಕುಳ ಕೊಡುವುದನ್ನು ರಾಜ್ಯದ ಜನ ಗಮನಿಸುತ್ತಿದ್ದು ಖಚಿತವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳಲ್ಲಿ ಗೆದ್ದು ಆಡಳಿತ ನಡೆಸಲಿದೆ.ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು, ಎಲ್ಲಾ ಜಾತಿಯ ಮುಖಂಡರು ಹಿರಿಯ ನಾಗರಿಕರು ಚುನಾವಣೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ .ಗಂಗಾವತಿ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಹೊರತುಪಡಿಸಿ ಅನ್ಯರಿಗೆ ಟಿಕೆಟ್ ಸಿಗುವುದಿಲ್ಲ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದು ಪಕ್ಷಕ್ಕೆ ಬರುವವರನ್ನು ಸ್ವಾಗತ ಮಾಡಲಾಗುತ್ತದೆ.ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಹಿರಿಯ ನಾಯಕರಿಗೆ ಚುನಾವಣೆ ನಂತರ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುತ್ತದೆ ಎಂದರು.
ಗಂಗಾವತಿ ಕ್ಷೇತ್ರದಲ್ಲಿ ಕೆಲವರು ಸುಮ್ಮಸುಮ್ಮನೆ ಗೊಂದಲವೆಬ್ಬಿಸುವ ಹೇಳಿಕೆ ನೀಡುತ್ತಿದ್ದು ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ಷೇತ್ರದ ನಿರ್ಲಕ್ಷ್ಯ ಮಾಡಬೇಕು.ಕೆಲವರು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಅನ್ಸಾರಿಯವರು ಅಭ್ಯರ್ಥಿಯಾಗುವುದು ಬೇಡ ಎಂಬ ಅರ್ಥದಲ್ಲಿ ದೂರನ್ನು ಸಲ್ಲಿಸಿದ್ದು ಅದಕ್ಕೆ ಬಿ.ಕೆ.ಹರಿಪ್ರಸಾದ್ ಅವರು ಸೂಕ್ತ ಉತ್ತರ ನೀಡಿದ್ದಾರೆ .ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮ ಜಾತಿಗೆ ಸೇರಿದ ಪಕ್ಷವಾಗಿದೆ ಆದ್ದರಿಂದ ಎಲ್ಲಾ ಸಮುದಾಯದವರಿಗೂ ಟಿಕೆಟ್ ನೀಡುವ ಪರಿಕಲ್ಪನೆ ಕಾಂಗ್ರೆಸ್ ಪಕ್ಷದ್ದು ಇಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅಥವಾ ಬೇರೆ ಜಾತಿ ಅನ್ವಯವಾಗುವುದಿಲ್ಲ. ಪಕ್ಷ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತು ಟಿಕೆಟ್ ನೀಡಲಿದೆ. ಅದರಂತೆ ಅನ್ಸಾರಿ ಹೆಚ್ಚಿನ ಡಿಜಿಟಲ್ ಸದಸ್ಯತ್ವ ಮಾಡಿಸಿದ್ದು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎಂದರು.
ಸರ್ಕಾರ ಭ್ರಷ್ಟಾಚಾರದ ಕೂಪ
ಬಿಜೆಪಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಜಾತಿ ಧರ್ಮ ಹೆಸರಿನಲ್ಲಿ ಕೋಮು ದಳ್ಳುರಿ ಮಾಡುತ್ತಿರುವುದು ರಾಜ್ಯದ ಜನ ಗಮನಿಸುತ್ತಿದ್ದಾರೆ .ಶ್ರೀರಾಮಸೇನೆ ಮತ್ತು ಸಂಘಪರಿವಾರದ ಕೆಲ ಮುಖಂಡರು ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ಮಾಡುವ ಮೂಲಕ ನಿಜವಾದ ಪೋಲಿಸರ ಕಾರ್ಯಗಳಿಗೆ ಅಡ್ಡಿಯಾಗಿದ್ದಾರೆ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ಖಂಡನೀಯ ಗಲಭೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವವರನ್ನು ಸರಕಾರ ಶಿಕ್ಷಿಸಬೇಕು ಎಂದರು.
ಕನಕದಾಸ ವೃತ್ತ ನಿರ್ಮಾಣಕ್ಕೆ ಮನವಿ
ಇತ್ತೀಚೆಗೆ ಕೆಎಸ್ ಆರ್ ಟಿಸಿ ಬಸ್ ಢಿಕ್ಕಿಯಿಂದ ಹಾನಿಗೊಳಗಾದ ಶ್ರೀಕನಕದಾಸ ವೃತ್ತದ ಸ್ಥಳಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ವೃತ್ತವನ್ನು ಪುನಃ ನಿರ್ಮಾಣ ಮಾಡಲು ಶಾಸಕರು ಮತ್ತು ಸಹಕಾರ ನೀಡಬೇಕು.ತಾವು ಸಹ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಜತೆ ಮಾತನಾಡಿ ಮನವಿ ಮಾಡುವುದಾಗಿ ತಿಳಿಸಿದರು .
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ ವೆಂಕಟೇಶ್ ,ಹನುಮಂತಪ್ಪ ರಾಮಚಂದ್ರ ಸೇರಿ ಅನೇಕರಿದ್ದರು.