Advertisement

ಸರ್ಕಾರದ ನಿಷ್ಕಾಳಜಿಗೆ ಹೈ ಬೇಸರ

12:56 AM Jun 29, 2019 | Lakshmi GovindaRaj |

ಬೆಂಗಳೂರು: ಮರಗಳ ಸಂರಕ್ಷಣೆ ಮತ್ತು ಹಸಿರೀಕರಣ ವಿಚಾರದಲ್ಲಿ ಸರ್ಕಾರದ ನಿಷ್ಕಾಳಜಿಗೆ ಬೇಸರ ವ್ಯಕ್ತಪಡಿಸಿರವ ಹೈಕೋರ್ಟ್‌, ಮರಗಳ ಗಣತಿ ಹಾಗೂ ಅಭಿವೃದ್ಧಿ ಕಾಮಗಾರಿಗಳು ಮತ್ತು ಪ್ರಾಕೃತಿಕ ಅನಾಹುತಗಳಿಗೆ ನಾಶವಾಗುವ ಮರಗಳಿಗೆ ಪರ್ಯಾಯವಾಗಿ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಹೆಚ್ಚುವರಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಮರ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

Advertisement

ನಗರದಲ್ಲಿ ಮೆಟ್ರೋ ಕಾಮಗಾರಿಗೆ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ. ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ.ಎಚ್‌.ಟಿ. ನರೇಂದ್ರಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.

ಕರ್ನಾಟಕ ಮರಗಳ ಸಂಕರಕ್ಷಣಾ ಕಾಯ್ದೆ-1976ರ ಮುಖ್ಯ ಉದ್ದೇಶ ರಾಜ್ಯದಲ್ಲಿ ಮರಗಳ ಸಂರಕ್ಷಣೆಯಾಗಿದೆ. ಆದರೆ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕುರಿತ ಸರ್ಕಾರ ಕಾಳಜಿ ವಹಿಸಿದಂತೆ ಕಾಣಿಸುತ್ತಿಲ್ಲ. ತನ್ನ ವ್ಯಾಪ್ತಿಗೆ ಬರುವ ಎಲ್ಲ ಮರಗಳ ಕಡ್ಡಾಯ ಸಂರಕ್ಷಣೆ, ಮರಗಳ ಗಣತಿ ಹಾಗೂ ಅಭಿವೃದ್ಧಿ ಕಾಮಗಾರಿಗಳು ಮತ್ತು ಪ್ರಾಕೃತಿಕ ಅನಾಹುತಗಳಿಗೆ ನಾಶವಾಗುವ ಮರಗಳಿಗೆ ಪರ್ಯಾಯವಾಗಿ ಮರಗಳನ್ನು ಬೆಳೆಸುವುದು ಮರ ಪ್ರಾಧಿಕಾರದ ಕಡ್ಡಾಯ ಜವಾಬ್ದಾರಿಯಾಗಿದೆ.

ಆದರೆ, ಪ್ರಾಧಿಕಾರವು ಸಲ್ಲಿಸಿರುವ ಆಕ್ಷೇಪಣೆಗಳಲ್ಲಿ ಇದರ ಸೂಚನೆಗಳೂ ಗೋಚರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಈ ಅಂಶಗಳನ್ನೊಳಗೊಂಡ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ. ಬೆಂಗಳೂರಿನ ಹಸಿರು ಹೊದಿಕೆ (ಗ್ರೀನ್‌ ಕವರ್‌) ಶೇ.78ರಷ್ಟು ಕಡಿಮೆಯಾಗಿದೆ ಎಂಬ ಅರ್ಜಿದಾರರ ವಾದ ಗಮನಿಸಿದರೆ, “ಮರ ಪ್ರಾಧಿಕಾರ ಇರುವುದು ಮರಗಳ ರಕ್ಷಣೆಗೆ ಅಲ್ಲ. ಬದಲಿಗೆ ಮರಗಳ ವಿನಾಶಕ್ಕೆ ‘ ಎನಿಸುತ್ತಿದೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ತಮ್ಮ “ವಿರೋಧಿ ದಾವೆ’ ಎಂದು ಸರ್ಕಾರ ಮತ್ತು ಇತರ ಪ್ರತಿವಾದಿಗಳು ಪರಿಗಣಿಸುವುದಿಲ್ಲ ಎಂಬ ವಿಶ್ವಾಸವನ್ನು ನ್ಯಾಯಾಲಯ ಹೊಂದಿದೆ ಎಂದು ನ್ಯಾಯಪೀಠ ಹೇಳಿದೆ.

ಸಮಿತಿ ರಚಿಸಿಲ್ಲ: ಕತ್ತರಿಸಲು ಗುರುತಿಸಲಾಗಿರುವ ಮರಗಳನ್ನು ಬೇರೆ ವಿಧಾನ ಅಳವಡಿಸಿ ಉಳಿಸಿಕೊಳ್ಳಬಹುದೇ ಎಂದು ಎಲ್ಲ ವಿಧಾನಗಳನ್ನು ಪರಿಶೀಲಿಸಿ, ಬಳಿಕ ಆ ಮರಗಳನ್ನು ಉಳಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಮನನವಾದ ಬಳಿಕವಷ್ಟೇ ಮರಗಳನ್ನು ಕತ್ತರಿಸಲು ಅನಮತಿ ನೀಡಲು ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿ ರಚಿಸುವಂತೆ ಎರಡು ತಿಂಗಳ ಹಿಂದೆಯೇ ನಿರ್ದೇಶನ ನೀಡಿದ್ದರೂ, ಇಲ್ಲಿವರೆಗೆ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ ಎಂದು ಹೈಕೋರ್ಟ್‌ ಅಸಮಧಾನ ವ್ಯಕ್ತಪಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next