ಬೆಂಗಳೂರು: ಶಾಲೆ ನಡೆಸುತ್ತಿದ್ದ ಜಾಗವನ್ನು ತೆರವುಗೊಳಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗೆ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಕುರಿತು ಮಹಾಲಕ್ಷ್ಮೀ ಪುರಂನ ಮುನೇಶ್ವರ ಬ್ಲಾಕ್‌ನಲ್ಲಿರುವ ” ದ ಮದರ್ ಎಜುಕೇಶನಲ್’ ಟ್ರಸ್ಟ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, ಅರ್ಜಿದಾರ ಶಿಕ್ಷಣ ಸಂಸ್ಥೆಗೆ ತಹಶೀಲ್ದಾರ್ ನೀಡಿದ್ದ ನೋಟಿಸ್‌ಗೆ ಮುಂದಿನ ವಿಚಾರಣೆಯವರೆಗೂ ಮಧ್ಯಂತರ ತಡೆಯಾಜ್ಞೆ ನೀಡಿತು.
ಜೊತೆಗೆ ಪ್ರತಿವಾದಿಗಳಾದ ಎಸ್.ಶ್ರೀರಾಮುಲು ಹಾಗೂ ಎ. ರಮೇಶ್ ಎಂಬುವವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಕೀಲರು ವಾದಿಸಿ, ಶಿಕ್ಷಣ ಸಂಸ್ಥೆಯು 2001ರಿಂದ ಜಾಗವನ್ನು ಬಾಡಿಗೆ ಪಡೆದುಕೊಂಡ ಶಾಲೆಯನ್ನು ನಡೆಸುತ್ತಿದ್ದು, 600ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದಾರೆ.
ಪ್ರತಿವಾದಿಯೂ ಆಗಿರುವ ಶ್ರೀರಾಮಲು ಅವರಿಗೆ ಪ್ರತಿವರ್ಷ ಬಾಡಿಗೆ ಕೂಡ ನೀಡಲಾಗುತ್ತಿದೆ. ಆದರೆ, 2016ರಿಂದ ವಿನಾಕಾರಣ ಸಂಸ್ಥೆಗೆ ತೊಂದರೆ ಕೊಡುತ್ತಿದ್ದು, ಏಕಾಏಕಿ ಜಾಗ ತೆರವು ಮಾಡುವಂತೆ ಹೇಳುತ್ತಿದ್ದಾರೆ. ಹೀಗಾಗಿ ಅಧೀನ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೂಡ ಪಡೆದುಕೊಳ್ಳಲಾಗಿದೆ.
ಆದರೆ ಜಾಗದ ಮಾಲೀಕರು ವಿಶೇಷ ಜಿಲ್ಲಾಧಿಕಾರಿಗಳ ಮೂಲಕ ಎಸ್‌ಸಿ, ಎಸ್‌ಟಿ ಕಾಯಿದೆ ಅನ್ವಯ ಆದೇಶ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮುಂದಿನ 7 ದಿನಗಳಲ್ಲಿ ಜಾಗ ತೆರವುಗೊಳಿಸುವಂತೆ ನ. 30ರಂದು ನೋಟಿಸ್ ನೀಡಿದ್ದಾರೆ.
ಹಲವು ಬಾರಿ ಮಾತುಕತೆ ಬಳಿಕ ಡಿ. 30ರೊಳಗೆ ಜಾಗ ತೆರವು ಮಾಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ತೊಂದರೆಯಾಗಲಿದೆ. ಹೀಗಾಗಿ ತಡೆಯಾಜ್ಞೆ ನೀಡುವಂತೆ ನ್ಯಾಯಪೀಠಕ್ಕೆ ಕೋರಿದರು. ಈ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು.