ನೆಲಮಂಗಲ: ತಾಲೂಕಿನಲ್ಲಿ ಲಾಕ್‌ಡೌನ್ ಆದೇಶವಿದ್ದರೂ ನಿಯಮ ಪಾಲಿಸದೆ, ರಸ್ತೆಗೆ ಬಂದ 60ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ಕೆಲವು ಮುಖ್ಯರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
ನಗರದಲ್ಲಿ ಬೆಳಗ್ಗೆ ವೃತ್ತ ನಿರೀಕ್ಷಕ ಶಿವಣ್ಣ, ವಿರೇಂದ್ರ ಪ್ರಸಾದ್ ಹಾಗೂ ಎಸ್‌ಐ ಡಿ.ಆರ್. ಮಂಜುನಾಥ್, ಮೋಹನ್‌ಕುಮಾರ್ ನೇತೃತ್ವದಲ್ಲಿ ಬಸ್‌ನಿಲ್ದಾಣ, ದೊಡ್ಡಬಳ್ಳಾಪುರ ರಸ್ತೆ, ಕುಣಿಗಲ್ ಬೈಪಾಸ್, ಪೇಟೆಬೀದಿ, ಸೊಂಡೆಕೊಪ್ಪ ಬೈಪಾಸ್ ರಸ್ತೆಯಲ್ಲಿ ಬಂದ ವಾಹನ ಪರಿಶೀಲನೆ ನಡೆಸಿ, ಅನಾವಶ್ಯಕವಾಗಿ ಓಡಾಡುತ್ತಿದ್ದ 60ಕ್ಕೂ ಹೆಚ್ಚು ವಾಹನ ವಶಕ್ಕೆ ಪಡೆದಿದಿದ್ದಾರೆ.
ಹೈಅಲರ್ಟ್: ತಾಲೂಕಾದ್ಯಂತ ಲಾಕ್‌ಡೌನ್ ಆದೇಶ ಪಾಲನೆಯಾಗುತ್ತಿಲ್ಲ ಎಂಬ ವರದಿ ಪ್ರಕಟ ಮಾಡಿದ ಬೆನ್ನಲ್ಲೆ ಮೇಲಾಧಿಕಾರಿಗಳ ಆದೇಶದಂತೆ ಅನಾವಶ್ಯ ವಾಹನ ಸಂಚಾರ, ಅನುಮತಿಯಿಲ್ಲದೆ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಬ್ರೇಕ್ ಹಾಕಿದ್ದಾರೆ. ಲಾಕ್‌ಡೌನ್ ಆದೇಶದವರೆಗೂ ಹೈ ಅಲರ್ಟ್ ಘೋಷಣೆ ಮಾಡಿ, ಸುಮ್ಮನೆ ಓಡಾಟ ಮಾಡಿದರೆ ವಾಹನ ವಶಕ್ಕೆ ಪಡೆದು ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ಆದೇಶದಿಂದ ಬೇಸರವಾಗಿದೆ, ನಗರಸುತ್ತಿ ಬರೋಣ ಎಂದು ವಾಹನ ಬಂದರೆ ನಿಮ್ಮ ವಾಹನಗಳ ಜೊತೆ ದಾಖಲೆ ವಶಪಡಿಸಿಕೊಳ್ಳಲಿದ್ದಾರೆ. ಬೇರೆಯವರ ವಾಹನಗಳಲ್ಲಿ ನಗರ ಪ್ರವೇಶಿಸಿದರೆ ವಾಹನ ಮಾಲಿಕರ ವಿರುದ್ಧ ದೂರು ದಾಖಲು ಮಾಡಲಿದ್ದಾರೆ.
ಆಟಗಾರಿಗೆ ಲಾಠಿ ರುಚಿ: ಪಟ್ಟಣದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಾಕಿಂಗ್ ಹಾಗೂ ವಾಲಿಬಾಲ್ ಆಟವಾಡುತ್ತಿದ್ದ ಆಟಗಾರರಿಗೆ ತಹಶೀಲ್ದಾರ್ ಎಂ.ಶ್ರೀನಿವಾಸಯ್ಯ, ಡಿವೈಎಸ್‌ಪಿ ಮೋಹನ್‌ಕುಮಾರ್ ನೇತೃತ್ವದಲ್ಲಿ ಲಾಠಿರುಚಿ ತೋರಿಸಿ ಕೆಲವರನ್ನು ವಶಕ್ಕೆ ಪಡೆದುಕೊಂಡರೆ ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ತ್ಯಾಮಗೊಂಡ್ಲು ಪಿಎಸ್‌ಐ ಕೃಷ್ಣಕುಮಾರ್ 10ಕ್ಕೂ ಹೆಚ್ಚು ವಾಹನ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.