Advertisement

ನಕ್ಸಲ್‌ ಬೆದರಿಕೆ : ಕಾಸರಗೋಡು ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ

11:11 PM May 18, 2023 | Team Udayavani |

ಕಾಸರಗೋಡು: ಕೇರಳ – ಕರ್ನಾಟಕ ಗಡಿ ಪ್ರದೇಶವಾದ ಕಣ್ಣೂರು ಇರಿಟ್ಟಿ ಅಯ್ಯನ್‌ ಕುನ್ನಿಲ್‌ ಪ್ರದೇಶಕ್ಕೆ ನಕ್ಸಲರ ತಂಡ ಆಗಮಿಸಿ ಬೀಡುಬಿಟ್ಟಿರುವುದಾಗಿ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ.

Advertisement

ಅಯ್ಯನ್‌ ಕುನ್ನಿನ ವಾಣಿಮಪ್ಪಾರಕ್ಕೆ ಸಮೀಪದ ತುಡಿಮರಂ ನಿವಾಸಿ ಬೈಜು ಅವರ ಮನೆಗೆ ಐವರು ನಕ್ಸಲರಿದ್ದ ತಂಡವೊಂದು ಬಂದು, ಅಲ್ಲೇ ಆಹಾರ ತಯಾರಿಸಿ ಸೇವಿಸಿದ ಬಳಿಕ ರಾತ್ರಿ 10.15ಕ್ಕೆ ಮನೆಯಿಂದ ಅಕ್ಕಿ, ತೆಂಗಿನ ಕಾಯಿ, ಸೀಮೆ ಎಣ್ಣೆ ಇತ್ಯಾದಿಗಳನ್ನು ಸಂಗ್ರಹಿಸಿ ಮರಳಿದೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ.

ಬೈಜು ಮತ್ತು ಅವರ ತಾಯಿ ಚಂದ್ರಿಕಾ ಮಾತ್ರ ಆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಶಸ್ತ್ರಧಾರಿ ನಕ್ಸಲರ ತಂಡ ನಮ್ಮ ಮನೆಗೆ ಬಂದಿತ್ತು. ಪ್ರಾಣ ಭಯದಿಂದ ನಾವು ಆ ವಿಷಯವನ್ನು ಬಹಿರಂಗ ಪಡಿಸಿಲ್ಲವೆಂದು ಮನೆಯವರು ಪೊಲೀಸ್‌ ತನಿಖೆ ವೇಳೆ ಹೇಳಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕಣ್ಣೂರು ವಾಣಿಯಂಪಾರ ಕಳಿತ್ತಟ್ಟುಂಪಾರಕ್ಕೆ ನಕ್ಸಲರ ನೇತಾರ ಸಿ.ಪಿ. ಮೊದೀನ್‌ ಒಳಗೊಂಡ ತಂಡ ಆಗಮಿಸಿತ್ತು. ಆದಾದ ಬೆನ್ನಲ್ಲೇ ಮತ್ತೆ ನಕ್ಸಲರು ಈ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಾರವನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕಣ್ಣೂರು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಮಾತ್ರವಲ್ಲ, ಕಾಸರಗೋಡು ಜಿಲ್ಲೆಯ ಆದೂರು, ಬೇಡಗ, ಚೀಮೇನಿ, ಚಿತ್ತಾರಿಕ್ಕಲ್‌ ಮತ್ತು ರಾಜಪುರಂ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಟ್ಟ ಕೇರಳ-ಕರ್ನಾಟಕ ಗಡಿ ಅರಣ್ಯ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ಪಾಲಿಸುವಂತೆ ಆಯಾ ಪೊಲೀಸ್‌ ಠಾಣೆಗಳಿಗೆ ರಾಜ್ಯ ಪೊಲೀಸ್‌ ಇಲಾಖೆ ತುರ್ತು ನಿರ್ದೇಶ ನೀಡಿದೆ.

ಕಾಸರಗೋಡು ಜಿಲ್ಲೆಯ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲೂ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next