Advertisement

ಹೈ ಅಲರ್ಟ್‌: ಜಿಲ್ಲೆಯಲ್ಲಿ ಎಚ್ಚರಿಕೆ ಕ್ರಮ

04:36 PM Aug 18, 2019 | Team Udayavani |

ರಾಮನಗರ: ರಾಜ್ಯದಲ್ಲಿ ಉಗ್ರರ ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್‌ ಘೋಷಿಸಿದ್ದು, ಜಿಲ್ಲಾ ಕೇಂದ್ರ ರಾಮನಗರದಲ್ಲಿಯೂ ಪೊಲೀಸರು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿದೆ.

Advertisement

ನಗರದ ರೈಲು ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್‌ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಕಣ್ಗಾವಲು ವಹಿಸಿದ್ದಾರೆ. ಇದಲ್ಲದೇ ಜನನಿಬಿಡ ಪ್ರದೇಶಗಳಲ್ಲಿಯೂ ಪೊಲೀಸ್‌ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.

ರೈಲು ನಿಲ್ದಾಣದಲ್ಲಿ ತುಕಡಿ ನಿಯೋಜನೆ: ರೈಲು ನಿಲ್ದಾಣದ ಆವರಣದಲ್ಲಿ ಜಿಲ್ಲಾ ಪೊಲೀಸ್‌ ಪಡೆಯ ಒಂದು ತುಕಡಿ ನಿಯೋಜನೆ ಆಗಿದೆ. ರೈಲು ನಿಲ್ದಾಣದ ಒಳಗೆ ನಗರ ಪೊಲೀಸ್‌ ಠಾಣೆಯ ಮೂವರು ಪೊಲೀಸರು, ರೈಲ್ವೆ ಪೊಲೀಸ್‌ನ ಮೂವರು ಹಾಗೂ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ನ ಎಎಸ್‌ಐ ಗಸ್ತುವಹಿಸಿದ್ದಾರೆ.

ಅನುಮಾನಸ್ಪದ ವ್ಯಕ್ತಿಗಳು, ವಸ್ತುಗಳು ಕಂಡರೆ ತಿಳಿಸಿ: ಈ ವೇಳೆ ಪತ್ರಿಕೆಯೊಂದಿಗೆ ಮಂಡ್ಯ ವಿಭಾಗದ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ನ ಎ.ಎಸ್‌. ಐ ಪರಮೇಶ್‌ ಮಾತನಾಡಿ, ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಣೆಯಾಗಿರುವುದರಿಂದ ಹೆಚ್ಚುವರಿ ಪೊಲೀಸರನ್ನು ರೈಲು ನಿಲ್ದಾಣದಲ್ಲಿ ನಿಯೋಜಿಸಲಾಗಿದೆ. ಅಲ್ಲದೆ, ರೈಲ್ವೆ ಪೊಲೀಸರು ಸಹ ಹೆಚ್ಚಿನ ನಿಗಾ ವಹಿಸಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳು, ವಸ್ತುಗಳು ಕಂಡು ಬಂದರೆ ಪ್ರಯಾಣಿಕರು ತಕ್ಷಣ ಪೊಲೀಸರ ಗಮನ ಸೆಳೆಯಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಶ್ವಾನ ದಳದಿಂದ ಪರಿಶೀಲನೆ: ನಗರದ ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಜಿಲ್ಲಾ ಪೊಲೀಸ್‌ನ ಬಾಂಬ್‌ ಪತ್ತೆ ದಳ ಮತ್ತು ಶ್ವಾನ ದಳ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರಭಾವಿಗಳ ಕೊಲೆಗೆ ಸಂಚು: 2018ರ ಆಗಸ್ಟ್‌ನಲ್ಲಿ ಜೆ.ಎಂ.ಇ ಉಗ್ರ ಮುನೀರ್‌ ಶೇಖ್‌ನನ್ನು ರಾಷ್ಟ್ರೀಯ ತಿನಿಖಾ ದಳದ ಅಧಿಕಾರಿಗಳು ರಾಮನಗರದಲ್ಲಿ ಬಂಧಿಸಿದ್ದರು. ಸೈಕಲ್ ಮೇಲೆ ಬಟ್ಟೆ ವ್ಯಾಪಾರ ಮಾಡಿಕೊಂಡು ರಾಮನಗರದ ಕೊತ್ತಿಪುರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆಗಾಗ್ಗೆ ಬೆಂಗಳೂರಿಗೂ ಹೋಗಿ ಬರುತ್ತಿದ್ದ. ರಾಮನಗರದಲ್ಲಿ ಇದ್ದುಕೊಂಡೇ ರಾಷ್ಟ್ರದ ಪ್ರಭಾವಿ ವ್ಯಕ್ತಿಗಳನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಎಂಬ ಆರೋಪ ಆತನ ಮೇಲಿದೆ.

ಎನ್‌ಐಎ ಅಧಿಕಾರಿಗಳು ಮುನೀರನನ್ನು ವಶಕ್ಕೆ ಪಡೆದುಕೊಂಡಿದ್ದರು. ಆಗ ಆತನೊಂದಿಗೆ ಇದ್ದ ಆತನ ಪತ್ನಿ ಮತ್ತು ಹತ್ತಿರದ ಸಂಬಂಧಿ ಹಬೀಬುಲ್ಲಾ ಪರಾರಿಯಾಗಿದ್ದರು. ಪರಾರಿಯಗುವ ವೇಳೆ ಹಬೀಬುಲ್ಲಾ ತನ್ನ ಬಳಿ ಇದ್ದ ಬಾಂಬ್‌ಗಳನ್ನು ಮತ್ತು ಕಚ್ಚಾ ವಸ್ತುಗಳನ್ನು ಪೊದೆಯಲ್ಲಿ ಎಸೆದು ಪಕ್ಕದಲ್ಲೇ ಇರುವ ರೈಲು ನಿಲ್ದಾಣದ ಮೂಲಕ ಪರಾರಿಯಗಿದ್ದ. ಜೂನ್‌ 26ರಂದು ಹಬೀಬುಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿದ್ದ. ಆತ ನೀಡಿದ ಸುಳಿವಿನ ಮೇರೆಗೆ ಎನ್‌ಐಎ ಅಧಿಕಾರಿಗಳು ಯಾರಬ್‌ನಗರಕ್ಕೆ ಭೇಟಿ ಕೊಟ್ಟು ಎರಡು ಸ್ಫೋಟಕಗಳನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದರು.

ವಿಶೇಷ ಎಚ್ಚರಿಕೆಗೆ ನಾಗರಿಕರ ಒತ್ತಾಯ: ಈ ಪ್ರಕರಣಗಳು ರಾಮನಗರ ಜಿಲ್ಲೆಯನ್ನು ಸ್ಲೀಪರ್‌ ಸೆಲ್ಗಳಿಗ ಸರಕ್ಷಿತ ತಾಣ ಎಂಬ ಕುಖ್ಯಾತಿಗೆ ಕಾರಣವಾಗಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗಳ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಗಸ್ತು ಹೆಚ್ಚಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next