1971ರ ಯುದ್ಧ ವೇಳೆ ನಮ್ಮ ಟ್ರೂಪ್‌ನಲ್ಲಿ 40 ಮಂದಿ ಇದ್ದೆವು. ಎಲ್ಲರೂ ಒಂದೇ ತಾಯಿಯ ಮಕ್ಕಳ ರೀತಿಯಲ್ಲಿ ಅನ್ಯೋನ್ಯವಾಗಿದ್ದೆವು. ಬಾಂಗ್ಲಾ ವಿಮೋಚನೆಗಾಗಿ ನಡೆದ ಆ ಯುದ್ಧದಲ್ಲಿ ಮೇಜರ್ ಮಲ್ಲಿಕ್ ಮತ್ತು ಆಂಧ್ರ ಪ್ರದೇಶದ ಕೆ. ರೆಡ್ಡಿ ಸೇರಿದಂತೆ ನಾಲ್ವರು ಬಾಂಬ್ ದಾಳಿ ಯಲ್ಲಿ ಸಾವನ್ನಪ್ಪಿದರು. ಇದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಕಣ್ಣಲ್ಲಿ ನೀರು ಬರುತ್ತೆ.
ಯುದ್ಧದ ದಿನಗಳಲ್ಲಿ ನಾನು ಜಮ್ಮು-ಕಾಶ್ಮೀರದ ಸಾಂಬಾ ಸೆಕ್ಟರ್‌ನಲ್ಲಿ ಎಂಜಿನಿಯರಿಂಗ್ ಟ್ರೂಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಸೇನೆಯ ಕರೆಯ ಹಿನ್ನೆಲೆಯಲ್ಲಿ ಕೂಡಲೇ ನಾವು ಪಠಾಣ್‌ಕೋಟ್ ಮೂಲಕ ಪಾಕ್ ಗಡಿಯತ್ತ ಮುಖ ಮಾಡಿದೆವು. ಪಠಾಣ್‌ಕೋಟ್‌ನಲ್ಲಿ ಹೆಣ್ಣು ಮಕ್ಕಳು ಬಂದು “ಸಹೋದರರೆ ನೀವು ಗೆದ್ದು ಬನ್ನಿ “ಎಂದು ಹೇಳಿ ಹರಸಿ ಕಳುಹಿಸಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ.
ನಮ್ಮದು ಎಂಜಿನಿಯರಿಂಗ್ ಟ್ರೂಪ್ ಆದ ಹಿನ್ನೆಲೆಯಲ್ಲಿ ನದಿಗಳು ಅಡ್ಡಬಂದರೆ ಕ್ಷಣ ಮಾತ್ರದಲ್ಲಿ ಸೇತುವೆ ಗಳನ್ನು ನಿರ್ಮಾಣ ಮಾಡಿ ಯೋಧರು ಮುಂದೆ ಸಾಗಲು ಅನುವು ಮಾಡಿಕೊಡು ತ್ತಿದ್ದೆವು. ಬೆಟ್ಟ ಗುಡ್ಡಗಳನ್ನು ಏರುವಾಗ ಅಡೆತಡೆಗಳು ಉಂಟಾಗ ದಂತೆ ನೋಡಿಕೊಳ್ಳುತ್ತಿದ್ದೆವು. ಯುದ್ಧ ಘೋಷಣೆ ಮೊದಲು ಪಾಕ್ ಸೈನಿಕರು ಬಾಂಬ್ ದಾಳಿ ನಡೆಸಲಿಲ್ಲ. ಆದರೆ ಯುದ್ಧ ಘೋಷಣೆ ಆಗುತ್ತಿದ್ದಂತೆ ಗುಂಯ್ ಗುಂಯ್ ಎಂದು ಶಬ್ದ ಮಾಡುತ್ತ ಬಾಂಬ್‌ಗಳು ಸಿಡಿಯುತ್ತಿದ್ದವು. ಹಾಗಾಗಿ 24 ಗಂಟೆಯೂ ಕೂಡ ನಾವು ಎಚ್ಚರದಿಂದಲೇ ಇರುತ್ತಿದ್ದೆವು.
ಒಂದ್ ಒಂದ್ ಸಲ ಊಟ, ನೀರು ಏನೇನೂ ಸಿಗಲ್ಲ: ಒಂದು ಸಲ ಯುದ್ಧ ಪ್ರಾರಂಭವಾಯ್ತು ಅಂದ್ಮೇಲೆ ಪರಿಸ್ಥಿತಿ ಹೀಗೆ ಇರುತ್ತೇ ಎಂದು ಹೇಳಲಾಗುವುದಿಲ್ಲ. ಒಂದ್ ಒಂದ್ ಸಲ ಊಟ, ನೀರು ಸೇರಿದಂತೆ ಏನೇನೂ ಸಿಗುವುದಿಲ್ಲ. ಯುದ್ಧಾಂಗಳದಲ್ಲಿ ಇದ್ದವರಿಗೆ ಊಟ ಬೇಕೆನಿಸುವುದಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ಕೆಲವು ಸಲ ಸೇನೆಗೂ ಕೂಡ ಊಟ, ನೀರನ್ನು ಸಕಾಲಕ್ಕೆ ಕಳುಹಿಸಿಕೊಡಲು ಆಗುವುದಿಲ್ಲ. ಹೀಗಾಗಿ ಯುದ್ಧದ ದಿನಗಳಲ್ಲಿ ಊಟ, ನೀರು ಸೇರಿದಂತೆ ಅಗತ್ಯ ವಸ್ತುಗಳು ಸಿಗದೇ ದಿನ ಕಳೆದಿದ್ದು ಕೂಡ ಇದೆ. ಯೋಧರಿಗೆ ಎದುರಾಳಿ ಸೋಲಿಸುವುದಷ್ಟೇ ಗುರಿಯಾಗಿರುತ್ತದೆ.
ಬಿಸಿಬಿಸಿ ಅನ್ನ ಹಾಗೆಯೇ ಇತ್ತು: ನನಗೆ ಪಾಕಿಸ್ಥಾನದ ಪ್ರದೇಶಗಳ ಹೆಸರ ಬಗ್ಗೆ ನೆನಪಿಲ್ಲ. ಆದರೆ ಭಾರತ ಸೇನೆ ಪಾಕಿಸ್ಥಾನದ ಗಡಿ ನುಗ್ಗಿ ಹೋಗುತ್ತಿದ್ದಂತೆ ಪಾಕ್ ಸೈನಿಕರು ಸ್ಥಳದಿಂದ ಓಡಿ ಹೋಗಿದ್ದರು.ಅವರು ಇದ್ದ ಪ್ರವೇಶ ದಲ್ಲಿ ಬಿಸಿ, ಬಿಸಿ ಅನ್ನ ಹಾಗೆಯೇ ಇತ್ತು ಆ ಸ್ಥಳದ ದೃಶ್ಯಗಳು ಇವತ್ತಿಗೂ ಕಣ್ಮುಂದೆ ಹಾಗೆಯೇ ಇದೆ. ಭಾರತ ಮತ್ತು ಪಾಕಿಸ್ಥಾನ ಕದನ ವಿರಾಮ ಘೋಷಣೆ ಮಾಡಿದಾಗಲೂ ಸುಮಾರು ಇಪ್ಪತು ದಿನ ಪಾಕ್ ಗಡಿ ಪ್ರದೇಶದಲ್ಲಿ ಇದ್ದೆವು.
ನಿರೂಪಣೆ: ದೇವೇಶ ಸೂರಗುಪ್ಪ