ಕಲಬುರಗಿ: ಸರ್ವಜ್ಞನ ವಚನಗಳಲ್ಲಿ ವಾಸ್ತವ ಬದುಕಿನ ಸಮಗ್ರ ಚಿತ್ರಣ ಅಡಗಿದೆ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದರು.
ನಗರದ ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಸರ್ವಜ್ಞ ಚಿಣ್ಣರ ಲೋಕದಲ್ಲಿ ಸರ್ವಜ್ಞ ಜಯಂತಿ ಆಚರಣೆ ಅಂಗವಾಗಿ “ಸರ್ವಜ್ಞ ವಚನಗಳು ಮತ್ತು ವ್ಯಕ್ತಿತ್ವ ವಿಕಸನ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಕ್ಷಣ ಸ್ಪರ್ಧೆಯಲ್ಲಿರಬೇಕಾಗಿದೆ. ಆದರೆ, ಕೇವಲ ಅಂಕಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವುದು ಅಸಾಧ್ಯ. ವಾಸ್ತವ ಬದುಕಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಬದುಕು ಎಂದರೆ ಸಮಾಜದಲ್ಲಿನ ಜನರ ನೋವು-ನಲಿವು, ಹಸಿವು, ಬೆವರಿನ ಹನಿ, ಸ್ತ್ರೀಯ ಆಕ್ರಂದನ ಅರಿಯಬೇಕು. ಸರ್ವಜ್ಞನ ವಚನಗಳಲ್ಲಿ ವಾಸ್ತವ ಬದುಕಿನ ಸಮಗ್ರ ಚಿತ್ರಣವನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಎಲ್ಲರೂ ಕಾನೂನು ಅರಿತುಕೊಳ್ಳಬೇಕು. ಬದುಕಿನುದ್ದಕ್ಕೂ ಕಾನೂನಿನ ಚೌಕಟ್ಟಿಗೆ ನಾವು ಒಳಗಾಗುತ್ತೇವೆ. ಹಾಗಾಗಿ ಹಲವಾರು ಕಾಯ್ದೆಗಳ ಚೌಕಟ್ಟಿನಲ್ಲಿ ನಾವು ನಮ್ಮ ಕೆಲಸ ಕಾರ್ಯ ಮಾಡಿ ಸಮಾಜದಲ್ಲಿ ಘನತೆ ಗೌರವದಿಂದ ಬದುಕಬೇಕು. ಸಾಮಾಜಿಕ ಸ್ವಾಸ್ಥ್ಯಕಾಪಾಡಿ ದೇಶವನ್ನು
ಪ್ರಗತಿ ಹಾದಿಯಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.
ಸಾಹಿತಿ ರಂಜಾನ ದರ್ಗಾ ಮಾತನಾಡಿ, ವಿದ್ಯಾರ್ಥಿಗಳು ಎಲ್ಲರಿಂದಲೂ ಕಲಿತು ಸರ್ವಜ್ಞನಂತೆ ಶ್ರೇಷ್ಠ ಮೇಧಾವಿಯಾಗಬೇಕು ಎಂದು ಹೇಳಿದರು. ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್ ಉಪಾಧ್ಯಕ್ಷ ನಿವೃತ್ತ ನ್ಯಾಯಾಧೀಶ ಎಸ್.ಎಂ. ರೆಡ್ಡಿ, ಸಂಸ್ಥೆ ಸಂಸ್ಥಾಪಕ ಪ್ರೊ| ಚನ್ನಾರಡ್ಡಿ ಪಾಟೀಲ, ನಿವೃತ್ತ ನ್ಯಾಯಾಧೀಶ ಎನ್. ಶರಣಪ್ಪ, ಪ್ರೊ| ಎಸ್.ಎಲ್. ಪಾಟೀಲ, ಎಂ.ಸಿ. ಕಿರೇದಳ್ಳಿ, ಪ್ರಶಾಂತ ಕುಲಕರ್ಣಿ, ಪೃಥ್ವಿರಾಜಗೌಡ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಡಾ| ಸಂತೋಷಕುಮಾರ ಸ್ವಾಗತಿಸಿದರು. ಗಂಗಾಧರ ಬಡಿಗೇರ ನಿರೂಪಿಸಿದರು. ಸ್ನೇಹಾ ಕುಲಕರ್ಣಿ ಪ್ರಾರ್ಥಿಸಿದರು.