ಪಕ್ಷಿಗಳು ಕುಳಿತುಕೊಳ್ಳುವ ಸ್ಥಳಕ್ಕೆ ತುಂಬಾ ಸಮೀಪದಲ್ಲಿಯೇ ಕ್ಯಾಮರ ಇಟ್ಟು ಕ್ಲಿಕ್ ಮಾಡುವುದೇ ಹೈಡ್ ಫೋಟೋಗ್ರಫಿ. ಕೋಸ್ಟಾರಿಕಾ, ಇಕ್ವೆಡಾರ್, ಪೆರು, ಆಫ್ರಿಕಾ, ಯೂರೋಪಿನ ಹಲವಾರು ದೇಶಗಳಲ್ಲಿ ಇದು ಸರ್ಕಾರಕ್ಕೆ ಆದಾಯ ತಂದುಕೊಡುವ ಉದ್ಯಮ. ಆದರೆ ನಮ್ಮಲ್ಲಿ ಕಾಡು ಎಂದರೆ ಹುಲಿ, ಚಿರತೆ, ಆನೆಗೆ ಮಾತ್ರ ಸೀಮಿತವಾಗಿ ಪಕ್ಷಿಗಳನ್ನು ಮರೆತೇ ಹೋಗಿದ್ದೇವೆ.
ಹಾಗಾದರೆ, ಹೈಡ್ ಫೋಟೋಗ್ರಫಿ ಎಂದರೆ ಏನು, ಹೇಗೆ ಮಾಡುವುದು, ಇದರಿಂದ ಲಾಭ ಏನು ಎನ್ನುವುದರ ಬಗ್ಗೆ ನಮ್ಮ ದೇಶದಲ್ಲಿ ಹೈಡ್ ಫೋಟೋಗ್ರಫಿಯನ್ನು ವೃತ್ತಿಪರವಾಗಿ ಪರಿಚಯಿಸಿದ, ನಾನೂರಕ್ಕೂ ಹೆಚ್ಚು ಪಕ್ಷಿಗಳ ಜಾತಕವನ್ನು ತಲೆಯಲ್ಲಿ ಇಟ್ಟುಕೊಂಡಿರುವ ಛಾಯಚಿತ್ರ ಜಗತ್ತಿನ ಹೆಸರಾಂತ ಬರ್ಡ್‌ಫೋಟೋಗ್ರಾಫರ್ ಸತೀಶ್ ಸಾರಕ್ಕಿ ಇಲ್ಲಿ ಬರೆದಿದ್ದಾರೆ. ಇವರು ತೆಗೆದ ಚಿತ್ರಗಳನ್ನು ನೋಡುವುದೂ,
ಸೀರೆ ಅಂಗಡಿಗಳಲ್ಲಿ ಸೀರೆಗಳ ಆಯ್ಕೆ ಮಾಡುವುದೂ ಎರಡೂ ಒಂದೇ. ಅಷ್ಟೊಂದು ಗೊಂದಲ ಮೂಡಿಸುವಷ್ಟು ಚೆಂದವಾಗಿರುತ್ತದೆ. ತಿಳಿ ಮುಗಿಲ ತೊಟ್ಟಿಲು. ಮಲಗಲು ಸಿದ್ಧವಾದ ಚಂದಿರ. ಕೆಳಗೆ ತದೇಕವಾಗಿ ಬೆಳೆದು ನಿಂತ ಬೂರಗ. ಅದರ ರಂಬೆಯ ಮೇಲೆ ಕುಳಿತುಕೊಳ್ಳಲು ಗಿಳಿಯೊಂದು ಹವಣಿಸುತ್ತಿದೆ. ಕಣ್ಣಂಚಲ್ಲೇ ಅಕ್ಕಪಕ್ಕ ಯಾರಾದರೂ ಇದ್ದಾರ ಅಂತ ನೋಡುತ್ತಿದೆ. ಯಾರೂ ಕಾಣಲಿಲ್ಲ. ಗರಿಗಳನ್ನು ರಪ ರಪ ಹೊಡೆಯುತ್ತಲೇ ಹಾರಿತು..
ಗರಿಗಳಿಗೆ ಸಿಂಪಡಣೆ ಆಗುತ್ತಿದ್ದ ಸೂರ್ಯನ ಕಿರಣಗಳು ಹಾಗೇ ಮುಂದುವರಿದು ಕೊಕ್ಕಿನ ಮೇಲೆ ಬಿದ್ದಾಗ ಅದು ಹಳದಿಯಾಯಿತು, ಮುಖದ ಕಡೆ ಹರಿದಾಗ ಕೆಂಪು, ಎದೆಭಾಗ ಪೂರ್ತಿ ಹಳದಿ ಮಿಶ್ರಿತ ಹಸಿರಾಗಿ, ಬಾಲ ನೀಲಿಯಾಯಿತು. ಹೀರೋ ಮೇಲಕ್ಕೆ ಹಾರಿ ಎರಡೂ ಕಾಲುಗಳಿಂದ ಖಳನಾಯಕನನ್ನು ಒದೆಯುವಂತೆ.. ಗಿಡದ ಮೇಲೆ ಎರಡೂ ಕಾಲುಗಳನ್ನು ಊರಿದಾಗ…
ಕ್ಲಿಕ್ ಕ್ಲಿಕ್…: ಹಾಗೇ ಸ್ವಲ್ಪ ಹೊತ್ತು ಕೂತಿದ್ದು, ಮತ್ತೆ ಎರಡೂ ಕಾಲುಗಳನ್ನು ಮೀಟಿ ಹಾರಲು ಏರುವಾಗ ಗಿಳಿಯ ಬೆನ್ನ ಭಾಗದ ಮೇಲೆ ಸೂರ್ಯನ ರಶ್ಮಿ ಓಡಾಡತೊಡಗಿದಾಗ…
ಮತ್ತೂಮ್ಮೆ ಕ್ಲಿಕ್ ಕ್ಲಿಕ್..: ಗಿಡದಿಂದ 100 ಮೀಟರ್ ದೂರದಲ್ಲಿ ಕುಳಿತಿದ್ದ ನಮ್ಮ ಕ್ಯಾಮರದಲ್ಲಿ ಗಿಳಿಯ ಲೀಲೆಗಳೆಲ್ಲವೂ ದಾಖಲಾದವು. ಈಗ ಈ ಫೋಟೋಗಳನ್ನು ನೋಡಿದವರೆಲ್ಲಾ… ಅರೆ, ನೀವೇನು ಗಿಳಿಗ್ ಕ್ಯಾಮೆರ ಇಟ್ಟಿದ್ದೀರಾ, ಇಲ್ಲವೇ ಗಿಳಿಯನ್ನು ನೀವೇ ಸಾಕಿದ್ದೀರಾ… ಅಷ್ಟು ಹತ್ತಿರದಿಂದ ಅದು ಹೇಗೆ ಶೂಟ್ ಮಾಡಿದ್ರೀ… ಅಂತ ಕೇಳುತ್ತಲೇ ಇದ್ದರು.
ಇವೆಲ್ಲಾ ಹೈಡ್ ಫೋಟೋಗ್ರಫಿಯಿಂದ ಸಾಧ್ಯ. ಸಾಮಾನ್ಯವಾಗಿ ಹಕ್ಕಿಯ ಇರುವಿಕೆಯ ಅಂತರಕ್ಕೆ ಲೆನ್ಸ್ ಅನ್ನು ಫಿಕ್ಸ್ ಮಾಡಿ ಫೋಟೋಗಳನ್ನು ತೆಗೆಯುತ್ತೇವೆ. ಹೈಡ್ ಫೋಟೋಗ್ರಫಿಯಲ್ಲಿ ಈ ಮೊದಲೇ ಪರಿಸರ, ಹಕ್ಕಿಯ ಇರುವಿಕೆಯ ಅಂತರ, ಹಕ್ಕಿ ಬಂದು ಕುಳಿತುಕೊಳ್ಳುವ ಜಾಗ, ಅದರ ಬ್ಯಾಕ್‌ಗ್ರೌಂಡ್, ಲೈಟಿಂಗ್ ಎಲ್ಲವೂ ಫೋಟೋಗ್ರಾಫರ್‌ಗೆ ತಿಳಿದಿರುವುದರಿಂದ ಆತ ಅದಕ್ಕೆ ತಕ್ಕುದಾದ ಕ್ಯಾಮರ, ಲೆನ್ಸ್‌ಗಳನ್ನು ಸಿದ್ಧ ಮಾಡಿಕೊಳ್ಳಬಹುದು.
ಇದುವೇ ಹೈಡ್ ಫೋಟೋಗ್ರಫಿಯ ಪ್ಲಸ್ ಪಾಯಿಂಟ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹೈಡ್‌ಫೋಟೋಗ್ರಫಿ ಬಹುಜನಪ್ರಿಯ; ಸರ್ಕಾರಕ್ಕೆ ಆದಾಯ ತರುವ ಹಾದಿ. ಕೋಸ್ಟಾರಿಕಾ, ಇಕ್ವೆಡಾರ್, ಪೆರು, ಆಫ್ರಿಕಾ, ಯೂರೋಪಿನ ಹಲವಾರು ದೇಶಗಳಲ್ಲಿ ಹೈಡ್ ಫೋಟೋಗ್ರಫಿ ಜನಪ್ರಿಯ. ಸಾವಿರಕ್ಕಿಂತ ಕಡಿಮೆ ಪ್ರಭೇದದ ಪಕ್ಷಿಗಳನ್ನು ಹೊಂದಿರುವ ಕೋಸ್ಟಾರಿಕಾ ದೇಶ ಜಗತ್ತಿನ ಪಕ್ಷಿ ಪ್ರೇಮಿಗಳ ಸ್ವರ್ಗವೇ ಆಗಿ ಹೋಗಿದೆ. ಆದರೆ 1,266 ಪಕ್ಷಿ ಪಬೇಧಗಳನ್ನು ಹೊಂದಿರುವ ನಮ್ಮಲ್ಲಿ ಮಾತ್ರ ಹೈಡ್ ಫೋಟೋ ಗ್ರಫಿ ಇನ್ನೂ ಹೈಡ್‌ಆಗಿಯೇ ಕುಳಿತಿದೆ.
ಹೈಡ್ ಫೋಟೋಗ್ರಫಿ ಮಾಡೋದು ಹೇಗೆ?: ನಮ್ಮ ದೇಶದಲ್ಲಿ ಪಕ್ಷಿಗಳ ಫೋಟೋಗ್ರಫಿ ಮಾಡಲು ದೇಶ, ವಿದೇಶಗಳಿಂದ ಛಾಯಾಗ್ರಾಹಕರು ಬರುತ್ತಾರೆ. ಅವರಿಗೆ ನಿರೀಕ್ಷಿಸಿದಷ್ಟು ತೃಪ್ತಿ ಸಿಗುವುದಿಲ್ಲ ಎಂಬ ಮಾತು ಆರೋಪದಂತೆ ಕೇಳುತ್ತಿದೆ. ಅದೇಕೋ, ಹುಲಿ, ಸಿಂಹ, ಚಿರತೆಗೆ ಕೊಡುವಷ್ಟು ಪ್ರಾಮುಖ್ಯತೆ ಪಕ್ಷಿಗಳಿಗಿಲ್ಲ. ಕೊಟ್ಟರೆ ಹೈಡ್ ಫೋಟೋಗ್ರಫಿಯನ್ನು ಉತ್ತುಂಗಕ್ಕೆ ಏರಿಸಬಹುದು. ನಮ್ಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿಗಳಿಂದ ಯಾವ ರೀತಿ ಆದಾಯ ಬರುತ್ತದೆಯೋ, ಅದೇ ರೀತಿ ಸರ್ಕಾರಕ್ಕೂ ಇದರಿಂದ ಹೆಚ್ಚಿನ ಲಾಭವಾಗುವುದರಲ್ಲಂತೂ ಅನುಮಾನವಿಲ್ಲ. ಏಕೆಂದರೆ, ಹುಲಿ, ಚಿರತೆ ಫೋಟೋಗ್ರಫಿಗಿಂತ ಹೆಚ್ಚು ಬರ್ಡ್ ಫೋಟೋಗ್ರಫಿ ನಡೆಯುತ್ತಿದೆ.
ಹೈಡ್‌ನಿಂದ ಲಾಭ ಏನು?: ನೀವು ಯಾರನ್ನಾದರೂ ಕಾಡು ಅಂದರೆ ಏನು ಅಂತ ಕೇಳಿ? ಅವರ ಬಾಯಲ್ಲಿ ಹುಲಿ, ಸಿಂಹ, ಚಿರತೆ, ಆನೆ, ಕರಡಿ ಅಂತೆಲ್ಲಾ ಉತ್ತರ ಬರುತ್ತದೆಯೇ ಹೊರತು ಒಂದೇ ಒಂದು ಪಕ್ಷಿಯ ಹೆಸರು ಹೊರಡುವುದಿಲ್ಲ. ಕಾಡು ಅಂದರೆ ಇಷ್ಟೇನಾ? ನಿಜ ಹೇಳಬೇಕಾದರೆ, ಕಾಡು ಕಾಡಾಗಿರಬೇಕಾದರೆ ಇತರೆ ಪ್ರಾಣಿಗಳಷ್ಟೇ ಪಕ್ಷಿಗಳೂ ಮುಖ್ಯ. ಕಾಡಲ್ಲಿ ಮರಗಳು, ಗಿಡಗಳು ಇರಬೇಕಾದರೆ ಪರಾಗಸ್ಪರ್ಶ ಕ್ರಿಯೆ ನಡೆಯಬೇಕು. ಕೀಟಗಳಿಂದಲೂ, ಪಕ್ಷಿಗಳಿಂದಲೂ ಈ ಪ್ರಕ್ರಿಯೆ ನಡೆಯುವುದರಿಂದ ಕಾಡನ್ನು ಉಳಿಸುವ ಮಾತು ಬಂದಾಗೆಲ್ಲಾ ಪಕ್ಷಿಗಳ ಪಾತ್ರವೇ ಅನನ್ಯವಾಗುತ್ತದೆ.
ಭಗವಂತನ ಸೃಷ್ಟಿಯಲ್ಲಿ ಮನುಷ್ಯನಂತೆ ಪಕ್ಷಿಗಳೂ ಕೂಡ. ಪಕ್ಷಿಗಳ ಬಣ್ಣ ವೈವಿಧ್ಯತೆಗಳು ಕಾಮನ ಬಿಲ್ಲನ್ನು ಮೀರಿಸಿಬಿಡುತ್ತವೆ. ಇದನ್ನು ಸೆರೆ ಹಿಡಿಯುವುದು ಸುಖಾಸುಮ್ಮನೆಯ ಆಗುವಂತದ್ದಲ್ಲ. ಹಲವಾರು ಚಾಲೆಂಜ್‌ಗಳನ್ನು ಮೀರಬೇಕು. ಮೊದಲು ಹಕ್ಕಿಗಳ ಗೆಳೆತನ ಗಳಿಸಬೇಕು. ಇದೂ ಕೂಡ ರಾತ್ರಿ ಬೆಳಗಾಗುವುದರಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ಸಲುಗೆ ( ಸಲುಗೆ ಅಂದರೆ ನನ್ನಿಂದ ನಿಮಗೆ ತೊಂದರೆ ಇಲ್ಲ ಅನ್ನೋದನ್ನು ಮನದಟ್ಟು ಮಾಡುವುದು) ಬೆಳೆಸಿಕೊಂಡಷ್ಟೂ ಪಕ್ಷಿಗಳು ತಮ್ಮ ಬದುಕನ್ನು ಅನಾವರಣಗೊಳಿಸುತ್ತಾ ಹೋಗುತ್ತವೆ. ಇವೆಲ್ಲವೂ ಸಾಧ್ಯವಾಗುವುದು ಹೈಡ್ ಫೋಟೋಗ್ರಫಿಯಿಂದ ಮಾತ್ರ.
ಆರಂಭದಲ್ಲಿ ನಾನು ಮತ್ತು ನನ್ನ ಗೆಳೆಯ ಶ್ರೀನಿವಾಸ್ ಕ್ಯಾಮರಾ ಹಿಡಿದು ಹೋದಾಗೆಲ್ಲ ಹಕ್ಕಿಗಳು ಪುರ್ರನೆ ಹಾರಿ ಹೋಗಿಬಿಡುತ್ತಿದ್ದವು. ಓಡುವ ನೀರನ್ನು ನಡೆಯುವ ಹಾಗೇ ಮಾಡಬಹುದು. ಹಾರೋ ಹಕ್ಕೀನ ನಿಲ್ಲಿಸೋದು ಹೇಗಪ್ಪಾ ಅಂದಾಗ ಹೊಳೆದದ್ದೇ ಈ ಹೈಡಾಯಣ. ಹೈಡ್ ಅಂದರೆ ಎಲ್ಲಿಂದಲೋ ಪರಿಕರಗಳನ್ನು ತಂದು ಗುಡ್ಡೆ ಹಾಕಿ, ಕಂಫರ್ಟಾಗಿರೋ ರೀತಿ ಹೈಡ್ ನಿರ್ಮಿಸೋದು ಅಲ್ಲ. ಪಕ್ಷಿಗಳ ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ, ಅದರ ಕಂಫರ್ಟ್ ಆಗಿರುವಂತೆ ಹೈಡ್ ನಿರ್ಮಿಸಬೇಕು. ಅದು ಹೇಗೆ ಅಂತೀರ?
ಇತ್ತೀಚೆಗಷ್ಟೇ ಹೊಸನಗರದ ಗದ್ದೆಯೊಂದರಲ್ಲಿ ಗುಂಪು ಗುಂಪಾಗಿ ಗಿಳಿಗಳು ಬಂದಿದ್ದವು. ಗದ್ದೆಯ ಪಕ್ಕದಲ್ಲಿ ತೆಂಗಿನ ಮರಗಳಿದ್ದವು. ಅವುಗಳನ್ನೇ ಬಳಸಿ ಸಣ್ಣ ಗುಡಿಸಲು ಹಾಕಿ, ಫೋಟೋಗ್ರಫಿ ಮಾಡಿದೆವು. ಅಂದರೆ ಪರಕೀಯ ವಸ್ತುಗಳನ್ನು ತಂದು ಹೈಡ್ ಮಾಡುವುದಿಲ್ಲ. ಸ್ಥಳೀಯ ವಸ್ತುಗಳನ್ನು ಬಳಸಿ, ಹಕ್ಕಿಗೆ ಯಾವುದೇ ಗೊಂದಲ ಆಗದಂತೆ ಹೈಡ್ ಮಾಡಬೇಕಾಗುತ್ತದೆ. ಹೆಚ್ಚಾಗಿ ಪಕ್ಷಿಗಳು ಗೂಡಲ್ಲಿ ಇಲ್ಲದ ಸಮಯವನ್ನೇ ನೋಡಿಕೊಂಡು, ವಾಪಸ್ಸು ಬರುವ ಹೊಳಗೆ ಹೈಡ್ ನಿರ್ಮಾಣ ಮಾಡುವುದು ಉಂಟು. ಕೆಲ ಪಕ್ಷಿಗಳು ಹೈಡ್ ಮಾಡುತ್ತಿದ್ದರೂ, ಮನುಷ್ಯರೊಂದಿಗೆ ಹೊಂದಿಕೊಂಡಿರುವುದರಿಂದ ಏನೂ ಮಾಡುವುದಿಲ್ಲ.
ಮುಖ್ಯವಾಗಿ ಹಕ್ಕಿಯ ಪ್ರೈವೆಸಿ ಹಾಳಾಗಬಾರದು. ಪಕ್ಷಿ ಜೀವಕ್ಕೆ ತೊಂದರೆ ಆಗಬಾರದು. ಫೋಟೋಗ್ರಫಿಗೆ ಮುಖ್ಯವಾಗಿ ಕೋನ, ಹಿನ್ನೋಟ, ಬೆಳಕು ಬಹಳ ಮುಖ್ಯ. ಹೈಡ್ ಫೋಟೋಗ್ರಫಿಯಲ್ಲಿ ಇವೆಲ್ಲವನ್ನೂ ಮೊದಲೇ ನಿರ್ಧರಿಸುವುದರಿಂದ ಹಕ್ಕಿಯ ಗುಣಮಟ್ಟದ ಫೋಟೋ ತೆಗೆಯಬಹುದು. ಈ ಎಲ್ಲವೂ ಫೋಟೋ ನೋಡಿದಷ್ಟು ಸುಲಭವಲ್ಲ. ಹೈಡ್ ಮಾಡಿದ ತಕ್ಷಣ ಹಕ್ಕಿ ಬಂದು ಕುಳಿತುಕೊಳ್ಳುತ್ತದೆ, ಸುಲಭವಾಗಿ ಫೋಟೋ ಗಿಟ್ಟಿಸಬಹುದು ಅಂತೆಲ್ಲಾ ಊಹಿಸಬೇಡಿ. ಎಲ್ಲ ಪ್ರಕ್ರಿಯೆಗಳ ಹಿಂದೆ ತಿಂಗಳುಗಳ ಕಾಲದ ಶ್ರಮವಿರುತ್ತದೆ.
ಹೈಡ್ ಮಾಡಿದ್ದಾಯಿತು. ಅದರಲ್ಲಿ ಕುಳಿದ್ದಾಯಿತು. ಮುಂದೇನು? ಹಕ್ಕಿಯ ಚಲನವಲನವನ್ನು ಗಮನಿಸಬೇಕು. ಇದೊಂಥರಾ ಧ್ಯಾನ ಇದ್ದಂತೆ. ಒಂದು ಹಕ್ಕಿಯ ಫೋಟೋ ತೆಗೆಯಬೇಕು ಅಂತ ತೀರ್ಮಾನಿಸಿದಾಗಲೇ ಅದರ ಪ್ರದೇಶ, ಅಲ್ಲಿಗೆ ಏಕೆ ಬರುತ್ತದೆ, ಎಲ್ಲಿಂದ ಬರುತ್ತದೆ, ಉದ್ದೇಶವೇನು, ಆಹಾರ, ಮರಿಗಳು ಇವೆಯಾ ಎಲ್ಲವನ್ನು ತಿಳಿದಿರಬೇಕಾಗುತ್ತ¤ದೆ. ಅದಕ್ಕಾಗಿ ದಿನ, ತಿಂಗಳುಗಟ್ಟಲೇ ಅದರ ಹಿಂದೆ ಬೀಳಬೇಕು. ಇದರಿಂದ ದಕ್ಕುವ ಅನುಭವದಿಂದಲೇ ವಾಹ್, ಅನ್ನೋ ಶಹಬ್ಟಾಷ್ ಗಿರಿ ಸಿಗುವುದು. ಹೈಡಲ್ಲಿ ಕುಳಿತಾಕ್ಷಣ ಕ್ಯಾಮರ ಹಿಡಿದು ಫೋಟೋ ತೆಗೆಯಲು ಮುಂದಾಗಬಾರದು. ಹಕ್ಕಿಯ ಹಾವಾಭಾವಗಳನ್ನು ಗಮನಿಸಿ, ಮುಂದೇನು ಮಾಡುತ್ತದೆ ಅನ್ನೋದನ್ನು ಊಹಿಸ ಬೇಕು… ಆಮೇಲೆ ಭಾವ, ವರ್ತನೆಗಳನ್ನು ಕ್ಲಿಕ್ಕಿಸುತ್ತಾ ಹೋಗಬೇಕು..
ಒಬ್ಬ ಹೈಡ್ ಫೋಟೋಗ್ರಾಫರ್‌ಗೆ ಕಾಡು, ಪಕ್ಷಿಗಳ ವಿಚಾರವಾಗಿ ಜ್ಞಾನ, ಅದರ ಅಧ್ಯಯನ, ಅನುಭವ ಇರಬೇಕು. ಕ್ಯಾಮರಾ ಹಿಡಿದು ದಿನಗಟ್ಟಲೆ ಧ್ಯಾನಿಸುವ ತಾಳ್ಮೆ ಇರಬೇಕು. ಪಕ್ಷಿವೀಕ್ಷಣಕಾರ ಫೋಟೋಗ್ರಾಫರ್ ಕೂಡ ಆಗಿದ್ದರೆ ಹೈಡ್ ಹೇಗೆ ಸೆಟಪ್ ಮಾಡಬೇಕು ಅನ್ನೋ ತಿಳಿದಿರುತ್ತದೆ. ಮೊದಲೆಲ್ಲ ಪಕ್ಷಿ ಪ್ರೇಮಿಗಳು ಹೈಡ್ ಮಾಡುತ್ತಾ ಇದ್ದರು. ಅವರಲ್ಲಿ ಬಹುತೇಕರು ಫೋಟೋಗ್ರಾಫರ್‌ಗಳು ಆಗಿರಲಿಲ್ಲ. ಆಗಿದ್ದರೂ ಕೂಡ ಸಕ್ಸಸ್ ರೇಟ್ ಕಡಿಮೆ. ಆದರೆ ಈಗ ವ್ಯವಸ್ಥಿತ ಹೈಡ್ ಫೋಟೋಗ್ರಫಿಯನ್ನು, ಅದರಿಂದ ಆಗುವ ಲಾಭವನ್ನು ಮೊದಲ ಬಾರಿಗೆ ಜಗತ್ತಿಗೆ ತಿಳಿಸಿಕೊಟ್ಟ ಹೆಮ್ಮೆ ನಮಗಿದೆ.
ಹೈಡ್ ಫೋಟೋಗ್ರಫಿಯಿಂದ ಏನು ಲಾಭ ಅನ್ನಬಹುದು. ಪ್ರಕೃತಿಯನ್ನು ಪ್ರೀತಿಸುವ, ಆರಾಧಿಸುವ, ಅದನ್ನು ಆಳವಾಗಿ ತಿಳಿದುಕೊಳ್ಳಬೇಕಾದರೆ ಫೋಟೋಗ್ರಫಿ ಮಾಡಬೇಕು. ಚೆಂದದ ಫೋಟೋ ತೆಗೆದರೆ, ನೀವು ತೆಗೆದ ಅದ್ಬುತ ಚಿತ್ರವನ್ನು ಮತ್ತೂಬ್ಬರು ನೋಡಿದರೆ ಅವರಲ್ಲಿ ಪರಿಸರ ಪ್ರೀತಿ ಮೊಳೆಯುತ್ತದೆ. ಚೆಂದದ ಫೋಟೋ ಎಂಬ ಫೀಲ್ ಹುಟ್ಟುವುದೇ ಈ ಪ್ರೀತಿಯಿಂದ. ಇದು ಹತ್ತಿರದಿಂದ ಪಕ್ಷಿಗಳನ್ನು ಶೂಟ್ ಮಾಡಿದಾಗ ಮಾತ್ರ ಸಾಧ್ಯ..ಎಲ್ಲವೂ ಹೈಡ್ ಫೋಟೋಗ್ರಫಿಯಿಂದ ಆಗುತ್ತದೆ. ಪಕ್ಷಿಗಳ ಖಾಸಗಿ ಬದುಕನ್ನು ಲೈವ್ ಆಗಿ ನೋಡಬಹುದು, ಅದರ ಸೌಂದರ್ಯ ಸವಿಯಬಹುದು, ಹೊರದೇಶಗಳಿಂದ ಫೋಟೋಗ್ರಾಫರ್‌ಗಳನ್ನು ಕರೆಸಿ ಬರ್ಡ್ ಸಫಾರಿ ಮಾಡಬಹುದು, ಎಲ್ಲಕ್ಕಿಂತ ಮುಖ್ಯವಾಗಿ ಚೆಂದದ ಹಕ್ಕಿಗಳ ಫೋಟೋ ತೆಗೆದು, ಮಕ್ಕಳ ಮನದ ಮುಗಿಲಲ್ಲಿ ಹಾರುವುದಕ್ಕೆ ಬಿಡಬಹುದು.
ಫೋಟೋಗ್ರಾಫರ್‌ಗೆ ಏನಿರಬೇಕು?
1) ಪಕ್ಷಿಯ ಬಗ್ಗೆ ಪ್ರೀತಿ. ಪರಿಸರದ ಬಗ್ಗೆ ಕಾಳಜಿ. ಫೋಟೋಗ್ರಫಿಯ ಬಗ್ಗೆ ಆಸಕ್ತಿ.
2) ಈ ಮೂರೂ ಇದ್ದಾಗ ಅಧ್ಯಯನ ಶುರುವಾಗುತ್ತದೆ. ಅಧ್ಯಯನದಿಂದ ಸಿಗುವ ಅನುಭವವೇ ಒಳ್ಳೇ ಫೋಟೋಗ್ರಫಿಗೂ, ಪರಿಸರ ಕಾಳಜಿಗೂ ಕಾರಣವಾಗುತ್ತದೆ.
3) ಎದುರಿಗೆ ಪಕ್ಷಿ ಇತ್ತು ಅಂತಿಟ್ಟುಕೊಳ್ಳಿ, ಹೈಡ್‌ನಲ್ಲಿ ಕೂತ ನಿಮ್ಮ ವಿನಯ, ಶ್ರದ್ಧೆ ಬಹಳ ಕೆಲಸ ಮಾಡುತ್ತದೆ.
4) ನಿಮ್ಮ ಫೋಟೋ ಬಹಳ ಚೆನ್ನಾಗಿದೆ ರೀ.. ಅಂತ ಅನ್ನಿಸಿಕೊಳ್ಳಬೇಕಾದರೆ ಇವೆಲ್ಲವೂ ಇರಲೇಬೇಕು. ಇಲ್ಲದೇ ಇದ್ದರೆ ರೂಢಿಸಿಕೊಳ್ಳಬೇಕು.
ಧ್ಯಾನ ಮಾಡಿ: ಫೋಟೋಗ್ರಫಿ ಅನ್ನೋದೇ ಧ್ಯಾನ ಇದ್ದಂಗೆ. ಕ್ಯಾಮರಾ ಕಲಿಸುವ ಮೊದಲ ಪಾಠ ತಾಳ್ಮೆ. ನಮ್ಮದೇ ಮನಸ್ಸಿಗೆ ಖಾಸಗಿತನದ ಬೇಲಿ ಹಾಕಿಕೊಡುತ್ತದೆ. ಅದರಲ್ಲಿ ನಿಂತು ಫೋಟೋಗ್ರಫಿ ಮಾಡಬೇಕು. ಹೀಗೆ ಕ್ಯಾಮರ ಹಿಡಿದು ನಿಂತರೆ ಜಗತ್ತಿನ ಜಂಜಡಗಳಿಂದ ದೂರ ಉಳಿಯಬಹುದು. ಇಂಥ ಏಕಾಗ್ರತೆಯಿಂದ ಮಾನಸಿಕ ಸ್ಥೈರ್ಯ, ಕೋಪ, ಸಿಡುಕು, ಗೊಂದಲ ಎಲ್ಲವೂ ಕಡಿಮೆ ಆಗುತ್ತದೆ.
ಟೇರೇಸೇ ಪಕ್ಷಿಗಳ ಲಾಡ್ಜ್: ಮನೆಯ ಟೆರೇಸು ಖಾಲಿ ಇದ್ದರೆ ಹಕ್ಕಿಯನ್ನು ಕರೆದು ಊಟಹಾಕಬಹುದು. ಹೇಗೆಂದರೆ, ಅಲ್ಲಿ ಹೂ ಬಿಡುವ ಇಂಥ ಗಿಡಗಳನ್ನು ನೆಡಿ. ಹೆಚ್ಚಾಗಿ ಮಕರಂದದ ಹೂ ಗಿಡಗಳಿದ್ದರಂತೂ ಹಕ್ಕಿಗಳು ಬಂದೇ ಬರುತ್ತವೆ. ಪುಟ್ಟ ಬಟ್ಟಲಲ್ಲಿ ನೀರು ತುಂಬಿಡಿ. ಅವುಗಳ ಊಟ, ತಿಂಡಿ, ಸ್ನಾನ ಅಲ್ಲೇ ಆಗುತ್ತದೆ. ಹೀಗೆ ಪ್ರತಿ ದಿನ ನಿಮ್ಮ ಮುಖವನ್ನು ನೋಡ ನೋಡುತ್ತಲೇ ನಿಮ್ಮ ಮೇಲೆ ನಂಬಿಕೆ ಹುಟ್ಟುತ್ತದೆ. ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪಕ್ಷಿ ಪರಿಸರ ಉಳಿಸಲು ನೆರವಾದಂತಾಗುತ್ತದೆ. ಅವುಗಳಿಗೆ ನಿಮಗೆ ಕೃಷಿ ಭೂಮಿ, ಖಾಲಿ ಜಾಗ ಇದ್ದರೆ ಅಲ್ಲಿ ನೇರಳೆ, ಗಸಗಸೆ, ಬುರುಗ, ಮುತ್ತುಗ ಗಿಡಗಳನ್ನು ನೆಡಿ.
ಕಣ್ ಕಣ್ಣ ಸಲಿಗೆ ಬೇಡ…: ಹಕ್ಕಿ ಎದುರಿಗೆ ಇದೆ. ಹಾಗಂತ, ನಿಮ್ಮ ಕಣ್ಣನ್ನು ಅದರ ಕಣ್ಣಿಗೆ ಸೇರಿಸಲು ಹೋಗಬೇಡಿ. ಇದನ್ನು ಐ ಕಾಂಟಾಕ್ಟ್ ಅಂತಾರೆ. ಇದು ಗುರಾಯಿಸಿದಂತೆ ಪಕ್ಷಿಗೆ ಗೋಚರಿಸುವ ಸಾಧ್ಯತೆ ಉಂಟು. ಆನಂತರದಲ್ಲಿ ನಿಮ್ಮನ್ನು ಶತ್ರು ಅಂತಲೇ ಭಾವಿಸಿ ಬಿಡುತ್ತದೆ. ಹಾಗಾಗೀ, ತಲೆತಗ್ಗಿಸಿ, ಮೈ ಬಗ್ಗಿಸಿ, ಕಣ್ಣನ್ನು ಇಳಿಸಿ ಫೋಟೋಗ್ರಫಿ ಮಾಡಬೇಕು. ಎದುರಿಗೆ ಪಕ್ಷಿ ಕೂತಿದ್ದರೂ ಬೇರೆಯವರ ಹೆಣ್ಣು ಮಕ್ಕಳನ್ನು ಕಣ್ಣೆತ್ತಿ ನೋಡಬಾರದು ಅಂತಾರಲ್ಲ ಹಾಗೇ ಬರ್ಡ್‌ಫೋಟೋಗ್ರಫರ್‌ನ ವರ್ತನೆ ಇರಬೇಕು.