Advertisement

ಹಿಡಕಲ್‌ ಡ್ಯಾಂಗೆ ಒಂದೇ ದಿನ 8 ಅಡಿ ನೀರು

05:59 PM Jul 12, 2022 | Team Udayavani |

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಅದರೆ ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಆತಂಕ ಪಡುವಷ್ಟು ಪ್ರವಾಹದ ಸ್ಥಿತಿ ಎದುರಾಗಿಲ್ಲ.

Advertisement

ಮಹಾರಾಷ್ಟ್ರದ ಅಂಬೋಲಿ ಮತ್ತು ಚಂದಗಡ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಇದರಿಂದ ಹಿಡಕಲ್‌ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ಎಂಟು ಅಡಿಗಳಷ್ಟು ಏರಿಕೆಯಾಗಿದೆ. ಘಟಪ್ರಭಾ ನದಿಗೆ ಈಗ 27 ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು ಹಿಡಕಲ್‌ ಜಲಾಶಯ ಮೈದುಂಬಿಕೊಂಡಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2116 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಮಹಾರಾಷ್ಟ್ರದ ಕೊಯ್ನಾ, ಮಹಾಬಲೇಶ್ವರ, ನವಜಾ, ಪಾಟಗಾಂವ, ಕಾಳಮ್ಮವಾಡಿ ಮತ್ತು ಕೊಲ್ಲಾಪೂರ ಸೇರಿದಂತೆ ಚಿಕ್ಕೋಡಿ ಸುತ್ತಮುತ್ತಲ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಸೋಮವಾರ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಮೂರು ಅಡಿಯಷ್ಟು ಹೆಚ್ಚಾಗಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯ ಇನ್ನೂ ಶೇ.29ರಷ್ಟು ಮಾತ್ರ ಭರ್ತಿಯಾಗಿದ್ದು ಕರ್ನಾಟಕದ ಕೃಷ್ಣಾ ನದಿ ತೀರದ ಗ್ರಾಮಗಳ ಜನರ ಆತಂಕ ದೂರ ಮಾಡಿದೆ. ಒಟ್ಟು 105 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 31.32 ಟಿಎಂಸಿ ಅಡಿ ನೀರಿದೆ. ರಾಜಾಪೂರ ಬ್ಯಾರೇಜ್‌ನಿಂದ 69,000 ಕ್ಯೂಸೆಕ್‌ ಹಾಗೂ ವೇದಗಂಗಾ ಮತ್ತು ದೂಧಗಂಗಾ ನದಿಯಿಂದ 19,360 ಕ್ಯೂಸೆಕ್‌ ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 88,360 ಕ್ಯೂಸೆಕ್‌ ಒಳಹರಿವು ಇದೆ. ಒಳಹರಿವಿನ ಪ್ರಮಾಣ 2,40,000 ಕ್ಯೂಸೆಕ್‌ವರೆಗೆ ಬಂದರೆ ಮಾತ್ರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ. ಅದರಂತೆ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಲ್ಲಿ ಸಹ ಶೇ.43ರಷ್ಟು ನೀರು ಸಂಗ್ರಹವಾಗಿದೆ.

ಐದು ಸೇತುವೆ ಜಲಾವೃತ: ದೂಧಗಂಗಾ ಮತ್ತು ವೇದಗಂಗಾ ನದಿಗಳ ಪ್ರವಾಹದಿಂದ ನಿಪ್ಪಾಣಿ ತಾಲೂಕಿನ ಐದು ಕೆಳಮಟ್ಟದ ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರ ಕಡಿತಗೊಂಡಿದೆ. ಆದರೆ ಪರ್ಯಾಯ ಮಾರ್ಗ ಇರುವುದರಿಂದ ಗ್ರಾಮದ ಜನರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಮಹಾರಾಷ್ಟ್ರ-ಕರ್ನಾಟಕ ಭಕ್ತರ ಆರಾಧ್ಯ ದೇವರಾದ ನೆರೆಯ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆ ಶಿರೋಳ ತಾಲೂಕಿನ ಕೃಷ್ಣಾ ಮತ್ತು ಪಂಚಗಂಗಾ ನದಿ ಸಂಗಮ ಸ್ಥಳದಲ್ಲಿರುವ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತ ಮಂದಿರ ಜಲಾವೃತಗೊಂಡಿದೆ.

Advertisement

ಪಂಪ್‌ಸೆಟ್‌ ತೆರವುಗೊಳಿಸು ತ್ತಿರುವ ರೈತರು: ಕೃಷ್ಣಾ ಮತ್ತು ಉಪನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಮೂರು ನದಿಗಳು ಒಡಲು ದಾಟಿ ಹರಿಯುತ್ತಿರುವ ಪರಿಣಾಮ ರೈತರು ನದಿ ಭಾಗದಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ತೆರವು ಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶ ಮತ್ತು ಜಾಂಬೋಟಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು ಜಲಾಶಯದಲ್ಲಿ ಈಗ 2057 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ಒಂದು ದಿನದ ಅವಧಿಯಲ್ಲಿ ಒಂದು ಅಡಿಯಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2063 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.

ಆರು ಶಾಲೆಗಳಿಗೆ ಹಾನಿ: ಖಾನಾಪುರ ತಾಲೂಕಿನ ನಾಲ್ಕು ಸೇರಿದಂತೆ ಜಿಲ್ಲೆಯ ಆರು ಶಾಲೆಗಳಿಗೆ ಮಳೆಯಿಂದಾಗಿ ಇದುವರೆಗೆ ಹಾನಿಯಾಗಿದೆ. ರವಿವಾರ ರಾತ್ರಿ ಮುಂಡೇವಾಡ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಬಿದ್ದಿದೆ. ನಂದಗಡ, ಸಿಂಗೇನಕೊಪ್ಪ ಹಾಗೂ ಗರ್ಲಗುಂಜಿ ಗ್ರಾಮದಲ್ಲಿ ಸಹ ಶಾಲೆಗಳ ಗೋಡೆ ಕುಸಿದು ಬಿದ್ದಿವೆ. ಆದರೆ ಯಾವುದೇ ಅನಾಹುತಗಳಾಗಿಲ್ಲ.

ಬೆಳಗಾವಿ ತಾಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ಪ್ರತಿ ವರ್ಷದಂತೆ ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಭತ್ತದ ಬೆಳೆಗಾರರು ಬೆಳೆನಷ್ಟದ ಆತಂಕದಲ್ಲಿದ್ದಾರೆ.

ಎಲೆಲ್ಲಿ, ಎಷ್ಟು ಮಳೆ?

ಕೊಯ್ನಾ -177ಮಿಮೀ

ನವಜಾ-160ಮಿಮೀ

ಮಹಾಬಳೇಶ್ವರ-180 ಮಿಮೀ

ವಾರಣಾ-60 ಮಿಮೀ

ಸಾಂಗಲಿ-15 ಮಿಮೀ

ಕೊಲ್ಹಾಪೂರ-20 ಮಿ ಮೀ

ಕಾಳಮ್ಮವಾಡಿ-82 ಮಿಮೀ

ರಾಧಾನಗರಿ-97 ಮಿಮೀ

ಪಾಟಗಾಂವ -137ಮಿಮೀ ಮಳೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next