ನವಲಗುಂದ: ಪಟ್ಟಣದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್‌ನಿಲ್ದಾಣ ಪ್ರಯಾಣಿಕರಿಗೆ ಕಿರಿಕಿರಿ ತಾಣವಾಗಿ ಮಾರ್ಪಡುತ್ತಿದೆ. ಇರುವ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡದೆ ಪ್ರಯಾಣಿಕರು ವಿಶ್ರಮಿಸಬೇಕಾದ ಜಾಗದಲ್ಲಿ ಡಬ್ಬಾ ಅಂಗಡಿಗಳಿಗೆ ಅವಕಾಶ ನೀಡುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಿಲ್ದಾಣದಲ್ಲಿ ಈ ಮೊದಲೇ ಕಟ್ಟಿರುವಂತಹ ವಾಣಿಜ್ಯ ಸಂಕೀರ್ಣದಲ್ಲಿ ಇದ್ದ ಮೂರು ಅಂಗಡಿಗಳನ್ನು ತೆರೆಯದೇ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದೆ. ಅಂತಹದರಲ್ಲಿ ಪ್ರಯಾಣಿಕರಿಗೆ ಮೀಸಲಿಟ್ಟ ಸ್ಥಳಗಳಲ್ಲಿ ಡಬ್ಟಾ ಅಂಗಡಿಗಳು ರಾರಾಜಿಸುತ್ತಿವೆ. ಸಾರ್ವಜನಿಕರು ಡಬ್ಬಾ ಅಂಗಡಿಗಳು, ಚರಂಡಿ ಗಬ್ಬು ವಾಸನೆಯಿಂದ ಬೇಸತ್ತು ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ನೂರಾರು ಬಸ್‌ಗಳು ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ.
ಸಾವಿರಾರು ಪ್ರಯಾಣಿಕರು ಬರುವಂತಹ ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಸನ ಕಡಿಮೆ ಇರುವುದು ಒಂದು ಕಡೆಯಾದರೆ, ಡಬ್ಟಾ ಅಂಗಡಿಗಳ ದರ್ಬಾರ್‌ನಿಂದ ನಿಲ್ಲಲು ಜಾಗ ಇಲ್ಲದಂತಾಗಿದೆ. ನಿಲ್ದಾಣಕ್ಕೆ ಜಾಗೆ ಕಡಿಮೆ ಇರುವುದರಿಂದ ವಾಹನ ಪಾರ್ಕಿಂಗ್, ಅಟೋ ನಿಲ್ದಾಣಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ಕಂಟ್ರೋಲ್ ರೂಮ್, ಇನ್ನು ಪ್ರಾರಂಭವಾಗದ ನಂದಿನಿ ಮಿಲ್ಕ್ ಸೆಂಟರ್, ಗುರುವಾರ ರಾತ್ರಿ ದಿಢೀರನೇ ಮತ್ತೂಂದು ತಗಡಿನ ಡಬ್ಬಿ ಪ್ರತ್ಯಕ್ಷವಾಗಿದೆ.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರ ಅವಧಿಯಲ್ಲಿ ಸುಸಜ್ಜಿತವಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸುಮಾರು 4.75 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಲಾಗಿತ್ತು. ಸಾರಿಗೆ ಸಚಿವರು ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಬೇಕಾಗಿದೆ. ಪ್ರಯಾಣಿಕರಿಗೆ ಮೀಸಲಿಟ್ಟಿರುವ ಜಾಗೆಯಲ್ಲಿ ತಗಡಿನ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಇದ್ದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳನ್ನು ಬಾಡಿಗೆ ನೀಡಿ ಇಲಾಖೆಗೆ ಲಾಭದ ಮೂಲ ಹುಡುಕಬೇಕಾಗಿದೆ.
ಹೈಟೆಕ್ ಬಸ್ ನಿಲ್ದಾಣ ನನ್ನ ಕನಸಿನ ಕೂಸಾಗಿದೆ. ಪ್ರಯಾಣಿಕರಿಗೆ, ಕ್ಷೇತ್ರದ ಜನರಿಗೆ ಸುಸಜ್ಜಿತವಾಗಿ ಸೌಕರ್ಯ ಸಿಗಬೇಕೆಂಬ ಆಶಯದಿಂದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸರಕಾರದ ನಿಯಮಾವಳಿಯಂತೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಗಡಿಗಳನ್ನು ಹಾಕಲು ಸಾರಿಗೆ ಇಲಾಖೆ ಆದೇಶ ನೀಡಬೇಕು.
ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ
ಬಸ್ ನಿಲ್ದಾಣದಲ್ಲಿ ಕಂಟ್ರೋಲ್ ರೂಮ್ ಸೇರಿದಂತೆ ಎರಡು ತಗಡಿನ ಅಂಗಡಿಗಳು ಇಟ್ಟಿರುವುದರಿಂದ ಹಬ್ಬ-ಹರಿದಿನ, ಜಾತ್ರೆ ಸಮಯದಲ್ಲಿ ಪ್ರಯಾಣಿಕರ ಜನದಟ್ಟಣೆ ಹೆಚ್ಚಿಗೆ ಆಗುತ್ತದೆ. ಪ್ರಯಾಣಿಕರು ನಿಲ್ಲಲು ಜಾಗೆ ಇಲ್ಲದಂತಾಗಿದೆ.
ರಂಗರಡ್ಡಿ ಕಿರೇಸೂರ, ಸೊಟಕನಾಳ ಗ್ರಾಮದ ರೈತ
*ಪುಂಡಲೀಕ ಮುಧೋಳೆ