Advertisement

ಬಿಜೆಪಿ ಭರ್ಜರಿ ಪ್ರಚಾರಕ್ಕೆ ‘ಟೆಕ್‌’ಟೆಕ್ನಿಕ್‌!

04:00 AM Aug 09, 2018 | Karthik A |

ಮಂಗಳೂರು: ಪ್ರತಿ ಚುನಾವಣೆಯಲ್ಲೂ ತಂತ್ರಜ್ಞಾನದ ಗರಿಷ್ಠ ಬಳಕೆ ಮೂಲಕ ಭರ್ಜರಿ ಪ್ರಚಾರ ಕಾರ್ಯ ನಡೆಸುವ ಬಿಜೆಪಿ, 2019ರ ಲೋಕಸಭಾ ಚುನಾವಣೆಗೂ ಈಗಲೇ ಟೆಕ್‌ ಅಡಿಪಾಯ ಹಾಕತೊಡಗಿದೆ. ಇದಕ್ಕಾಗಿ 20 ಸಾವಿರಕ್ಕೂ ಹೆಚ್ಚು ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ ಮಾಡಲಾಗಿದೆ. ಇದರಲ್ಲಿ ತಲಾ 150 ಮಂದಿಯಂತೆ ಸುಮಾರು 30 ಲಕ್ಷ ಸದಸ್ಯರು ಇರಲಿದ್ದಾರೆ. ಇವರೆಲ್ಲರಿಗೂ ದಿನಕ್ಕೆ ಐದಾರು ಸಂದೇಶಗಳು ಕನ್ನಡದಲ್ಲಿ ರವಾನೆಯಾಗಲಿವೆೆ. ಬಿಜೆಪಿ ಐಟಿ ಸೆಲ್‌ ಇದಕ್ಕಾಗಿ ತಯಾರಿ ನಡೆಸಿದೆ.

Advertisement

ಗುಜರಾತ್‌ ಮಾದರಿಯಲ್ಲಿ ಕೆಲಸ
ರಾಜ್ಯ ವಿಧಾನಸಭಾ ಚುನಾವಣೆ, ಗುಜರಾತ್‌ ಮತ್ತು ಉತ್ತರಪ್ರದೇಶ ಚುನಾವಣೆಯಲ್ಲಿ ವಾಟ್ಸ್‌ಆ್ಯಪ್‌, ಫೇಸ್‌ ಬುಕ್‌, ಟ್ವಿಟರ್‌ ಪೇಜ್‌ ಗಳು ಮಹತ್ವದ ಪಾತ್ರ ವಹಿಸಿದ್ದವು. ಇದೇ ಹಿನ್ನೆಲೆ ಇಟ್ಟುಕೊಂಡು ಕೇಂದ್ರ ನಾಯಕರು ಬೂತ್‌ ಮಟ್ಟದಲ್ಲೂ ಸೋಶಿಯಲ್‌ ಮೀಡಿಯಾ ಗ್ರೂಪ್‌ ರಚಿಸಿ ಪಕ್ಷ ಸಂಘಟನೆಯಲ್ಲಿ ತೊಡಗಲು ತೀರ್ಮಾನಿಸಿದ್ದಾರೆ. ಫೇಸ್‌ ಬುಕ್‌, ಟ್ವಿಟರ್‌ ಪೋಸ್ಟ್‌ ನಿರಂತರ ಫೇಸ್‌ ಬುಕ್‌ ಮತ್ತು ಟ್ವಿಟರ್‌ ಖಾತೆಗಳೂ ಇದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಫೇಸ್‌ಬುಕ್‌ ಪೇಜ್‌ನಲ್ಲಿ 5-6 ಪೋಸ್ಟ್‌ ಅಪ್ಡೇಟ್‌ ಆಗಲಿದೆ. ಜಿಲ್ಲಾ ಮಟ್ಟದ ಬಿಜೆಪಿ ಟ್ವಿಟ್ಟರ್‌ ಖಾತೆಯೂ ನಿರಂತರ ಪೋಸ್ಟ್‌ಗಳನ್ನು ಮಾಡಲಿದೆ.

ಒಂದು ವಾರದಲ್ಲಿ ಸಭೆ
ರಾಜ್ಯ ಬಿಜೆಪಿ ಸೋಶಿಯಲ್‌ ಮೀಡಿಯಾ ಸೆಲ್‌ ರಾಜ್ಯ ಸಂಚಾಲಕ ಬಾಲಾಜಿ ಪ್ರತಿಕ್ರಿಯಿಸಿ, ಚುನಾವಣೆ ಕಾರ್ಯತಂತ್ರ ಸಮಾಲೋಚನೆಗೆ ಒಂದು ವಾರದಲ್ಲಿ ಜಿಲ್ಲಾ ಮಟ್ಟದ ಐಟಿ ಸೆಲ್‌ ಕಾರ್ಯಕರ್ತರ ಸಭೆಗೆ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಮತ್ತಷ್ಟು ಯೋಜನೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ದ.ಕ.ದಲ್ಲಿ 1,410 ಗ್ರೂಪ್‌
ದ.ಕ. ಜಿಲ್ಲಾ ಮಟ್ಟದಲ್ಲಿಯೂ ಬಿಜೆಪಿ ಐಟಿ ಸೆಲ್‌ ಸಿದ್ಧವಾಗಿದೆ. 1,400 ಬೂತ್‌ ಮಟ್ಟದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ತಲಾ ಸರಾಸರಿ 140 ಮಂದಿಯಂತೆ 2 ಲಕ್ಷ ಮಂದಿ ಸದಸ್ಯರಿದ್ದಾರೆ. ಇದರ ಉಸ್ತುವಾರಿಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಮಂದಿಯ ತಂಡ ಸಜ್ಜಾಗಿದೆ. ಜಿಲ್ಲಾ ಮಟ್ಟದಲ್ಲಿ ಒಟ್ಟು 200 ಜನರ ತಂಡ ಸಾಮಾಜಿಕ ಜಾಲತಾಣಗಳ  ಮೇಲ್ವಿಚಾರಣೆ ನಡೆಸುತ್ತಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಸದಸ್ಯರಿಗೆ ಸಂಸದರ ಅಭಿವೃದ್ಧಿ ಕಾರ್ಯ, ಜಿಲ್ಲೆಗೆ ಕೇಂದ್ರ ಸರಕಾರದ ಕೊಡುಗೆಗಳ ಬಗ್ಗೆ ಸಂದೇಶ ಹೋಗಲಿದೆ. ಅವರು ಗ್ರಾಮದ ಪ್ರತಿಯೊಬ್ಬರಿಗೂ ವಿಚಾರಗಳನ್ನು ತಿಳಿಸುವ ಜವಾಬ್ದಾರಿ ಹೊತ್ತಿರುತ್ತಾರೆ.

2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. 1,410 ವಾಟ್ಸ್‌ಆ್ಯಪ್‌ ಗ್ರೂಪ್‌ ಕಾರ್ಯನಿರ್ವಹಿಸುತ್ತಿವೆ. ಸುಮಾರು 200 ಮಂದಿಯ ತಂಡ ಕೆಲಸ ಮಾಡುತ್ತಿದೆ.
– ಸೂರಜ್‌, ದ.ಕ. ಜಿಲ್ಲಾ  ಸೋಶಿಯಲ್‌ ಮೀಡಿಯಾ ಸೆಲ್‌

Advertisement

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next