ಬೈರೂತ್(ಲೆಬನಾನ್): ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ಭಾರೀ ಗುಂಡಿನ ಕಾಳಗ ಮುಂದುವರದಿದ್ದು, ಹೆಜ್ಬುಲ್ಲಾ ಪ್ರಭಾವಶಾಲಿಯಾಗಿದ್ದ ದಕ್ಷಿಣ ಬೈರೂತ್ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಇದರಿಂದ ರೊಚ್ಚಿಗೆದ್ದ ಇರಾನ್ ಬೆಂಬಲಿತ ಹೆಜ್ಬುಲ್ಲಾ 250ಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಲೆಬನಾನ್ ನ ಬೈರೂತ್ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ ನಂತರ ಹೆಜ್ಬುಲ್ಲಾ ಈ ಪ್ರತೀಕಾರದ ದಾಳಿ ನಡೆಸಿರುವುದಾಗಿ ಹೇಳಿದೆ.
ಹೆಜ್ಬುಲ್ಲಾ ರಾಕೆಟ್ ದಾಳಿಯನ್ನು ಇಸ್ರೇಲ್ ವೈಮಾನಿಕ ರಕ್ಷಣಾ ಪಡೆ ತಡೆಗಟ್ಟಿ ಹೊಡೆದುರುಳಿಸಿರುವುದಾಗಿ ವರದಿ ವಿವರಿಸಿದೆ. ಅಲ್ಲದೇ ಗ್ಲಿಲೋಟ್ ಸೇನಾ ಗುಪ್ತಚರ ಬೇಸ್ ಮೇಲೆ ಮಿಸೈಲ್ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಎಎಫ್ ಪಿ ವರದಿ ಪ್ರಕಾರ, ಸೆಂಟ್ರಲ್ ಇಸ್ರೇಲ್ ನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಕನಿಷ್ಠ ಏಳು ಮಂದಿ ಗಾಯಗೊಂಡಿರುವುದಾಗಿ ತಿಳಿಸಿದೆ. ಪ್ರಕಟನೆ ಬಿಡುಗಡೆಗೊಳಿಸಿರುವ ಹೆಜ್ಬುಲ್ಲಾ, ಮೊದಲ ಬಾರಿ ಇಸ್ರೇಲ್ ನ ನೌಕಾ ನೆಲೆ ಮೇಲೆ ಡ್ರೋನ್ ಬಳಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ಯುದ್ಧಾರಂಭದ ಬಳಿಕ ಇದೇ ಮೊದಲ ಬಾರಿಗೆ ಅಂದಾಜು ಹೆಜ್ಬುಲ್ಲಾ ಬಂಡುಕೋರರು 250 ರಾಕೆಟ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡಾ ಹೆಜ್ಬುಲ್ಲಾ ಮೇಲೆ 300ಕ್ಕೂ ಅಧಿಕ ಮಿಸೈಲ್ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
2023ರ ಅಕ್ಟೋಬರ್ ನಿಂದ ಈವರೆಗೆ ಲೆಬನಾನ್ ನಲ್ಲಿ ಕನಿಷ್ಠ 3,754 ಮಂದಿ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಹೆಜ್ಬುಲ್ಲಾ ದಾಳಿಗೆ ಕನಿಷ್ಠ 82 ಇಸ್ರೆಲ್ ಸೈನಿಕರು ಹಾಗೂ 47 ನಾಗರಿಕರು ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.