Advertisement

Israel ಮೇಲೆ ಹೆಜ್ಬುಲ್ಲಾ ದಾಳಿ: ಯುದ್ಧ ಆರಂಭ?

12:17 AM Aug 05, 2024 | Team Udayavani |

ಟೆಲ್‌ ಅವಿವ್‌: ಹಮಾಸ್‌ ನಾಯಕರ ಹತ್ಯೆ ಮತ್ತು ಸರಣಿ ವೈಮಾನಿಕ ದಾಳಿಗಳ ಬೆನ್ನಲ್ಲೇ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ರವಿವಾರ ಲೆಬನಾನ್‌ನ ಹೆಜ್ಬುಲ್ಲಾ ಬಂಡುಕೋರರು, ಇಸ್ರೇಲ್‌ ಮೇಲೆ 12ಕ್ಕೂ ಅಧಿಕ ರಾಕೆಟ್‌ ದಾಳಿ ನಡೆಸಿದ್ದಾರೆ. ಶನಿವಾರ ಕೂಡ ಇಸ್ರೇಲ್‌ ಮತ್ತು ಹೆಜ್ಬುಲ್ಲಾ ನಡುವೆ ಗುಂಡಿನ ದಾಳಿ ನಡೆದಿತ್ತು. ಈ ಮಧ್ಯೆ, ಇಸ್ರೇಲ್‌ ಬೆಂಬಲಕ್ಕೆ ಅಮೆರಿಕ ಧಾವಿಸಿದ್ದು, ಹಿಡಿತದಲ್ಲಿರುವಂತೆ ಇರಾನ್‌ಗೆ ಅಧ್ಯಕ್ಷ ಜೋ ಬೈಡೆನ್‌ ಸೂಚಿಸಿದ್ದಾರೆ.

Advertisement

ಇಸ್ರೇಲ್‌ನ ಉತ್ತರ ಭಾಗದಲ್ಲಿರುವ ಓಶೇವ್‌ ಬೀಟ್‌ ಹೆಲ್ಲೆಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ್ದು, ನಾಗರಿಕರು ಗಾಯ ಗೊಂಡಿದ್ದಾರೆ ಎಂದು ಹೆಜ್ಬುಲ್ಲಾ ಹೇಳಿದೆ. ಇದು ಲೆಬನಾನ್‌ನ ಕ್ರಾರ್‌ ಕೆಲಾ ಮತ್ತು ಡೀರ್‌ ಸಿರಿಯಾನ್‌ನಲ್ಲಿನ ಇಸ್ರೇಲ್‌ನ ದಾಳಿಗೆ ಪ್ರತೀಕಾರದ ದಾಳಿಯಾಗಿದೆ ಎಂದು ಹೆಜ್ಬುಲ್ಲಾದ ಹಿರಿಯ ಸೇನಾ ಕಮಾಂಡರ್‌ ಫುವಾಡ್‌ ಶುಕ್ರ್ ಹೇಳಿದ್ದಾನೆಂದು ಟೈಮ್ಸ್‌ ಆಫ್ ಇಸ್ರೇಲ್‌ ವರದಿ ಮಾಡಿದೆ.

ಈ ಮಧ್ಯೆ, ಸೋಮವಾರ ಇರಾನ್‌ ತಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಅಮೆರಿಕದ ಅಧಿಕಾರಿಗಳೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇಸ್ರೇಲ್‌ ಬೆಂಬಲಕ್ಕೆ ಧಾವಿಸಿರುವ ಅಮೆರಿಕ ಮಧ್ಯಪ್ರಾಚ್ಯದತ್ತ ಯುದ್ಧವಿಮಾನಗಳು ಮತ್ತು ವಿಮಾನ ವಾಹಕ ನೌಕೆಯನ್ನು ರವಾನಿಸಿದೆ.

ಗಾಜಾ ಮೇಲೆ ಇಸ್ರೇಲ್‌ ದಾಳಿ: 30 ಸಾವು
ರವಿವಾರ ಗಾಜಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 30 ಜನರು ಮೃತಪಟ್ಟಿದ್ದಾರೆ. 2 ಶಾಲೆಗಳ ಮೇಲೂ ಕ್ಷಿಪಣಿ ದಾಳಿ ನಡೆದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತರಾದವರ ಪೈಕಿ ನಿರಾಶ್ರಿತರ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದ ನಾಲ್ವರೂ ಸೇರಿದ್ದಾರೆ. ಅತ್ತ ಗಾಜಾ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿರುವಂತೆಯೇ ಇತ್ತ ಇಸ್ರೇಲ್‌ನ ರಾಜಧಾನಿಯಲ್ಲಿ ಪ್ಯಾಲೆಸ್ತೀನ್‌ ಪ್ರಜೆಯೊಬ್ಬ ಏಕಾಏಕಿ ಚೂರಿ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಇಬ್ಬರು ಇಸ್ರೇಲಿಗಳು ಸಾವಿಗೀಡಾಗಿದ್ದಾರೆ.

ಲೆಬನಾನ್‌ನಿಂದ ಹೊರಡಲು ಸೂಚನೆ
ಯುದ್ಧೋನ್ಮಾದ ಹೆಚ್ಚುತ್ತಿರುವಂತೆಯೇ ಅಮೆರಿಕ, ಯುಕೆ, ಫ್ರಾನ್ಸ್‌ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರಿಗೆ ಕೂಡಲೇ ಲೆಬನಾನ್‌ನಿಂದ ಹೊರನಡೆಯುವಂತೆ ಸೂಚಿಸಿವೆ. ಲೆಬನಾನ್‌ನ ಹೆಜ್ಬುಲ್ಲಾ ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಇಸ್ರೇಲ್‌ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವ ಕಾರಣ, ಈ ಎಚ್ಚರಿಕೆ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next