Advertisement

ಲೇ, ಮಳೆ ಹುಡ್ಗೀ

09:51 AM Dec 04, 2019 | Suhan S |

ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ. ಮಿಡತೆಗಳು ಚಿರ್‌ ಎಂದು ಚೀರುತ್ತವೆ. ಗಂಡು ಹಕ್ಕಿಗಳು ಪುಕ್ಕಮುದುರಿ ಟೊಂಗೆಯ ಮೇಲೆ ಕುಳಿತರೆ, ಹೆಣ್ಣು ಹಕ್ಕಿಗಳು ಗೂಡು ಸೇರಿ ಮರಿಗಳಿಗೆ ಕಾವು ಕೊಡುತ್ತವೆ. ಜಿನುಗುವ ಹನಿಗೆಗಿಡ ಗಂಟೆಗಳೆಲ್ಲ ಪುಳಕಿತವಾಗಿ ನಮಗೂ ಜೀವವಿದೆ ಎಂಬುದನ್ನು ಸಾಬೀತು ಪಡಿಸುತ್ತವೆ.

Advertisement

ತೊಟ್‌ ತೊಟ್‌ ಎಂದು ತೊಟ್ಟಿಕ್ಕುವ ಹನಿಗಳ ಶಬ್ದ. ಹಳ್ಳಗಳ ಜುಳು ಜುಳುನಾದವನ್ನು ಕೇಳಿ ಪಶ್ಚಿಮ ಘಟ್ಟಗಳ ಸೊಬಗಿಗೆ ನಾನಂತೂ ಫೀದಾ ಆಗಿದ್ದೇನೆ. ಮಳೆ ಸುರಿಯುವ ಸಂದರ್ಭದಲ್ಲಿ ಹೆಂಚಿನ ಮನೆಯ ಚಿಮಣಿಗಳಿಂದ ಹೊರ ಬರುವ ಹೊಗೆ, ನೋಡುಗರ ಕಣ್ಣಿಗೆ ಬೆಚ್ಚನೆಯ ಅನುಭವನನ್ನು ನೀಡುತ್ತವೆ. ತಲೆಮಾರುಗಳು ಬದುಕುಳಿದ ಮಲೆನಾಡಿನ ಮನೆಯ ವಾಡೆಗಳಲ್ಲಿ ಅದೆಷ್ಟು ಬುತ್ತಿಬುತ್ತಿ ನೆನಪುಗಳು ಅಡಗಿವೆಯೋ.. ಅರಿತವರಾರು?ಹಲಸಿನ ಮರದಿಂದ ಕೆತ್ತಿಸಿದ ಮನೆಯ ಕಂಬಗಳು, ಗಾರೆಯ ಜಗುಲಿ, ವರಾಂಡದಲ್ಲಿ ಮುರಿದು ಬಿದ್ದ ಎತ್ತಿನ ಬಂಡಿ, ಹೋಳಾದ ಖಾಲಿ ಮಜ್ಜಿಗೆ ಸೋರೆ, ಜೇಡರ ಬಲೆಗೆ ಆಸರೆಯಾದ ಉಪ್ಪಿನಕಾಯಿ ಜಾಡಿ, ಗೋಡೆಯ ಮೇಲೆ ನೇತಾಡುವ ಧೂಳಿಡಿದ ಛತ್ರಿ, ಮೂಲೆ ಸೇರಿದ ಚರ್ಮದ ಚಪ್ಪಲಿಗಳು ಸಾಲು ಸಾಲು ಕತೆಗಳನ್ನು ಹೇಳುತ್ತವೆ.

ಕಾಫೀ ಕೊಡುವ ನೆಪದಲ್ಲಿ ಹೂವಿನ ನಗೆ ಬೀರುವ ಮತ್ತು ಕಣ್ಣುಗಳನ್ನೇ ದಿಟ್ಟಿಸಿ ನೋಡುವ ಕೇರಳದ ನನ್ನ ಸುಂದರಿಪ್ರತ್ಯಕ್ಷವಾಗಿ, ಈ ಬಯಲು ಸೀಮೆ ಹುಡುಗನಮುಂಗುರುಳನ್ನು ನೇವರಿಸಿ ಹೋದರೆ ಎಷ್ಟು ಚೆನ್ನ. ಅವಳೇ ವಾರೆಗಣ್ಣ ಸುಂದರಿ ಶರೋನ ಟ್ರೀಸಾ. ಒಮ್ಮೆನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ರೂಪು. ಆಕೆಯನ್ನು ನೋಡಲೆಂದೇ ಪಡ್ಡೆ ಹುಡುಗರ ತಂಡ ಕಟ್ಟಿಕೊಂಡು ಪ್ರತಿ ಮಧ್ಯಾಹ್ನ ಆಲದಕಟ್ಟೆಯ ಮೇಲೆ ಕುಳಿತುಕೊಳ್ಳುತ್ತಿದ್ದೆ. ಎದುರಿಗೆ ಬಂದ ತಕ್ಷಣವೇ.. ನಗು ಚೆಲ್ಲುತ್ತಿದ್ದಳು. ಆಗ ನನ್ನ ಹೃದಯವನ್ನು ಮೀಟಿದಂತಾಗುತ್ತಿತ್ತು.. ಶರೋನಾಳ ಆ ಒಂದು ಸ್ಮೈಲ್ ನನ್ನ ಪ್ರಯತ್ನಕ್ಕೆ ಮತ್ತಷ್ಟು ಹುಮ್ಮಸ್ಸನ್ನು ನೀಡುತ್ತಿತ್ತು. ಕ್ಯಾಂಪಸ್‌ನಲ್ಲಿರುವ ಸ್ನೇಹಿತರನ್ನೆಲ್ಲ ವಿಚಾರಿಸಿದನಂತರ ಅವಳ ಕುಲಗೋತ್ರ ತಿಳಿಯಿತು. ಪ್ರವಾಸೋದ್ಯಮ ಅಧ್ಯಯನ ಮಾಡಲು, ನಮ್ಮ ವಿಶ್ವ ವಿದ್ಯಾಲಯಕ್ಕೆ ಬಂದಿದ್ದಾಳೆ ಎಂದು.

ಬೇಟೆಗಾರರ ವಂಶದವನು ನಾನು. ಇಟ್ಟ ಗುರಿಯನ್ನು ಎಂದೂ ಮಿಸ್‌ ಮಾಡಿಲ್ಲ. ಸಧ್ಯಕ್ಕೆ ಆ ಹಕ್ಕಿಯನ್ನು ಬಲೆ ಇಲ್ಲದೆ ಹಿಡಿಯಲು ಪ್ರಯತ್ನಿಸುತ್ತಿದ್ದೇನೆ. ಸಿಕ್ಕಿದರೂ ಸಂತೋಷ. ಸಿಗದೆ ಹಾರಿಹೋಗುವ ಸ್ವಾತಂತ್ರ್ಯವೂ ಅವಳಿಗಿದೆ. ಬಯಸಿ ಬಂದರೆ ನನ್ನ ಪ್ರೇಮವನ್ನು ಧಾರೆ ಎರೆಯುತ್ತೇನೆ. ಬೇಟೆಗಾರ ಎಂದ ಮಾತ್ರಕ್ಕೆ.. ಯಾರನ್ನೂ, ಯಾವುದನ್ನೂ ಪಳಗಿಸುವ

ಮನೋಭಾವ ನನ್ನದಲ್ಲ. ಇಚ್ಚೆ ಪಟ್ಟರೆ ಇದೇ ಮಲೆನಾಡಿನಲ್ಲಿ ಸ್ವಚ್ಚಂದವಾಗಿ ಹಾರಬಹುದು. ಇಲ್ಲದಿದ್ದರೆ ಹಂಚಿ ಹೋಗಬಹುದು. ನಾಳೆಯೂ ಅದೇ ಆಲದ ಮರದ ಕೆಳಗೆ, ಕಟ್ಟೆಯ ಮೇಲೆ ಕಾದು ಕುಳಿತಿರುತ್ತೇನೆ. ಅವಳ ನಿಷ್ಕಲ್ಮಷ ನಗುವಿಗಾಗಿ.

Advertisement

 

 

ಹರೀಶ್‌ ಕಮ್ಮನಕೋಟೆ

Advertisement

Udayavani is now on Telegram. Click here to join our channel and stay updated with the latest news.

Next