Advertisement

Hesitation-Youths: ಯುವಜನತೆಯಲ್ಲಿ ಹೆಚ್ಚುತ್ತಿದೆ ಹಿಂಜರಿಕೆ

03:39 PM Dec 05, 2024 | Team Udayavani |

ಶಿಕ್ಷಕರು ಈ ಬಾರಿ ಸೆಮಿನಾರ್‌ ಯಾರು ಮಾಡುತ್ತೀರಿ ಎಂದು ಕೇಳಿದಾಗ ಕೈ ಎತ್ತುವ ವಿದ್ಯಾರ್ಥಿಗಳು ಎಷ್ಟು ಮಂದಿ ಇದ್ದಾರೆ. ಇನ್ನೊಬ್ಬರ ಎದುರು ಧೈರ್ಯದಿಂದ ಮಾತನಾಡಲು, ಸಂದರ್ಶನದಲ್ಲಿ ನಿರರ್ಗಳವಾಗಿ ಉತ್ತರಿಸಲು, ವೇದಿಕೆಗೆ ಹೋಗಿ ನಮ್ಮ ಕಲೆಯನ್ನು, ಪ್ರತಿಭೆಯನ್ನು ಧೈರ್ಯವಾಗಿ ಪ್ರದರ್ಶಿಸುವ ಮನಸ್ಥಿತಿ ಈಗಿನ ಯುವಜನತೆಯಲ್ಲಿ ತೀರಾ ಕಡಿಮೆಯಾಗುತ್ತಿದೆ. ಇದನ್ನು ಹಿಂಜರಿಕೆ (ಹೆಸಿಟೇಷನ್‌) ಎನ್ನಬಹುದು. ಮನಶಾಸ್ತ್ರದಲ್ಲಿ ಹಿಂಜರಿಕೆಗೆ ಸಾಕಷ್ಟು ಕಾರಣಗಳನ್ನು ಮತ್ತು ಅದರಿಂದ ಪಾರಾಗುವ ಮಾರ್ಗಗಳನ್ನು ತಿಳಿಸಲಾಗಿದೆ.

Advertisement

ಹಿಂಜರಿಕೆಗೆ ಮುಖ್ಯವಾಗಿ ಜನ ಏನು ತಿಳಿದುಕೊಳ್ಳುತ್ತಾರೋ? ಅವರೇನಂದಾರು? ಎಲ್ಲರೂ ನಕ್ಕರೆ, ಗೇಲಿ ಮಾಡಿದರೆ, ಅವಮಾನ ಮಾಡಿದರೆ ಎಂಬ ಭಯವೇ ಕಾರಣ. ಅದರೊಂದಿಗೆ ಅನುಭವ, ಆತ್ಮಾವಿಶ್ವಾಸ, ಮಾರ್ಗದರ್ಶನ ಮತ್ತು ಅಭ್ಯಾಸದ ಕೊರತೆಯೂ ಹಿಂಜರಿಕೆಗೆ ಕಾರಣವಾಗುತ್ತದೆ. ಹಾಗಾದರೆ ಹಿಂಜರಿಕೆಯಿಂದ ಹೊರಬರುವ ದಾರಿಯೇನು?

ಸೋಲಲು ಭಾಗವಹಿಸಿ: ಮೊದಲೇ ಹೇಳಿದಂತೆ ನಾವು ಯಾವುದೇ ಒಂದು ಕೆಲಸ ಮಾಡಲು ಹೊರಟಾಗ ನಮ್ಮ ಮನಸ್ಸು ಆ ವಿಷಯದ ಪೂರ್ವಾನುಭವವನ್ನು ಹುಡುಕುತ್ತದೆ. ಆದರೆ ನಮಗೆ ಅನುಭವದ ಕೊರತೆ ಇದೆ. ಅದರೊಂದಿಗೆ ಜನ ಏನು ಮಾತಾಡಿಕೊಳ್ಳುವರೋ ಎಂಬ ಭಯವೂ ಇದೆ. ಇದಕ್ಕಾಗಿ ಮೊದಲು ನಮ್ಮ ಮನಸ್ಸಿಗೆ ಅನುಭವವನ್ನು ಕೊಡಬೇಕು. ಇದಕ್ಕಾಗಿ ನಾವು ಧೈರ್ಯದಿಂದ ಎಲ್ಲದಕ್ಕೂ ಮುನ್ನುಗ್ಗಬೇಕು. ನಾನು ಸೋಲಲೆಂದೇ ಭಾಗವಹಿಸುತ್ತಿದ್ದೇನೆ. ಜನ ವೇದಿಕೆಯಲ್ಲಿ ನನ್ನನ್ನು ನೋಡಿ ನಗಲಿ, ನನಗೇನೂ ಸಮಸ್ಯೆ ಇಲ್ಲ. ನಾನೂ ಅವರೊಂದಿಗೆ ನಗುತ್ತೇನೆ. ಈ ರೀತಿಯ ಮನಸ್ಥಿತಿ ರೂಡಿಸಿಕೊಳ್ಳಿ. ಎಷ್ಟು ಬಾರಿ ಸೋಲುತ್ತೇವೋ ನಮಗೆ ಅನುಭವಗಳು ಜಾಸ್ತಿ ಆಗುತ್ತದೆ. ಇನ್ನೂ ಸಾಧಿಸೋಣ ಎಂಬ ಛಲ ಜಾಸ್ತಿ ಆಗುತ್ತದೆ.

ಆತ್ಮವಿಶ್ವಾಸವನ್ನು ಹೆಚ್ಚಿಸುವ ವಿಧಾನ: ನಾವು ಅನೇಕ ಬಾರಿ ಸೋತಾಗ ನಮ್ಮ ವೈಫ‌ಲ್ಯಕ್ಕೆ ಕಾರಣಗಳು ಮತ್ತು ನಮ್ಮ ದೌರ್ಬಲ್ಯಗಳೇನೆಂದು ತಿಳಿಯುತ್ತದೆ. ಆಗ ನಾವು ಅದರ ಕುರಿತಂತೆ ಅಭ್ಯಾಸ ಮಾಡಬೇಕಾಗುತ್ತದೆ. ಅದು ಹೇಗೆಂದರೆ ಕನ್ನಡಿಯ ಎದುರು ನಿಂತು ಐದರಿಂದ ಹತ್ತು ನಿಮಿಷ ಮಾತನಾಡುವುದು. ಅದು ನಮ್ಮ ಗುರಿಯ ಬಗ್ಗೆ ಆಗಿರಲಿ, ನಮ್ಮ ಗೆಳೆಯರು, ನಮ್ಮ ಮನೆ ಹೀಗೇ ಕನ್ನಡಿಯ ಎದುರು ನಿಂತು ಪ್ರತಿದಿನ ಮಾತನಾಡಿ. ಇದನ್ನು ಅಭ್ಯಾಸ ಮಾಡಿದರೆ ಧೈರ್ಯ, ಆತ್ಮವಿಶ್ವಾಸ ತಂತಾನೆ ಹೆಚ್ಚುತ್ತದೆ ಮತ್ತು ಹಿಂಜರಿಕೆ ಕಡಿಮೆಯಾಗುತ್ತದೆ. ಅನಂತರ ಈ ವಿಧಾನವನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿಕೊಳ್ಳಬಹುದು.

ಉತ್ತಮ ಮಾರ್ಗದರ್ಶಕರ ಆಯ್ಕೆ: ಮುಂದೆ ಗುರಿ, ಹಿಂದೆ ಗುರು ಇದ್ದರೆ ಎಂತಹದ್ದನ್ನು ಕೂಡ ಸಾಧಿಸಬಹುದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದ್ದರಿಂದ ಸರಿಯಾದ ಗುರುಗಳಿಂದ ಮಾರ್ಗದರ್ಶನ ಪಡೆದರೆ, ಅವರ ಅನುಭವಗಳು, ಸಲಹೆಗಳು ನಮ್ಮ ಹಿಂಜರಿಕೆಯನ್ನು ದೂರ ಮಾಡುವಲ್ಲಿ ಸಹಾಯಕವಾಗುತ್ತದೆ. ಆದ್ದರಿಂದ ಯುವಜನತೆ ಇಂತಹ ದಾರಿಯಲ್ಲಿ ಮುಂದೆ ಸಾಗಿದರೆ ಖಂಡಿತ ಹಿಂಜರಿಕೆಯಂತಹ ಸಮಸ್ಯೆಗಳಿಂದ ಪಾರಾಗಿ ತಮ್ಮ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡಾಗ ತಮ್ಮ ಕನಸು, ಗುರಿಯನ್ನು ಸಾಧಿಸುವಲ್ಲಿ ಯಾವುದೇ ಸಂಶಯವಿಲ್ಲ.

Advertisement

 ಚೈತನ್ಯ ಆಚಾರ್ಯ

ಕೊಂಡಾಡಿ

Advertisement

Udayavani is now on Telegram. Click here to join our channel and stay updated with the latest news.

Next