Advertisement
ಹೌದು, ನೀರಿನ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಹೇಗೆ ಬದ್ಧವೈರಿಗಳಾಗಿ ದಶಕಗಳಿಂದ ಪರಸ್ಪರ ಯೋಜನಾ ಬದ್ಧತೆ ಕೊರತೆ ಅನುಭವಿಸುತ್ತ ಬಂದವೋ, ಅದೇ ಮಾದರಿಯಲ್ಲಿ ಇದೀಗ ಅರಣ್ಯ ಇಲಾಖೆ ಮತ್ತು ಇಂಧನ ಇಲಾಖೆ ಮಧ್ಯೆ ವೈರುಧ್ಯ ಗೋಚರಿಸುತ್ತಿದೆ. ರಸ್ತೆ ಮಾಡಿದ ಮರುದಿನವೇ ನೀರಿಗಾಗಿ ನೆಲ ಅಗೆಯುವಂತೆ, ವಿದ್ಯುತ್ ಸಂಪರ್ಕ ಜಾಲ ಸುಧಾರಿಸಲು ನೆಟ್ಟ ಗಿಡಗಳಿಗೆ ಕತ್ತರಿ ಹಾಕುತ್ತಿದೆ ಹೆಸ್ಕಾಂ.
Related Articles
Advertisement
2019-2022ರವರೆಗೆ ಬಲಿಯಾದ ಮರಗಳು
ಕಾಮಗಾರಿಗಳ ನೆಪದಲ್ಲಿ ಕಡಿದು ಹಾಕಿದ ಮರಗಳ ಸಂಖ್ಯೆ 650
ಅನಧಿಕೃತವಾಗಿ ಕಡಿದು ಹಾಕಿದ ಮರಗಳ ಸಂಖ್ಯೆ 1500ಕ್ಕೂ ಹೆಚ್ಚು
ಟೆಂಡರ್ ಮೂಲಕ ಅರಣ್ಯ ಇಲಾಖೆ ಕಟಾವು ಮಾಡಿದ ಗಿಡಗಳ ಸಂಖ್ಯೆ 280ಕ್ಕೂ ಹೆಚ್ಚು
ನೆಟ್ಟ ಸಸಿಗಳಲ್ಲಿ ಬದುಕಿ ಉಳಿಯುವ ಪ್ರಮಾಣ ಶೇ.23 ಮಾತ್ರ
10 ವರ್ಷಗಳಿಗೆ ಬಂದು ತಲುಪಿ ಗಟ್ಟಿ ಮರವಾಗುವ ಗಿಡಗಳ ಪ್ರಮಾಣ ಶೇ.5 ಮಾತ್ರ
ಗಿಡ ನೆಡಲು ರೈತರ ಹಿಂದೇಟು
ಅರಣ್ಯ ಇಲಾಖೆ ಪ್ರತಿವರ್ಷ ಲಕ್ಷ ಲಕ್ಷ ಸಸಿಗಳನ್ನು ನೆಡಲು ಸಾರ್ವಜಕರಿಗೆ ಹಂಚಿಕೆ ಮಾಡುತ್ತದೆ. ಈ ಪೈಕಿ ರೈತರಿಗೆ ಹೊಲಗಳಲ್ಲಿ ನೆಡಲು ಸಾಗುವಾನಿ, ಅಕೇಶಿಯಾ, ಬಿದಿರು ಮತ್ತು ಹಣ್ಣಿನ ಸಸ್ಯಗಳು ಸೇರಿ 20ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ನೀಡುತ್ತಾರೆ. ತೇಗದ ಸಸಿ ನೆಟ್ಟು ಪೋಷಿಸಲು ರೈತರಿಗೆ ಸಹಾಯಧನ ಕೂಡ ಇದೆ. 20 ವರ್ಷಗಳ ಹಿಂದೆ ಜಲಾನಯನ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ನೆಟ್ಟಿರುವ 12 ಲಕ್ಷಕ್ಕೂ ಅಧಿಕ ತೇಗದ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ಕಠಿಣ ಕಾನೂನು ವಿಧಿಸಿದ್ದು, ಇದರಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ ಹೊಸದಾಗಿ ಹೊಲದ ಬದುಗಳು, ಇಕ್ಕೆಲಗಳಲ್ಲಿ ಗಿಡ ನೆಡಲು ಹಿಂದೇಟು ಹಾಕುತ್ತಿದ್ದಾರೆ.
ನಗರದಲ್ಲೂ ಗಿಡ ಕಡಿತ
ಹೆಸ್ಕಾಂನ ಕೊಡಲಿ ಏಟುಗಳು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವಳಿನಗರದಲ್ಲಿ ಅಳಿದುಳಿದ ದೈತ್ಯ ಮರಗಳ ಬುಡಕ್ಕೂ ವಿದ್ಯುತ್ ಲೈನ್ ಸುಧಾರಿಸುವ ನೆಪದಲ್ಲಿ ಕೊಡಲಿ ಏಟು ಬೀಳುತ್ತಲೇ ಇವೆ. ಕೆಸಿಡಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ಬೋರಂಗಿ ಗಿಡಗಳಿಗೆ ಪ್ರತಿವರ್ಷ ಕೊಡಲಿ ಪೆಟ್ಟು ಪಿಕ್ಸ್. ಸುಭಾಷ ರಸ್ತೆ, ವಿಜಯಾ ರಸ್ತೆ, ಸಂಗಮ್ ಟಾಕೀಸ್ ರಸ್ತೆಗಳ ಗಿಡಗಳ ಮೇಲೆ ಕೊಡಲಿ ನೇತಾಡುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಇಡೀ ಠಿಕಾರೆ ರಸ್ತೆಗೆ ನೆರಳಾಗಿದ್ದ ಗಿಡಗಳು ಇದೀಗ ಮಾಯವಾಗಿದ್ದು, ರಣಬಿಸಿಲು ದರ್ಶನವಾಗುತ್ತಿದೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿನ ಹಳೆಯ ಗಿಡಮರಗಳಿಗೂ ಕೊಡಲಿ ಕಾಟ ಶುರುವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಹುಬ್ಬಳ್ಳಿ ನಗರದಲ್ಲಿ ಮಾತ್ರ 180 ಗಿಡಗಳನ್ನು ಕಡಿದು ಹಾಕಲಾಗಿದೆ. ಧಾರವಾಡ ರೈಲ್ವೆ ಸ್ಟೇಷನ್ ರಸ್ತೆಯಲ್ಲಿನ ದೈತ್ಯ ಮರಗಳೆಲ್ಲವೂ ಮಸಣ ಸೇರಿಯಾಗಿವೆ.
ಫಲಕಗಳ ಹಾವಳಿ: ಧಾರವಾಡದಲ್ಲಿ ತಲೆ ಎತ್ತಿರುವ ಖಾಸಗಿ ಟ್ಯೂಶನ್ ಕ್ಲಾಸ್‌ಗಳು, ಕರಿಯರ್ ಅಕಾಡೆಮಿಗಳು ತಮ್ಮ ಕ್ಲಾಸಿನ ಜಾಹೀರಾತಿಗಾಗಿ ಫಲಕಗಳನ್ನು ರಸ್ತೆ ಪಕ್ಕದ ಗಿಡಗಳ ಮೇಲೆ ಹಾಕುತ್ತಿದ್ದಾರೆ. ಕೆಲವು ಕಡೆಗಳಲ್ಲಂತೂ ಆರು ಇಂಚಿನ ಮೊಳೆ ಜಡಿಯಲಾಗುತ್ತಿದೆ. ಅಷ್ಟೇಯಲ್ಲ, ಬಟ್ಟೆ ಅಂಗಡಿಗಳು, ಬಾಡಿಗೆಗೆ ಹೊಸ ಕಾಂಪ್ಲೆಕ್ಸ್ ಗಳು ಜಾಹೀರಾತುಗಳಿಗಾಗಿ ಗಿಡಮರಗಳನ್ನೇ ಅವಲಂಬಿಸುತ್ತಿವೆ. ಪರಿಸರ ದಿನಾಚರಣೆ ಸಂದರ್ಭದಲ್ಲಿ ಲಕ್ಷ ಲಕ್ಷ ಗಿಡಮರಗಳನ್ನು ನೆಟ್ಟು ಪೋಷಣೆ ಮಾಡುವ ಘೋಷವಾಕ್ಯಗಳು ರಾರಾಜಿಸುತ್ತವೆ. ಆದರೆ ಒಮ್ಮೆ ನೆಟ್ಟ ಗಿಡಮರಗಳು ಎಷ್ಟು ಪ್ರಮಾಣದಲ್ಲಿ ಬದುಕಿ ಉಳಿಯುತ್ತಿವೆ ಎನ್ನುವ ಕುರಿತು ಅರಣ್ಯ ಇಲಾಖೆ ಲೆಕ್ಕವಿಟ್ಟಂತೆ ಕಾಣುತ್ತಿಲ್ಲ.
ಸರ್ಕಾರ ರಸ್ತೆಯ ಒಂದು ಬದಿಯನ್ನು ಸಂಪೂರ್ಣವಾಗಿ ವಿದ್ಯುತ್, ಒಳಚರಂಡಿ, ಕೇಬಲ್, ಗ್ಯಾಸ್‌ಲೈನ್, ನೀರಿನ ಪೈಪ್‌ಲೈನ್ ಗೆ ಮೀಸಲಿಟ್ಟು ಒಂದು ಬದಿಯಲ್ಲಿ ಮಾತ್ರ ಗಿಡ ನೆಡುವಂತೆ ಕಾನೂನು ರೂಪಿಸಬೇಕು. ಇಲ್ಲವಾದರೆ ರಸ್ತೆಪಕ್ಕದಲ್ಲಿ ಗಿಡಗಳಿರಲು ಸಾಧ್ಯವೇ ಇಲ್ಲ. –ಶಂಕರ ಕುಂಬಿ, ಹು-ಧಾ ನಾಗರಿಕ ಪರಿಸರ ಸಮಿತಿ
ಅರಣ್ಯ ಇಲಾಖೆ ಸಾಕಷ್ಟು ಸಲ ಗಿಡ ಕಡಿಯುವ ವಿಚಾರದಲ್ಲಿ ಹೆಸ್ಕಾಂಗೆ ತಕರಾರು ಸಲ್ಲಿಸಿದೆ. ಆದರೂ ಅವರ ಕರ್ತವ್ಯ ಅವರು ಮಾಡಿಬಿಡುತ್ತಾರೆ. ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದು ಅರಣ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಇದರಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. –ಅರಣ್ಯ ಇಲಾಖೆ ಹಿರಿಯ ಅಧಿಕಾರಿ, ಧಾರವಾಡ
ಬಸವರಾಜ ಹೊಂಗಲ್