Advertisement

ಹೆಸರು ಉಂಡೆ ಆಸೆಗೆ ಶಾಲೆಗೆ ಹೋಗುತ್ತಿದ್ದೆ!

01:08 AM Dec 22, 2019 | Lakshmi GovindaRaj |

ಬೆಂಗಳೂರು: “ಅಮ್ಮ ಮಾಡುತ್ತಿದ್ದ ಹೆಸರು ಉಂಡೆ ಅಂದರೆ ನನಗೆ ಬಹಳ ಇಷ್ಟ. ಆ ಹೆಸರು ಉಂಡೆ ಮೇಲಿನ ಆಸೆಯೇ ನನ್ನ ಶಾಲೆಗೆ ಹೋಗುವಂತೆ ಮಾಡಿತು’. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಅತಿಥಿಯಾಗಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ.

Advertisement

ನಮ್ಮೂರು ಭತ್ತದ ಕಣಜವೆಂದೇ ಖ್ಯಾತಿಯಾಗಿರೋ ಗಂಗಾವತಿ. ನಮ್ಮದು ಆರ್ಥಿಕವಾಗಿ ಸ್ಥಿತಿವಂತ ಕುಟುಂಬ. ನಾನು ಸಣ್ಣವನಿದ್ದಾಗ ಶಾಲೆಗೆ ಹೋಗಲು ಅಳುತ್ತಿದ್ದೆ. ನಮ್ಮ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದವರು ಶಾಲೆಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದರು. ಆದರೆ ನಮ್ಮ ಅಮ್ಮ, “ನೀನು ಶಾಲೆಗೆ ಹೋಗದೆ ಇದ್ದರೆ ಹೆಸರು ಉಂಡೆ ಕೊಡುವುದಿಲ್ಲ ನೋಡು’ ಎನ್ನುತ್ತಿದ್ದರು.

ಹೀಗಾಗಿಯೇ ಅಮ್ಮನ ಆ ಹೆಸರು ಉಂಡೆ ಮೇಲಿನ ಪ್ರೀತಿಯಿಂದ ನಾನು ಶಾಲೆ ಮೆಟ್ಟಿಲೇರಿದೆ ಎಂದು ಹೇಳಿದರು. ಗಂಗಾವತಿಯ ಸರ್ಕಾರಿ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿದೆ. ಧಾರವಾಡದಲ್ಲಿ ಪ್ರೌಢ ಶಾಲೆ ಹಾಗೂ ಹೊಸಪೇಟೆಯಲ್ಲಿ ಬಿಎಸ್‌ಸಿ ಪದವಿ ಪೂರೈಸಿದೆ. ಮನೆಗೆ ಬರುತ್ತಿದ್ದ ವೈದ್ಯರ ಕಿಟ್‌ ನೋಡಿ ಜತೆಗೆ ಅವರಿಗೆ ಸಿಗುತ್ತಿದ್ದ ಗೌರವ ನೋಡಿ ವೈದ್ಯನಾಗಬೇಕೆಂದು ಕನಸು ಕಂಡಿದ್ದೆ.

ಆದರೆ ವಕೀಲ ವೃತ್ತಿ ಮೇಲಿನ ಪ್ರೀತಿ ನನ್ನನ್ನು ನ್ಯಾಯಾಧೀಶನ ಹುದ್ದೆವರೆಗೂ ಕರೆತಂತು ಎಂದು ನುಡಿದರು. ನಾನು ಸಾಹಿತಿ ಅಲ್ಲ. ಆದರೆ ಶಿವರಾಮ ಕಾರಂತ, ತ್ರಿವೇಣಿ ಸೇರಿದಂತೆ ಹಲವು ಸಾಹಿತಿಗಳ ಕೃತಿಗಳನ್ನು ಓದಿದ್ದೇನೆ. ಈಗಾಗಲೇ ಮಕ್ಕಳಿಗಗಾಗಿ ಒಂದೇರಡು ಪುಸ್ತಕಗಳನ್ನು ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನುಕೂಲವಾಗುವ ಒಂದೇರಡು ಕೃತಿಗಳನ್ನು ಬರೆಯುವ ಆಲೋಚನೆಯಿದೆ ಎಂದರು.

ಮತಗಟ್ಟೆಯೇ ವ್ಯವಸ್ಥೆಯನ್ನು ಬದಲಾಯಿಸಬೇಕು: ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಹೀಗಾದರೆ ಪರಿಸ್ಥಿತಿ ಸುಧಾರಣೆ ಹೇಗೆ ?. ಸುಪ್ರೀಂ ಕೋರ್ಟ್‌ ಕೆಲವು ಶಾಸಕರನ್ನು ಅನಾರ್ಹರು ಎಂದು ಹೇಳಿತು. ಅವರು ಸ್ಪರ್ಧೆಗೆ ನಿಲ್ಲಬಾರದು ಎಂದು ಕಾನೂನಿನಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತು. ಆದರೆ ಮತಗಟ್ಟೆ ವ್ಯವಸ್ಥೆ ಮತ್ತೆ ಅವರನ್ನು ಆಯ್ಕೆ ಮಾಡಿತು ಸಭೀಕರೊಬ್ಬರ ಪ್ರಶ್ನೆಗೆ ಅರಳಿ ನಾಗರಾಜ ಉತ್ತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ಉಪಸ್ಥಿತರಿದ್ದರು.

Advertisement

“ಬಂಗಾರದ ಮನುಷ್ಯ’ ಕೃಷಿಗೆ ಪ್ರೇರಣೆ: ನಾನು ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೆ. ಡಾ.ರಾಜ್‌ಕುಮಾರ್‌ ಅಭಿನಯದ “ಬಂಗಾರದ ಮನುಷ್ಯ’ ಸಿನಿಮಾ ಎಲ್ಲೆಲ್ಲದಂತೆ ನನ್ನ ಕಾಡಿತು. ಹೀಗಾಗಿಯೇ ಬಿಎಸ್‌ಸಿ ಪದವಿ ಮುಗಿಸಿ ಕೃಷಿಯಲ್ಲಿ ತೊಡಗಿಕೊಂಡೆ. ನಾಲ್ವರು ಸಹೋದರರನ್ನು ಓದಿಸಲು ಮುಂದಾದೆ. ಆದರೆ ಅವರು ಓದಿನಲ್ಲಿ ಆಸಕ್ತಿ ತೋರದ ಕಾರಣ ಮತ್ತೆ ಬಳ್ಳಾರಿಯಲ್ಲಿ ಕಾನೂನು ಪದವಿ ಪಡೆದೆ ಎಂದು ನ್ಯಾ.ಅರಳಿ ನಾಗರಾಜ ಅವರು ಬಾಳ ಪಯಣ ಮೆಲಕು ಹಾಕಿದರು.

ನ್ಯಾಯಾಂಗ ಕ್ಷೇತ್ರದ ಬಗ್ಗೆ ಕೆಲವು ತಪ್ಪು ಭಾವನೆಗಳು ಇದ್ದವು. ಆದರೆ ವಕೀಲನಾದ ಮೇಲೆ ಅವೆಲ್ಲಾ ಮರೆಯಾದವು. ಆಕಾಶವಾಣಿಯಲ್ಲಿ ಬಂದ ಪ್ರಕಟಣೆ ಕೇಳಿ ನನ್ನಜ್ಜ, ನ್ಯಾಯಾಧೀಶರ ಹುದ್ದೆಗೆ ಅರ್ಜಿಹಾಕು ಎಂದು ಹೇಳಿದರು. ಅವರ ಮಾತಿನಂತೆ ಅರ್ಜಿ ಹಾಕಿ ನ್ಯಾಯಾಧೀಶನಾದೆ. ಹಿರಿಯ ನ್ಯಾ. ಶಿವರಾಜ್‌ ಪಾಟೀಲ್‌ ಅವರ ಕಾರ್ಯ ವೈಖರಿ ನನ್ನ ಮೇಲೆ ಪ್ರಭಾವ ಬೀರಿತು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next