ಎಕ್ಕಾರು: ಜಲ ಸಂರಕ್ಷಣೆಯಲ್ಲಿ ಎಲ್ಲರದ್ದೂ ಒಂದೇ ವಿಧಾನವಿದೆ ಎಂದೇನೂ ಇಲ್ಲ. ಒಬ್ಬೊಬ್ಬರದ್ದು ಒಂದೊಂದು ವಿಧಾನ. ಆದರೆ ಗುರಿ ಮಾತ್ರ ಒಂದೇ. ಅದು ಜಲ ಸಂರಕ್ಷಣೆ. ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಕ್ಕಾರಿನ ಕ್ಲೇರೆನ್ಸ್ ಡಿ’ ಕುನ್ಹಾ ಬರೀ ತಮ್ಮ ಆರ್ ಸಿಸಿ ಮನೆ ಛಾವಣಿಯ ನೀರನ್ನಷ್ಟೇ ಇಂಗಿಸು ವುದಿಲ್ಲ. ರಸ್ತೆ ಯಲ್ಲಿ ಹರಿ ಯುವ ನೀರನ್ನೂ ತಮ್ಮ ಮನೆಯ ಬಾವಿ ಸಮೀಪ ಹೊಂಡ ತೆಗೆದು ಇಂಗಿಸುತ್ತಾರೆ. ಇದರಿಂದ ಅವರಂತೂ ಬೇಸಗೆಯಲ್ಲಿ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ.
ಮನೆಯ ಛಾವಣಿಯ ನೀರನ್ನೇ ರಸ್ತೆಯಲ್ಲಿ ಅಥವಾ ಚರಂಡಿಗೆ ಬಿಟ್ಟು ತಣ್ಣಗೆ ಕುಳಿತು ಟಿವಿ ನೋಡುತ್ತಾ ಕಾಲ ಕಳೆಯುವ ಪರಿಸ್ಥಿತಿ ಇಂದಿನದು. ಅಂಥದ್ದರಲ್ಲಿ ಕೃಷಿಕ ಕ್ಲೇರೆನ್ಸ್ ಡಿ’ಕುನ್ಹಾ ಅವರು ಆರ್‌ಸಿಸಿ ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರನ್ನು ಪೈಪಿನ ಮೂಲಕ ಒಂದೆಡೆ ಬೀಳುವಂತೆ ಮಾಡುತ್ತಾರೆ. ಅದನ್ನು ಇಂಗು ಗುಂಡಿಗೆ ಹರಿಸಿ ಇಂಗಿಸು ತ್ತಾರೆ. ಜತೆಗೆ ಮನೆ ಎದುರಿನ ರಸ್ತೆಯಲ್ಲಿ ಬಿದ್ದು ಸಾಗುವ ನೀರನ್ನೂ ಆ ಹೊಂಡಕ್ಕೆ ಹರಿಸಿ ಇಂಗಿಸುತ್ತಾರೆ.ಅದಕ್ಕಾಗಿ ಒಂದು ಸಣ್ಣ ತೋಡನ್ನು ನಿರ್ಮಿಸಿದ್ದು, ಅದರ ಮೂಲಕ ನೀರು ಹೊಂಡಕ್ಕೆ ಬೀಳುತ್ತದೆ. 1999ರಲ್ಲಿ ಅವರು 25 ಅಡಿಯಷ್ಟು ಆಳದ ಬಾವಿಯನ್ನು ತೋಡಿದ್ದರು. 2002ರಲ್ಲಿ ಮನೆ ಕಟ್ಟಿದರು. ನೀರು ಸಾಕಾಗದು ಎನಿಸತೊಡಗಿತು. ಮತ್ತೆ 10 ಅಡಿ ಆಳ ತೋಡಿದರು. ಆಗಲೂ ನೆಮ್ಮದಿಯಾಗಲಿಲ್ಲ. ಬಳಿಕ ಇಂಗುಗುಂಡಿಯ ಮೊರೆ ಹೋದರು.
ಬಾವಿಯ ಸಮೀಪವೇ 10 ಅಡಿ ಅಳ ಹಾಗೂ 8 ಅಡಿ ಅಗಲ, 5ಅಡಿ ಉದ್ದದ ಹೊಂಡ ತೋಡಿದರು.ಅದಕ್ಕೆ ಮೊದಲಿಗೆ ಜಲ್ಲಿ ಹಾಗೂ ಮರಳನ್ನು ಹಾಕಿ ತುಂಬಿಸಿದರು. ಮನೆ ಆರ್‌ಸಿಸಿ ಆದ ಕಾರಣ ಮಳೆ ನೀರು ಒಂದು ಪೈಪು ಮೂಲಕ ಒಂದೆಡೆ ಬಂದು ಈ ಹೊಂಡಕ್ಕೆ ಬೀಳುವಂತೆ ಮಾಡಿದರು. ಅದು ಸಾಲದೆಂದು ಮಳೆಗಾಲ ದಲ್ಲಿ ಮನೆಯ ಎದುರಿನ ಲ್ಲಿರುವ ರಸ್ತೆಯಲ್ಲಿ ಹರಿಯುವ ನೀರಿಗೂ ತೋಡು ಮಾಡಿ ಹರಿಸಿದರು. ಇದೆಲ್ಲದರ ಪರಿಣಾಮ ಇವರ ಬಾವಿಯಲ್ಲಷ್ಟೇ ನೀರು ಬಂದಿಲ್ಲ; ಸುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.
ಈ ಹೊಂಡ ಮಾಡಿದ ಮೇಲೆ ನನಗೆ ನೀರಿನ ಸಮಸ್ಯೆ ಬಂದಿಲ್ಲ.ರಸ್ತೆ ಹಾಗೂ ಮನೆ ಛಾವಣಿಯ ನೀರು ಪೋಲಾಗದಂತೆ ನೋಡುತ್ತಿದ್ದೇನೆ. ಈ ಬೇಸಗೆಯಲ್ಲೂ ನನಗೆ ನೀರು ಕಡಿಮೆಯಾಗಿಲ್ಲ. ಮಲ್ಲಿಗೆ,ಕರಿಮೆಣಸು,ತೆಂಗು , ಕಂಗು ,ವೀಳ್ಯದೆಲೆ ಕೃಷಿಯನ್ನು ಮಾಡುತ್ತಿದ್ದೇನೆ.ವರ್ಷ ವರ್ಷ ಹೊಂಡಕ್ಕೆ ಬಿದ್ದ ಮಣ್ಣು ಮಾತ್ರ ತೆಗೆಯುತ್ತೇನೆ.ಇದರಿಂದ ನೀರು ಇಂಗುತ್ತದೆ.ಸುಲಭ ವಿಧಾನ, ಶುದ್ಧ ನೀರು ಸಿಗುತ್ತದೆ.ಎಲ್ಲರೂ ಮಾಡಿದರೆ ಎಲ್ಲರಿಗೂ ಲಾಭವಿದೆ.ತಾನು ಇಂಗಿಸಿದ ನೀರು ತನಗೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನೀರಿಗೆ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಕ್ಲೇರೆನ್ಸ್.
ಹೀಗೂ ಉಳಿಸಿ
ನೀವು ಪ್ರವಾಸಕ್ಕೆ ಹೋಗುತ್ತೀರಾ ಎಂದುಕೊಳ್ಳಿ. ಅಲ್ಲಿನ ಹೊಟೇಲ್‌ಗಳಲ್ಲಿ ಕೊಡುವ ಟವೆಲ್‌ಗಳನ್ನು ಅಗತ್ಯವಿದ್ದರೆ ಮಾತ್ರ ನಿತ್ಯವೂ ಬಳಸಿ.ಇಲ್ಲದಿದ್ದರೆ ಎರಡು ದಿನ ಕ್ಕೊಮ್ಮೆ ಒಂದು ಟವೆಲ್ ಬಳಸಿದರೂ ನೀವು ಜಲಸಂರಕ್ಷಣೆಯಲ್ಲಿ ಭಾಗಿಯಾದಂತೆ.
ನೀರಿನ ಗಣಿತ
ಸುಮಾರು 4 ಲೀಟರ್ ಮುಸುಕಿನ ಜೋಳದ ಮೂಲಕ ತೆಗೆಯುವ ಎಥನಾಲ್ ಅನ್ನು ಉತ್ಪತ್ತಿ ಮಾಡಲು ಕನಿಷ್ಠ 645 ಲೀಟರ್ ನೀರನ್ನು ಬಳಸಬೇಕು. ಇದು ಮುಸುಕಿನ ಜೋಳದ ಉತ್ಪಾದನೆಯಿಂದ (ಕೃಷಿ) ಸಂಸ್ಕರಣೆ ಮಾಡುವವರೆಗೂ ಅನ್ವಯ. ನೀರಿಲ್ಲದೇ ಯಾವುದೂ ಇಲ್ಲ.
ಸುಬ್ರಾಯ ನಾಯಕ್