ಖಡಕ್ ವಿಲನ್ ರವಿಶಂಕರ್ ಮತ್ತೂಮ್ಮೆ ಆರ್ಭಟಿಸಲು ರೆಡಿಯಾಗಿದ್ದಾರೆ. ಈ ಬಾರಿ ಅವರ ಆರ್ಭಟ “ಹೆಬ್ಬುಲಿ’ ಎದುರು ಎಂಬುದು ವಿಶೇಷ. ಹೌದು, ಸುದೀಪ್ ನಾಯಕರಾಗಿರುವ “ಹೆಬ್ಬುಲಿ’ ಚಿತ್ರದಲ್ಲಿ ರವಿಶಂಕರ್ ವಿಲನ್ ಆಗಿ ನಟಿಸಿದ್ದಾರೆ. ಅರಸೀಕೆರೆ ಆಂಜನಪ್ಪನಾಗಿ ಅಯ್ಯಪ್ಪ ಸ್ವಾಮಿ ಭಕ್ತರ ಧಿರಿಸಿನಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಾಕೆ ಈ ಗೆಟಪ್, ಇದರ ಹಿಂದಿನ ರಹಸ್ಯವೇನು ಎಂದು ನೀವು ಕೇಳಿದರೆ ರವಿಶಂಕರ್ ಅದಕ್ಕೆ ಈಗಲೇ ಉತ್ತರಿಸಲು ರೆಡಿಯಿಲ್ಲ.
“ನನ್ನ ಗೆಟಪ್‌ಗೆ ಒಂದು ಕಾರಣವಿದೆ. ಅದು ಏನೆಂದು ಈಗಲೇ ಹೇಳ್ಳೋದಿಲ್ಲ. ಇನ್ನೆರಡು ದಿನ ಕಾದರೆ ಎಲ್ಲವೂ ನಿಮಗೇ ಗೊತ್ತಾಗುತ್ತದೆ. ಒಂದಂತೂ ಹೇಳಬಲ್ಲೆ, ತುಂಬಾ ಒಳ್ಳೆಯ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ ರವಿಶಂಕರ್.ಅಂದಹಾಗೆ, ಸುದೀಪ್ ಜೊತೆ ರವಿಶಂಕರ್ ನಟಿಸುತ್ತಿರುವ ಎಂಟನೇ ಸಿನಿಮಾವಿದು. “ಕೆಂಪೇಗೌಡ’ ಚಿತ್ರದ ಮೂಲಕ ಆರಂಭವಾದ ಅವರ ಜರ್ನಿ ಈಗ “ಹೆಬ್ಬುಲಿ’ವರೆಗೆ ಬಂದಿದೆ. ಈ ಜರ್ನಿಯನ್ನು ನೋಡಿದಾಗ ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ.
ಅದೇನೆಂದರೆ ಸುದೀಪ್ ಸಿನಿಮಾ ಎಂಬ ಕಾರಣಕ್ಕೆ ಅವರ ಎಲ್ಲಾ ಸಿನಿಮಾಗಳನ್ನು ರವಿಶಂಕರ್ ಒಪ್ಪಿಕೊಳ್ಳುತ್ತಾರಾ ಅಥವಾ ಪಾತ್ರಕ್ಕಾಗಿಯೇ ಎಂಬುದು. ಈ ಪ್ರಶ್ನೆಗೆ ರವಿಶಂಕರ್ ಉತ್ತರಿಸುತ್ತಾರೆ. “ಮೊದಲು ನಾನು ಸಿನಿಮಾ ಒಪ್ಪಿಕೊಳ್ಳೋದು ಸುದೀಪ್ ಎಂಬ ಕಾರಣಕ್ಕೆ. ಹಿಂದೆ ಮುಂದೆ ನೋಡದೇ ಸುದೀಪ್ ಸಿನಿಮಾ ಒಪ್ಪಿಕೊಳ್ಳಲು ಕಾರಣ ಸುದೀಪ್ ಮೇಲಿನ ನಂಬಿಕೆ. ಇವತ್ತು ನಾನು ಚಿತ್ರರಂದಲ್ಲಿರಲು ಕಾರಣ ಸುದೀಪ್. ಅಂದು ಅವರು ಕೊಟ್ಟ ಅವಕಾಶದಿಂದ ಈಗ ಚಿತ್ರರಂಗದಲ್ಲಿ ಬಿಝಿಯಾಗಿದ್ದೇನೆ.
ನನಗೆ ಸುದೀಪ್ ಮೇಲೆ ನಂಬಿಕೆ ಇದೆ. ಸುದೀಪ್ ಕಡೆಯಿಂದ ಕರೆಬಂದು ಪಾತ್ರವಿದೆ ಎಂದರೆ ಆ ಪಾತ್ರಕ್ಕೊಂದು ತೂಕವಿರುತ್ತದೆ ಎಂಬುದು ಸತ್ಯ. ಸುದೀಪ್‌ಗೆ ಯಾವ ಪಾತ್ರವನ್ನು ಯಾರು ಮಾಡಿದರೆ ಚೆಂದ ಎಂಬ ಅರಿವಿದೆ. ತಾನು ಹೇಳಿದರೆ ಮಾಡುತ್ತಾನೆ ಎಂಬ ಕಾರಣಕ್ಕೆ ಯಾವತ್ತೂ ಸುದೀಪ್ ಯಾರನ್ನೂ ಕರೆಯೋದಿಲ್ಲ. ಪಾತ್ರಕ್ಕೆ ಮಹತ್ವವಿದ್ದರಷ್ಟೇ ಕರೆಯುತ್ತಾರೆ. ನನ್ನ ವಿಷಯದಲ್ಲೂ ಅಷ್ಟೇ, ಸುದೀಪ್ ಜೊತೆಗಿನ ಎಂಟು ಸಿನಿಮಾಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ.
ಆ ಬಗ್ಗೆ ನನಗೆ ಖುಷಿ ಇದೆ’ ಎನ್ನುತ್ತಾರೆ. “ಹೆಬ್ಬುಲಿ’ ಚಿತ್ರದಲ್ಲಿ ರವಿಶಂಕರ್, ರವಿಕಿಶನ್ ಹಾಗೂ ಕಬೀರ್ ದುಹಾನ್ ಸಿಂಗ್ ನಟಿಸಿದ್ದಾರೆ. ಮೂವರು ವಿಲನ್‌ಗಳಿರುವ ಚಿತ್ರದಲ್ಲಿ ತಮಗೆ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ರವಿಶಂಕರ್, “ಖಂಡಿತಾ ಇಲ್ಲ’ ಎನ್ನುತ್ತಾರೆ. “ಚಿತ್ರದ ನಾಯಕನ ಪಾತ್ರ ಸ್ಟ್ರಾಂಗ್ ಆಗಿದೆ. ಆತ ಆರ್ಮಿ ಹಿನ್ನೆಲೆಯಿಂದ ಬಂದವನು. ಆತನ ಎದುರಿಸಲು ಮೂವರು ವಿಲನ್‌ಗಳಿರುತ್ತಾರೆ. ಮೂವರಿಗೂ ಸಮಾನ ಅವಕಾಶವಿದೆ.
ನನ್ನ ಸ್ಪೇಸ್‌ನಲ್ಲಿ ನಾನು ನಟಿಸುತ್ತೇನೆ. ಬೇರೆಯವರು ಹೇಗೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ’ ಎನ್ನುವುದು ರವಿಶಂಕರ್ ಮಾತು. ಇತ್ತೀಚಿನ ಚಿತ್ರಗಳನ್ನು ನೋಡಿದಾಗ ಹೀರೋ-ವಿಲನ್‌ಗಳ ಹೊಡೆದಾಟ, ಜಬರ್ದಸ್ತ್ ಫೈಟ್ ಕಡಿಮೆಯಾಗುತ್ತಿದೆ. ಸಿನಿಮಾಗಳ ಫೈಟ್ ಕೂಡಾ ಕ್ಲಾಸ್ ಆಗುತ್ತಿದೆ. ರವಿಶಂಕರ್ ಪ್ರಕಾರ, ಸಿನಿಮಾದಲ್ಲಿ ಹೀರೋ-ವಿಲನ್ ನಡುವಿನ ಫೈಟ್ ಇದ್ದರೇನೇ ಚೆಂದ.
ಪುರಾಣದಿಂದಲೂ ದುಷ್ಟ ಶಕ್ತಿಯನ್ನು ಶಿಷ್ಟಶಕ್ತಿಗಳು ನಾಶ ಮಾಡುತ್ತಾ ಬಂದಿರೋದನ್ನು ಓದುತ್ತಾ ಬಂದವರು ನಾವು. ನಮ್ಮ ಮನಸ್ಥಿತಿ ಕೂಡಾ ಅದಕ್ಕೆ ಹೊಂದಿಕೆಯಾಗಿದೆ. ಹಾಗಾಗಿ, ಸಿನಿಮಾಗಳಲ್ಲೂ ಹೀರೋ, ವಿಲನ್‌ಗೆ ಹೊಡೆದರೇನೇ ಮಜಾ’ ಎನ್ನುವ ಮೂಲಕ ಫೈಟ್‌ಗೆ ಜೈ ಎನ್ನುತ್ತಾರೆ ರವಿಶಂಕರ್.