ಇವನು ನಮ್ಮ ಮನೆಗೆ ನಿತ್ಯವೂ ಪೇಪರ್ ಹಾಕುವ ಹುಡುಗ. ನಮ್ಮನೆಗೆ ಮಳೆಗಾಲದಲ್ಲಿ ಇವನ ಪ್ರಯಾಣ ಪ್ರಾರಂಭವಾಯಿತು. ಮೊದಮೊದಲು ಯಾರ ಪರಿಚಯವೂ ಅವನಿಗೆ ಇರಲಿಲ್ಲ. ಮಳೆಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಪೇಪರ್‌ಗೂ ಪ್ಲಾಸ್ಟಿಕ್ ಕವರ್ ಹೊದಿಸಿಕೊಂಡು ರಕ್ಷಿಸಿಕೊಳ್ಳುವಾಗ ಪಾಪ ಅನ್ನಿಸುತ್ತಿತ್ತು…
ಚಿನ್ನಾರಿ ಮುತ್ತ, ಹೇಗಿದ್ದವನು ಹೇಗಾದ ಅಂತ ನಿಜಕ್ಕೂ ನಾನಂತೂ ಕಂಡಿಲ್ಲ. ಆದರೆ, ಈತ ಹೇಗಾದ ಎನ್ನುವುದನ್ನು ನಿಮ್ಮ ಕಣ್ಣೆದುರು ಚಿತ್ರವಾಗಿಸಬಲ್ಲೆ. ಮಳೆಯಿಂದ ರಕ್ಷಿಸಿಕೊಳ್ಳಲು ತಲೆಗೊಂದು ಪ್ಲಾಸ್ಟಿಕ್ ಕವರ್, ಹಳೆಯದೊಂದು ಸ್ಲಿಪ್ಪರ್ ಹಾಕಿಕೊಂಡು, ತಲೆಯವರೆಗೂ ಕೆಸರು ಎರಚಿಕೊಂಡು ಬರುತ್ತಿದ್ದ. ಪ್ರತಿ ಮಾತಿಗೂ, “ಓಕೆ ಮೇಡಂ… ಓಕೆ ಮೇಡಂ’ ಎಂದು ತಲೆಯಾಡಿಸುತ್ತಿದ್ದ ಇವನ ಕಣ್ಣಲ್ಲೀಗ ಮಿಂಚೊಂದು ಕಾಣಿಸತೊಡಗಿದೆ. ಚೆಂದಗೆ ಕ್ರಾಪ್ ತೆಗೆದು ನಗು ಬೀರುತ್ತಾನೆ; ಹೊಸ ಸ್ಕೂಟರ್ ಏರಿಕೊಂಡು ಅಂಬಾರಿಯಲ್ಲಿ ಕುಳಿತಂತೆ ಕೆಲವೊಮ್ಮೆ ಗಾಂಭೀರ್ಯ ತೋರುವುದೂ ಇದೆ. ಕಿವಿಯ ಗೂಡೊಳಗೆ ಇಯರ್‌ಫೋನ್ ತೂರಿಸಿಕೊಂಡು, ಯಾವುದೋ ಹಾಡು ಕೇಳುತ್ತಿರುತ್ತಾನೆ. ಮಾಸಿದ ಅಂಗಿಯ ಮೇಲೊಂದು ಜರ್ಕಿನ್ ತೊಟ್ಟು, ಈ ಮಳೆಗಾಲ ಒಡ್ಡುವ ಎಲ್ಲ ಸವಾಲುಗಳಿಗೆ ಮೈಯೊಡ್ಡಿ ನಿಲ್ಲುವ ಹುರುಪಿನಲ್ಲಿದ್ದಾನೆ.
ಇವನು, ನಮ್ಮ ಮನೆಗೆ ನಿತ್ಯವೂ ಪೇಪರ್ ಹಾಕುವ ಹುಡುಗ. ಮೊದಮೊದಲು ಇವನು ನಮಗೆ ಗೊತ್ತೇ ಇರಲಿಲ್ಲ. ಮಳೆಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಪೇಪರ್‌ಗೂ ಪ್ಲಾಸ್ಟಿಕ್ ಕವರ್ ಹೊದಿಸಿಕೊಂಡು ರಕ್ಷಿಸಿಕೊಳ್ಳುವಾಗ ಪಾಪ ಅನ್ನಿಸುತ್ತಿತ್ತು. ಮತ್ತೆ ಒಂದು ಹಳೆಯದಾದ ಸ್ಕೂಟರ್‌ನಲ್ಲಿ ಬರುತ್ತಿದ್ದ. ಆ ಸ್ಕೂಟರೊ, ಆಗಾಗ್ಗ ಕೈಕೊಡುತ್ತಿತ್ತು. ಒಮ್ಮೆ ಪೇಪರ್ ಕೊಡಲೆಂದು ನಿಲ್ಲಿಸಿದರೆ ಅದು ಮತ್ತೆ ಸ್ಟಾರ್ಟ್ ಆಗುತ್ತಲೇ ಇರಲಿಲ್ಲ. ಹಾಗಾದಾಗ ಒದ್ದಾಡುತ್ತಿದ್ದ. ಆ ಸ್ಕೂಟರನ್ನು ಮತ್ತೆ ತಳ್ಳಿಕೊಂಡು, ದೂಡಿಕೊಂಡು ಹೋಗ್ತಾ ಇದ್ದ. ಅವತ್ತು ಮಾತ್ರ ಮನೆಮನೆಗೆ ಪೇಪರ್ ಹಾಕುವುದು ತಡವಾಗಿ ಹೋಗುತ್ತಿತ್ತು. ಆ ಮನೆ ಮಂದಿಯೋ, ಬಾಯಿಗೆ ಬಂದಂತೆ ಬಯ್ಯುತ್ತಿದ್ದರು.
ಒಂದು ದಿವಸ ನಾನು ಏಳುವ ಮುಂಚೆಯೇ ಪೇಪರ್ ಮನೆ ಬಾಗಿಲಿನಲ್ಲಿತ್ತು. ಮರುದಿನವೂ ಹಾಗೆಯೇ ಆಯಿತು. “ಏನು ಇಷ್ಟು ಬೇಗ ಪೇಪರ್ ಮನೆಗೆ ಬಂದಿದೆಯಲ್ಲ?’ ಅಂತ ಅವನನ್ನು ವಿಚಾರಿಸಿದಾಗ, “ನನಗೆ ಕಾಲೇಜಿನಲ್ಲಿ ಎಕ್ಸಾಮ್ ಇದೆ’ ಅಂದ. ಆಗಲೇ ಅವನೆಡೆಗೆ ಕುತೂಹಲ ಹೆಚ್ಚಾಯಿತು. ಮರುದಿನ ಅವನನ್ನು ವಿಚಾರಿಸಿದೆ; “ಯಾವೂರು, ಯಾವ ಕಾಲೇಜು, ಏನು ಕಥೆ?’ ಅಂತ. “ನನ್ನದು ಚಿಕ್ಕಮಗಳೂರು, ಓದಿಗಾಗಿ ಈ ಊರಿಗೆ ಬಂದಿದ್ದೇನೆ, ಓದಿನ ಖರ್ಚಿಗಾಗಿ ಮನೆ ಮನೆಗೆ ಪೇಪರ್ ಹಾಕುತ್ತೇನೆ’ ಎಂದಾಗ ನನ್ನ ಕರುಳು ಚುರುಕ್ ಎಂದಿತು. ಅವನೆಡೆಗೆ ಸಣ್ಣದಾದ ಅಭಿಮಾನವೂ ಮೂಡಿತು.
ಖರ್ಚಿಗೆ ದುಡ್ಡು, ಎಲ್ಲಾ ಸೌಲಭ್ಯಗಳಿದ್ದೂ, ಮನೆಯಲ್ಲಿ ಪ್ರೋತ್ಸಾಹವೂ ಇದ್ದು, ಬೆಳಗ್ಗೆ ಏಳಲು ಆಲಸ್ಯ ಮಾಡಿಕೊಂಡು ಕಾಲೇಜಿಗೆ ತಡಮಾಡುತ್ತಿದ್ದ ನನಗೆ, ನನ್ನ ಬಗ್ಗೆಯೇ ಸಂಕೋಚ ಎನಿಸಿತು. ವರ್ಷಗಳೆರಡು ಕಳೆದವು. ಒಂದು ದಿನ ಅವನ ಕತ್ತಲ್ಲಿ ಚೈನ್ ಒಂದು ಇಣುಕುತ್ತಿತ್ತು. “ಹೊಸತೇನೋ? ಚಿನ್ನದ್ದೇನೋ?’ ಎಂದೆ, ಆತ, “ಹೌದು ಮೇಡಂ…’ ಅಂದ. ಅವನಿಗಿಂತ ಹೆಚ್ಚು ನಾನೇ ಹಿಗ್ಗಿದ್ದೆ.
ಮತ್ತೂಂದು ದಿನ ಬಂದವನೇ, “ನಾಳೆ ಪರೀಕ್ಷೆ ಕೊನೆಯಾಗುತ್ತೆ. ನಾಲ್ಕು ದಿವಸ ರಜೆ ಇದೆ, ನಾನು ಊರಿಗೆ ಹೋಗ್ತೀನೆ. ನಿಮ್ಮ ಪೇಪರ್‌ಗೆ ಬೇರೆ ವ್ಯವಸ್ಥೆ ಮಾಡಿದ್ದೇನೆ’ ಅಂದಾಗ ಅವನ ಕಣ್ಣಲ್ಲಿ ಕುಟುಂಬದವರನ್ನು ನೋಡಬೇಕೆನ್ನುವ ಹಂಬಲ, ತವಕ, ಸಂತೋಷ ಪುಟಿಯುತ್ತಿತ್ತು. “ಹ್ಯಾಪಿ ಹಾಲಿಡೇ, ಎಂಜಾಯ್ ಮಾಡು’ ಅಂದೆ. ರಜೆ ಮುಗಿಸಿ ಮತ್ತೆ ತನ್ನ ಕಾರ್ಯಕ್ಕೆ ವಾಪಸಾದ. ಈಗ ಮತ್ತದೇ ಬೆಳಗ್ಗಿನ ಗುಡ್ ಮಾರ್ನಿಂಗ್, ಮತ್ತದೇ ಪೇಪರ್, ಅದೇ ಕಿರುನಗೆ. ನನ್ನ ಬೆಳಗು ಅರಳುವುದು ತಮ್ಮನಂತಿರುವ ಅವನ ನಗುವಿನಿಂದಲೇ.
ಪಿನಾಕಿನಿ ಪಿ. ಶೆಟ್ಟಿ, ಮಂಗಳೂರು