Advertisement

ವಿವಿ ಸಾಗರಕ್ಕೆ 5 ಟಿಎಂಸಿ ನೀರು ಹರಿಸಿ

03:25 PM Apr 25, 2020 | Naveen |

ಹಿರಿಯೂರು: ತಾಲೂಕಿನ ವಿವಿ ಸಾಗರ ಜಲಾಶಯಕ್ಕೆ ಕಳೆದ 2008ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದಂತೆ 5 ಟಿಎಂಸಿ ನೀರು ಹರಿಸಬೇಕೆಂದು ನೀರಾವರಿ ಹೋರಾಟ ಸಮಿತಿ ಪ್ರಮುಖರು ಜಲಸಂಪನ್ಮೂಲ ಸಚಿವರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ವಿವಿ ಸಾಗರಕ್ಕೆ ಗುರುವಾರ ಸಚಿವರು ಭೇಟಿ ನೀಡುವ ಮುನ್ನ ನಗರದ ಹೊರವಲಯದ ವಿವಿ ಪುರ ಕ್ರಾಸ್‌ ಬಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳ ತಾಲೂಕುಗಳಿಗೆ ನೀರು ಹಂಚಿಕೆ ಬಗ್ಗೆ ಮೂಲ ವಿಸ್ಕೃತ ವರದಿ (ಡಿಪಿಆರ್‌) ಸರ್ಕಾರದಿಂದ ತಯಾರಾಗಿದ್ದು, ಅದರಂತೆ ಕಾಮಗಾರಿ ನಡೆಯುತ್ತಿದೆ. ಈ ಶಾಖಾ ಕಾಲುವೆ ಮೂಲಕ ತರೀಕೆರೆ, ಹೊಸದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ತಾಲೂಕುಗಳಿಗೆ ನೀರು ಹರಿಸುವಂತೆ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಭಾಗದ ರೈತರು ನೀರಿಗಾಗಿ 2008ರಲ್ಲಿ
541 ದಿನಗಳ ಕಾಲ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಅಂದಿನ ಸರ್ಕಾರ 5 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ ತುಂಬಿಸಲು ನೀರು ಹಂಚಿಕೆ ಮಾಡಿತ್ತು. ನಂತರ ಬಂದ ಸರ್ಕಾರ ರಾಜಕೀಯ ಒತ್ತಡಗಳಿಗೆ ಮಣಿದು 2 ಟಿಎಂಸಿಗೆ ಕಡಿಮೆ ಮಾಡಿತು. 2 ಟಿಎಂಸಿ ನೀರಿನಲ್ಲಿ ಚಿತ್ರದುರ್ಗ, ಹಿರಿಯೂರು ಚಳ್ಳಕೆರೆ ಮತ್ತು ಡಿಆರ್‌ಡಿಒ ಕೇಂದ್ರಗಳಿಗೆ ನೀರನ್ನು ಒದಗಿಸಬೇಕಾಗಿದ್ದು, ಈ ನೀರು ಸಾಕಾಗುವುದಿಲ್ಲ ಎಂದು ಹೋರಾಟ ಸಮಿತಿ ಪ್ರಮುಖರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಕಳೆದ ಹತ್ತು ವರ್ಷಗಳಿಂದ ಸತತ ಬರಗಾಲವನ್ನು ಎದುರಿಸಿದ ಈ ಭಾಗದ ರೈತರ ಜಮೀನುಗಳು ಒಣಗಿ ಹೋಗಿ ಬೆಳೆ ಇಲ್ಲದಂತಾಗಿದೆ. ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ವರದಿಯನ್ನು ತಿರುಚಲು ಹೊರಟಿದ್ದಾರೆ. ಹೀಗಿದ್ದರೂ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ಲಕ್ಷಾಂತರ ತೆಂಗಿನಮರಗಳು ಒಣಗಿ ಹೋಗಿ ರೈತರು ಬೀದಿಗೆ ಬಂದಿದ್ದಾರೆ. ಇದೀಗ ಕಳೆದ ವರ್ಷ ಅಲ್ಪ ಸ್ವಲ್ಪ ಮಳೆಯಿಂದ ವಿವಿ ಸಾಗರಕ್ಕೆ ನೀರು ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಸತ್ಯಾಂಶ ಅರಿತು ತಾಲೂಕಿನ ರೈತರಿಗೆ ನ್ಯಾಯ ಒದಗಿಸಬೇಕು. 2008ರಲ್ಲಿ ನಿಗದಿಯಾಗಿದ್ದ 5 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ
ಒದಗಿಸಿ ಈ ಭಾಗದ ಕೃಷಿಕರ ಬದುಕನ್ನು ಉಳಿಸಬೇಕೆಂದು ವಿವಿ ಸಾಗರ ಹೋರಾಟ ಸಮಿತಿಯ ಎಚ್‌. ಆರ್‌. ತಿಮ್ಮಯ್ಯ, ಕಸವನಹಳ್ಳಿ ರಮೇಶ್‌, ಸಿದ್ದರಾಮಣ್ಣ, ಎಂ.ಟಿ. ಸುರೇಶ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next