Advertisement

ಹೆರಿಟೇಜ್‌ ಗ್ಯಾಲರಿ ಸಾರ್ವಜನಿಕ ವೀಕ್ಷಣೆಗೆ ತೆರೆದ ಪ. ರೈಲ್ವೇ

10:16 AM Jul 26, 2019 | Team Udayavani |

ಮುಂಬಯಿ, ಜು. 25: ಪಶ್ಚಿಮ ರೈಲ್ವೇಯು ಇಲ್ಲಿನ ಮಹಾಲಕ್ಷ್ಮಿಯಲ್ಲಿರುವ ಭಾರತೀಯ ರೈಲ್ವೇಯ ಮೊದಲ ಪ್ರಿಂಟಿಂಗ್‌ ಪ್ರಸ್‌ (ಮುದ್ರಣಾಲಯ) ಹೆರಿಟೇಜ್‌ ಗ್ಯಾಲರಿಯನ್ನು ಸಾರ್ವ ಜನಿಕರಿಗೆ ತೆರೆದಿದೆ.

Advertisement

ಈ ವಿಶಿಷ್ಟ ಪಾರಂಪರಿಕ ಗ್ಯಾಲರಿಯನ್ನು ರೈಲ್ವೇ ಮಂಡಳಿಯ ಸದಸ್ಯ (ಮಟೀರಿಯಲ್ಸ್ ಮ್ಯಾನೇಜ್ಮೆಂಟ್) ವಿ.ಪಿ. ಪಾಠಕ್‌ ಅವರು ಇತ್ತೀಚೆಗೆ ಮುಂಬಯಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಘಾಟಿಸಿದರು ಎಂದು ಪಶ್ಚಿಮ ರೈಲ್ವೇಯು ಮುಖ್ಯ ಜನಸಂಪರ್ಕಾಧಿಕಾರಿ ರವೀಂದರ್‌ ಭಾಕರ್‌ ಹೇಳಿದ್ದಾರೆ.

ಇದರೊಂದಿಗೆ ಪಶ್ಚಿಮ ರೈಲ್ವೇಯ ಮಹಾಲಕ್ಷ್ಮಿ ಜನರಲ್ ಸ್ಟೋರ್ಸ್‌ ಡಿಪೋ (ಜಿಎಸ್‌ಡಿ) 1948ರಿಂದ ಪಶ್ಚಿಮ ರೈಲ್ವೇ ಪ್ರಿಂಟಿಂಗ್‌ ಪ್ರಸ್‌ನಲ್ಲಿ ಬಳಸಿದ ಮುದ್ರಣ ಮತ್ತು ಅದಕ್ಕೆ ಸಂಬಂಧಿತ ಯಂತ್ರಗಳ ಹೆರಿಟೇಜ್‌ ಗ್ಯಾಲರಿಯನ್ನು ಪ್ರದರ್ಶಿಸಿದ ಭಾರತೀಯ ರೈಲ್ವೇಯ ಮೊದಲನೇ ವಿಭಾಗವಾಗಿ ಹೊರಹೊಮ್ಮಿದೆ ಎಂದು ಭಾಕರ್‌ ಹೇಳಿದ್ದಾರೆ. ಈ ಮುದ್ರಣ ಯಂತ್ರಗಳು ಈಗಲೂ ಕೆಲಸ ಮಾಡುವ ಸ್ಥಿತಿಯಲ್ಲಿವೆ ಎಂದವರು ತಿಳಿಸಿದ್ದಾರೆ.

12,171 ಚದರ ಮೀಟರ್‌ ಪ್ರದೇಶದಲ್ಲಿ ಹರಡಿರುವ ಮಹಾಲಕ್ಷ್ಮಿ ಜಿಎಸ್‌ಡಿ ಬ್ರಿಟಿಷರ ಕಾಲದ ಏಕ-ಅಂತಸ್ತಿನ ಕಟ್ಟಡವಾಗಿದೆ. ಮರದಿಂದ ಮಾಡಿದ ಒಳಾಂಗಣವನ್ನು ಹೊಂದಿರುವ ಈ ಕಪ್ಪು ಕಲ್ಲಿನ ಕಟ್ಟಡವು ತನ್ನದೇ ಆದ ಸೌಂದರ್ಯ ಮತ್ತು ಅನನ್ಯತೆಯನ್ನು ಹೊಂದಿದೆ ಎಂದು ಪಶ್ಚಿಮ ರೈಲ್ವೇ ಹೇಳಿಕೆ ನೀಡಿದೆ. ಹೇಳಿಕೆಯ ಪ್ರಕಾರ, 1912ರಲ್ಲಿ ಬಾಂಬೆಯ ಗ್ರೇಟರ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇ (ಜಿಐಪಿ) ಅಡಿಯಲ್ಲಿ ಈ ಮುದ್ರಣಾಲಯವು ಅಸ್ತಿತ್ವಕ್ಕೆ ಬಂದಿತ್ತು. ರೈಲ್ವೇಯು ತನ್ನ ಕಾರ್ಯಾಚರಣೆಗೆ ಲೇಖನ ಸಾಮಗ್ರಿಗಳು ಮತ್ತು ಟಿಕೆಟ್‌ಗಳಿಗಾಗಿ ಇದನ್ನು ರಚಿಸಿತ್ತು. 1953ರಲ್ಲಿ ಈ ಮುದ್ರಣಾಲಯವನ್ನು ಪಶ್ಚಿಮ ರೈಲ್ವೇಯ ಜಿಎಸ್‌ಡಿ ಮಹಾಲಕ್ಷ್ಮಿಗೆ ವರ್ಗಾಯಿಸಲಾಯಿತು. 1969ರಲ್ಲಿ ಮಹಾಲಕ್ಷ್ಮಿಯ ಶಕ್ತಿ ಮಿಲ್ಸ್ ಲೇನ್‌ನಲ್ಲಿ ಮುದ್ರಣಾಲಯವನ್ನು ಸ್ಥಾಪಿಸಲು 90,000 ಚದರ ಅಡಿಯ ಬಹುಮಹಡಿ ಕಟ್ಟಡವನ್ನು ವಿಶೇಷವಾಗಿ ನಿರ್ಮಿಸಲಾಯಿತು. ಅನಂತರ ಹೈಸ್ಪೀಡ್‌ ಲೆಟರ್‌ಪ್ರಸ್‌ ರೋಟರಿ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಯಿತು. ಈ ಯಂತ್ರಗಳನ್ನು ಪಶ್ಚಿಮ ರೈಲ್ವೇಯ ಭದ್ರತೆ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು ಎಂದು ಹೇಳಿಕೆ ತಿಳಿಸಿದೆ. ಭಾರತದ ಎಲ್ಲಾ ವಲಯ ರೈಲ್ವೇಗಳ ಪಾರ್ಸೆಲ್ ವೇ ಬಿಲ್ಗಳು ಮತ್ತು ರೈಲ್ವೇ ರಶೀದಿಗಳು, ಪಶ್ಚಿಮ ರೈಲ್ವೇಗೆ ಅಗತ್ಯವಾದ ಲೇಖನ ಸಾಮಗ್ರಿಗಳು ಮತ್ತು ಹಣದ ಮೌಲ್ಯದ ವಸ್ತುಗಳನ್ನು ಈ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತಿತ್ತು. ಹೊಸ ಕಟ್ಟಡದಲ್ಲಿ 48 ವರ್ಷ ಮತ್ತು 10 ತಿಂಗಳ ಸೇವೆ ಮತ್ತು ಬ್ರಿಟಿಷ್‌ ಯುಗದಿಂದ ಒಟ್ಟು 106 ವರ್ಷಗಳ ಸೇವೆಯ ಅನಂತರ ಈ ಮುದ್ರಣಾಲಯವನ್ನು 2018ರ ಜುಲೈ 31ರಂದು ಮುಚ್ಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next