Advertisement

ನಿರಂತರ ಮಳೆಗೆ ಪಾರಂಪರಿಕ ಕಟ್ಟಡ ಕುಸಿತ

02:50 PM Aug 10, 2019 | Suhan S |

ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ 130 ವರ್ಷದಷ್ಟು ಹಳೆಯದಾದ ಪಾರಂಪರಿಕ ಕಟ್ಟಡವಾದ ಅಗ್ನಿಶಾಮಕ ಠಾಣೆಯ ಸ್ವಾಗತ ಕಮಾನು ನಿರಂತರ ಮಳೆಯಿಂದಾಗಿ ಕುಸಿದು ಬಿದ್ದಿದೆ.

Advertisement

ಶುಕ್ರವಾರ ಮಧ್ಯಾಹ್ನ 3.15ರಲ್ಲಿ ಇದ್ದಕ್ಕಿದ್ದಂತೆ ಸ್ವಾಗತ ಕಮಾನಿನ ಒಂದು ಪಾರ್ಶ್ವ ಕುಸಿದಿದ್ದು, ಮತ್ತೂಂದು ಭಾಗ ಬೀಳುವ ಹಂತದಲ್ಲಿದೆ. ಶಾಲಾ ಕಾಲೇಜುಗಳಿಗೆ ರಜೆ ಹಾಗೂ ಹಬ್ಬ ವಿರುವುದರಿಂದ ಹೆಚ್ಚು ಜನರು ಇರಲಿಲ್ಲ. ಇಲ್ಲವಾದರೆ ಮಕ್ಕಳು ಮಳೆಯ ಕಾರಣ ಇಲ್ಲಿಯೇ ನಿಲ್ಲುತ್ತಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸುತ್ತಿತ್ತು. ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಮೈಸೂರು ಜಿಲ್ಲೆಯಲ್ಲಿನ ನೆರೆ ಹಾವಳಿ ಪ್ರದೇಶಗಳಿಗೆ ತೆರಳಿದ ಪರಿಣಾಮ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಅಗ್ನಿ ಶಾಮಕ ಠಾಣೆ ಮೈಸೂರು ಪ್ರಾದೇಶಿಕ ಅಧಿಕಾರಿ ಈಶ್ವರ ನಾಯಕ ತಿಳಿಸಿದರು. ಸ್ಥಳಕ್ಕೆ ಶಾಸಕ ಎಲ್. ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ನಿರಂತರ ಮಳೆಯಿಂದಾಗಿ ಮೈಸೂರಿನ ಬಹುಪಾಲು ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುವ ಪರಿಸ್ಥಿತಿ ಒಂದೆಡೆಯಾದರೆ, ರಸ್ತೆಯಲ್ಲಿ ನೀರು ನಿಂತು ಜನರು ಓಡಾಡಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಅಂಗಡಿ ಮುಂಗಟ್ಟು ಬಂದ್‌ ಆಗಿದ್ದವು. ಜೊತೆಗೆ ಜನದಟ್ಟಣೆಯೂ ವಿರಳವಾಗಿತ್ತು.

ವ್ಯಾಪಾರಕ್ಕೆ ಮಳೆ ಅಡ್ಡಿ: ನಗರದಾದ್ಯಂತ ಪ್ರತಿನಿತ್ಯ ನಡೆಯುತ್ತಿದ್ದ ವಾಣಿಜ್ಯ ವಹಿವಾಟು, ಮಾರುಕಟ್ಟೆ, ಸಂತೆ, ಅಂಗಡಿ ಮುಂಗಟ್ಟು ಹಾಗೂ ಬೀದಿ ಬದಿ ವ್ಯಾಪಾರ ನಿರಂತರ ಮಳೆಯಿಂದಾಗಿ ಮಂಕಾಗಿತ್ತು. ಮಳಿಗೆಗಳಲ್ಲಿ ವ್ಯಾಪಾರ ಅಲ್ಪಸ್ವಲ್ಪ ನಡೆದರೆ, ಬೀದಿ ಬದಿ ವ್ಯಾಪರಿಗಳು ತಮ್ಮ ವ್ಯಾಪಾರವನ್ನು ನಿಲ್ಲಿಸಿ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದ್ದರು. ಜೊತೆಗೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಕೆಲವು ಅಂಗಡಿಗಳು ಬಂದ್‌ ಆಗಿದ್ದವು. ಜನರ ಓಡಾಟ ವಿರಳವಾಗಿದ್ದರಿಂದ ಇಡೀ ನಗರ ಬಿಕೋ ಎನ್ನುವಂತಿತ್ತು.

Advertisement

ಮಳೆಯಲ್ಲೂ ದೇವಿ ದರ್ಶನ:ಶ್ರಾವಣ ಮಾಸದ ವರ್ಷದ ಮೊದಲ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬದಂದು ಚಾಮುಂಡಿ ಬೆಟ್ಟಕ್ಕೆ ಮಳೆಯನ್ನು ಲೆಕ್ಕಿಸದೇ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಹೆಚ್ಚಿನ ಮಂದಿ ಮಳೆಯಲ್ಲೇ ನೆನೆದು ರಸ್ತೆಯ ಸುತ್ತುಗೋಡೆಯ ಮೇಲೇರಿ ಮಳೆಯ ನಡುವೆಯೇ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮದಲ್ಲಿದ್ದರು.

ನಂಜನಗೂಡು ರಸ್ತೆ ಬಂದ್‌: ಕಪಿಲಾ ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟದಿಂದಾಗಿ ಮೈಸೂರು – ನಂಜನಗೂಡು ರಸ್ತೆ ಜಲಾವೃತವಾದ ಕಾರಣ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಜನ ಪರದಾಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಸಂಚಾರ ನಿಷೇಧಿಸಿದ್ದರಿಂದ ವಾಹನ ಸಂಚಾರ ಇರಲಿಲ್ಲ. ಇದರಿಂದ ಹೆಚ್ಚು ಜನರು ಪರ್ಯಾಯ ಮಾರ್ಗಗಳ ಮೂಲಕ ತಮ್ಮ ಊರುಗಳಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next