ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟದ ಉದಯ ನಾಯ್ಕ ಪರಂಪರೆಯ ಕಲಾವಿದ. ಯಕ್ಷರಂಗದ ಶಿಸ್ತು, ಸಂಪ್ರದಾಯ, ಪ್ರಸಂಗಗಳ ಅಧ್ಯಯನ, ಪುರಾಣದ ಜ್ಞಾನ, ಹಿರಿಯ ಕಲಾವಿದರ ಜೊತೆಗಿನ ಅನುಸಂಧಾನದ ಮೂಲಕ ಕರಗತ ಮಾಡಿಕೊಂಡ ಯಕ್ಷಕೌಶಲ್ಯದ ಮೂಲಕವೇ ಪ್ರಬುದ್ಧ ಕಲಾವಿದರಾಗಿ ರೂಪುಗೊಂಡವರು. ಬಡಗುತಿಟ್ಟಿನ ಕೇದಗೆ ಮುಂಡಾಸುಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ತಂದೆ ದಿ| ಹೆರಿಯ ನಾಯ್ಕರು ಯಕ್ಷಗಾನದಲ್ಲಿ ದೊಡ್ಡ ಹೆಸರು ಸಂಪಾದಿಸಿದವರು. ತಂದೆಯ ಮೂಲಕ ಯಕ್ಷಗಾನದ ಆಸಕ್ತಿ ಮೂಡಿಸಿಕೊಂಡ ಬಾಲಕ ಉದಯ ಮುಂದೆ ಬಣ್ಣದ ಬದುಕನ್ನೇ ತನ್ನ ವೃತ್ತಿ ಜೀವನವನ್ನಾಗಿ ಆರಿಸಿಕೊಂಡರು. 6ನೇ ತರಗತಿಗೆ ಶಾಲೆಗೆ ವಿರಾಮ ಹೇಳಿ ಕಲೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು. ಇವರಿಗೆ ತಂದೆಯೇ ಮಾರ್ಗದರ್ಶಕ ಮತ್ತು ಗುರುವಾದರು.ಪ್ರಥಮವಾಗಿ ಮಂದರ್ತಿ ಮೇಳದಲ್ಲಿ ಗೆಜ್ಜೆ ಕಟ್ಟುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ನಂತರ ಹಂತ ಹಂತವಾಗಿ ಕಲೆಯಲ್ಲಿ ಸಿದ್ಧಿ ಸಂಪಾದಿಸಿಕೊಂಡು ಹಿರಿಯ ಕಲಾವಿದರ ಒಟನಾಟ, ಸತತ ಪರಿಶ್ರಮ, ಆಸಕ್ತಿಯ ಮೂಲಕ ಪ್ರವರ್ಧಮಾನಕ್ಕೆ ಬಂದರು. ಮಂದರ್ತಿ, ಸೌಕೂರು, ಕಮಲಶಿಲೆ, ಅಮೃತೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಮೆಚ್ಚುಗೆ ಪಡೆದುಕೊಂಡರು. ಲವಕುಶ, ಕೃಷ್ಣ, ಮತ್ಸ್ಯ, ಹನುಮಂತ, ಕೌಂಡ್ಲಿಕ, ವಿದ್ಯುನ್ಮಾಲಿ, ನೇತ್ರಾಸುರ, ದಮನ, ಬಂಡಾಸುರ, ಚಂದ್ರಸೇನ, ದುರ್ಮುಕ, ಚಂಡಾ, ಚಂದಯ್ಯ ಶೆಟ್ಟಿ ಮುಂತಾದ ಪಾತ್ರಗಳು ಇವರಿಗೆ ಖ್ಯಾತಿ ತಂದುಕೊಟ್ಟಿವೆ. ಕೆಂಪು ಮುಂಡಾಸಿನ ಖಳ ಪಾತ್ರಗಳನ್ನು ನಿರ್ವಹಿಸಿದಷ್ಟೇ ಸುಲಲಿತವಾಗಿ ಕೃಷ್ಣ, ಲವ, ಕುಶದಂತಹ ಕಥಾನಾಯಕರ ಪಾತ್ರಗಳನ್ನು ನಿರ್ವಹಿಸುತ್ತಾರೆ. ಹಿಂದೆ ಜೋಡಾಟದ ಸಂದರ್ಭದಲ್ಲಿ ವೀರರಸದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಪಟುಭಟರಂತಹ ಕಲಾವಿದರೆಂದೆ ಖ್ಯಾತಿ ಪಡೆದಿದ್ದರು. ಕಲೆಯನ್ನು ಪ್ರೀತಿಸುವ ಮನಸ್ಸು, ಸಂಪ್ರದಾಯದ ಚೌಕಟ್ಟಿಗೆ ಚ್ಯುತಿ ಬಾರದಂತೆ ತನ್ನ ಇತಿಮಿತಿಯೊಳಗೆ ಕಥೆಯ ಸಾರವನ್ನು ಪಾತ್ರದ ಮೂಲಕ ಸಚೇತನಗೊಳಿಸುವ ಚಾಕಚಕ್ಯತೆ ಇವರಿಗೆ ಸಿದ್ಧಿಸಿದೆ. ನೃತ್ಯ, ವಾಗ್ ಸಾಮರ್ಥ್ಯ, ಪಾತ್ರೋಚಿತ ವೇಷಗಾರಿಕೆ, ರಸಾಭಿವ್ಯಕ್ತಿಯನ್ನು ಸರಾಗವಾಗಿ ಹೊರಹೊಮ್ಮಿಸುವ ರಂಗಸೂಕ್ಷ್ಮತೆ ಇವರಿಗಿದೆ.
ನಾವಂಬ ಗೇರುಕಟ್ಟೆ