Advertisement

ಇಲ್ಲಿ ದೇಹದಾರ್ಢ್ಯವೇ ಜೀವಾಳ

02:50 PM Mar 31, 2019 | Team Udayavani |

“ನಿಮ್ದು ಸಿಕ್ಸ್‌ ಪ್ಯಾಕ್‌… ನಮ್‌ ಹುಡ್ಗಂದು ಏಯ್ಟ್ ಪ್ಯಾಕು… ಹುಷಾರ್‌!’ ಹೀಗೆ ನಾಯಕಿ ಎದುರಿಗೆ ಸಿಕ್ಸ್‌ ಪ್ಯಾಕ್‌ ದೇಹವನ್ನು ತೋರಿಸುತ್ತಿದ್ದ ಎಂಟತ್ತು ವಿಲನ್‌ಗಳಿಗೆ ವಾರ್ನ್ ಮಾಡುತ್ತಿದ್ದಂತೆ, ಇತ್ತ ನಾಯಕ ತನ್ನ ಅಂಗಿಯನ್ನು ಕಿತ್ತೆಸೆದು ಏಯ್ಟ್ ಪ್ಯಾಕ್‌ ದೇಹವನ್ನು ತೋರಿಸುತ್ತ ಎದುರಾಳಿಗೆ ಮುಖ-ಮೂತಿ ನೋಡದಂತೆ ಚಚ್ಚಿ ಬಿಸಾಕುತ್ತಾನೆ.

Advertisement

ಯಾಕೆ ಈ ಥರ ಹೊಡೆದಾಟ..? ಹಾಗೂ ಹೊಡೆದಾಡುವಂತಿದ್ದರೆ, ಅಂಗಿ ತೆಗೆಯದೆಯೋ ಹೊಡೆದಾಡಬಹುದಿತ್ತಲ್ಲ ಎಂದು ಎದುರಿಗೆ ಕೂತವರು ಲಾಜಿಕ್‌ ಹುಡುಕುವ ಹೊತ್ತಿಗೆ, ನಾಯಕ-ನಾಯಕಿಯ ನಡುವಿನ ಪ್ರೀತಿ-ಪ್ರೇಮದ ದೃಶ್ಯಗಳು, ಹಾಡು ಮತ್ತೆಲ್ಲೋ ಕರೆದುಕೊಂಡು ಹೋಗುತ್ತವೆ. ಇದು “ರಗಡ್‌’ ಚಿತ್ರದಲ್ಲಿ ಪದೇ ಪದೇ ಬರುವ, ಪುನರಾರ್ವನೆಯಾಗುವ ಸಾಮಾನ್ಯ ದೃಶ್ಯಗಳು.

ಒಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್‌ ಚಿತ್ರಕ್ಕೆ ಏನೇನು ಇರಬೇಕೆಂಬ ದಶಕಗಳ ಹಿಂದಿನ ಆ ಎಲ್ಲಾ ಸಿದ್ಧ ಸೂತ್ರಗಳನ್ನು ಇಟ್ಟುಕೊಂಡು, ನಿರ್ದೇಶಕ ಶ್ರೀಮಹೇಶ್‌ ಗೌಡ ಈ ಚಿತ್ರವನ್ನು ಹಾಗೇ ತೆರೆಗೆ ತಂದಿದ್ದಾರೆ. ಅದನ್ನು ಬಿಟ್ಟು ಚಿತ್ರದಲ್ಲಿ ಹೊಸದೇನಾದರೂ ಇರಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಹೋದರೆ ನಿರಾಸೆ ತಪ್ಪಿದ್ದಲ್ಲ.

ಇಡೀ ಚಿತ್ರದಲ್ಲಿ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಎಲ್ಲದಕ್ಕಿಂತ ಹೆಚ್ಚಾಗಿ ಅಬ್ಬರಿಸಿ, ಕಾಡುವುದು ಮತ್ತು ಕಾಣುವುದು ನಾಯಕ ನಟ ವಿನೋದ್‌ ಪ್ರಭಾಕರ್‌ 8 ಪ್ಯಾಕ್‌. ಒಂದು ಮಾತಿನಲ್ಲಿ ಹೇಳುವುದಾದರೆ, ವಿನೋದ್‌ ಪ್ರಭಾಕರ್‌ 8 ಪ್ಯಾಕ್‌ ತೋರಿಸುವುದಕ್ಕಾಗಿಯೇ ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಹೂರಣ ಸೇರಿಸಿ ಒಂದು ಕಥೆ ಹೆಣೆದು ಚಿತ್ರ ಮಾಡಿದಂತಿದೆ!

ಇನ್ನು ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ 8 ಪ್ಯಾಕ್‌ ಪ್ರದರ್ಶಶಿಸಿರುವುದೇ ಹೆಚ್ಚುಗಾರಿಕೆ. ಆ್ಯಕ್ಷನ್‌ಗೂ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅದನ್ನು ಹೊರತುಪಡಿಸಿದರೆ, ವಿನೋದ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ಚಿತ್ರದ ನಾಯಕಿ ಚೈತ್ರಾ ರೆಡ್ಡಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

Advertisement

ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಹೆಣ್ಣಾಗಿ, ಚೈತ್ರಾ ಹಾವಭಾವ, ನೋಟ ಎಲ್ಲವೂ ಚೆನ್ನಾಗಿದೆ. ಖಡಕ್‌ ವಿಲನ್‌ಗಳಾಗಿ ಡ್ಯಾನಿ ಕುಟ್ಟಪ್ಪ, ರಾಜ್‌ದೀಪಕ್‌ ಶೆಟ್ಟಿ ಎಂದಿನಂತೆ ಇಲ್ಲೂ ಅದೇ ಅಭಿನಯ ಮುಂದುವರೆಸಿದ್ದಾರೆ. ಉಳಿದಂತೆ ಇತರೆ ಕಲಾವಿದರ ಅಭಿನಯ ಪರವಾಗಿಲ್ಲ ಎನ್ನಬಹುದು. ತಾಂತ್ರಿಕವಾಗಿ ಚಿತ್ರದಲ್ಲಿ ಜೈ ಆನಂದ್‌ ಛಾಯಾಗ್ರಹಣ ಗಮನ ಸೆಳೆಯುತ್ತದೆ.

ಸಂಕಲನ ಕಾರ್ಯ ಕೆಲವೆಡೆ ಶರವೇಗ ಪಡೆದುಕೊಂಡರೆ, ಕೆಲವೆಡೆ ಅಷ್ಟೇ ಮಂದಗತಿಯಲ್ಲಿ ಸಾಗುತ್ತದೆ. ಅಭಿಮಾನ್‌ ರಾಯ್‌ ಸಂಗೀತದಲ್ಲಿ ಸ್ಪಷ್ಟತೆ, ಇಂಪು ಎರಡೂ ಇಲ್ಲದ ಕಾರಣ, ಕಿವಿಯಲ್ಲಿ ಹೆಚ್ಚು ಹೊತ್ತು ಕೂರುವುದಿಲ್ಲ. ಒಟ್ಟಾರೆ “ರಗಡ್‌’ ಅನ್ನೋದು ಪಕ್ಕಾ ಮಾಸ್‌ಗಾಗಿಯೇ ಮಾಡಿದ ಆ್ಯಕ್ಷನ್‌ ಚಿತ್ರ. ಕನ್ನಡದಲ್ಲೂ 8 ಪ್ಯಾಕ್‌ ಲುಕ್‌ ಚಿತ್ರ ತೆರೆಮೇಲೆ ಹೇಗೆ ಬರಬಹುದು ಎನ್ನುವ ಕುತೂಹಲವಿದ್ದರೆ “ರಗಡ್‌’ ನೋಡಲು ಅಡ್ಡಿ ಇಲ್ಲ.

ಚಿತ್ರ: ರಗಡ್‌
ನಿರ್ಮಾಣ: ಎ. ಅರುಣ್‌ಕುಮಾರ್‌
ನಿರ್ದೇಶನ: ಶ್ರೀಮಹೇಶ್‌ ಗೌಡ
ತಾರಾಗಣ: ವಿನೋದ್‌ ಪ್ರಭಾಕರ್‌, ಚೈತ್ರಾ ರೆಡ್ಡಿ, ರಾಜ್‌ದೀಪಕ್‌ ಶೆಟ್ಟಿ, ಡ್ಯಾನಿ ಕುಟ್ಟಪ್ಪ, ಕೃಷ್ಣ ಅಡಿಗ, ಮಾಲತಿ ಸರದೇಶಪಾಂಡೆ, ರಾಜೇಶ್‌ ನಟರಂಗ, ಓಂ ಪ್ರಕಾಶ್‌ ರಾವ್‌ ಇತರರು

* ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next