ಬಾದಾಮಿ: ಗಿಡ್ಡನಾಯಕನಾಳ ಗ್ರಾಮದಲ್ಲಿ ಗ್ರಾಮಸ್ಥರು “ರಾಜಕಾರಣಿಗಳಿಗೆ ನಿಷೇಧ’ ಎಂದು ಬ್ಯಾನರ್ ಕಟ್ಟಿದ್ದಾರೆ.
ಗಿಡ್ಡನಾಯಕನಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
2012ರಿಂದ ಶಾಸಕರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಭರವಸೆ ಈಡೇರಿಲ್ಲ ಎಂದು ಗ್ರಾಮಸ್ಥರು
ದೂರುತ್ತಾರೆ.
ಗಿಡ್ಡನಾಯಕನಾಳ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆಯಿದೆ. ಗಿಡ್ಡನಾಯಕನಾಳ ತಾಲೂಕಿನ ಹೊಸೂರ
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುತ್ತದೆ. ಕಂದಾಯ ಇಲಾಖೆಯ ಮಾಹಿತಿಯಲ್ಲಿ ಗಿಡ್ಡನಾಯಕನಾಳ ಹೆಸರಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಸಿಕ್ಕಿಲ್ಲ. ಗ್ರಾಮದ ಎಲ್ಲ ಸೌಲಭ್ಯಗಳನ್ನು ಹೊಸೂರಿನವರೇ ಪಡೆಯುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಲ್ಲಿಯ ಶಾಸಕ ಸಿದ್ದರಾಮಯ್ಯನವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬಾಗಲಕೋಟೆ
ವಿಭಾಗಾಧಿಕಾರಿ, ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಗಿಡ್ಡನಾಯಕನಾಳ
ಗ್ರಾಮವನ್ನು ಏ.22ರೊಳಗೆ ಕಂದಾಯ ಗ್ರಾಮ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ
ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗಿಡ್ಡನಾಯಕನಾಳ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಗಿಡ್ಡನಾಯಕನಾಳ ಗ್ರಾಮವನ್ನು ಕಂದಾಯ ಗ್ರಾಮ ಎಂದು
ಘೋಷಣೆ ಪ್ರಕ್ರಿಯೆ ಚಾಲನೆಯಲ್ಲಿದೆ. ಇದು ಸರಕಾರದ ಹಂತದಲ್ಲಿದೆ. ಇದಕ್ಕೆ 4 ತಿಂಗಳ ಕಾಲಾವಕಾಶ ಬೇಕಾಗಿದೆ. ಜಿಲ್ಲಾ ಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲಾ ಧಿಕಾರಿಗಳೊಂದಿಗೆ ಇನ್ನೊಂದು ಸಲ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲಾಗುವುದು.
ಸುಹಾಸ ಇಂಗಳೆ, ತಹಶೀಲ್ದಾರ್ ಬಾದಾಮಿ.
ಗಿಡ್ಡನಾಯಕನಾಳ ಗ್ರಾಮದಲ್ಲಿ 3 ಸಾವಿರ ಜನಸಂಖ್ಯೆಯಿದೆ. ಕಂದಾಯ ಗ್ರಾಮಕ್ಕೆ ಇರಬೇಕಾದ ಎಲ್ಲ ಅರ್ಹತೆಗಳಿವೆ.
ಕಂದಾಯ ಇಲಾಖೆ ಅಧಿ ಕಾರಿಗಳು ಕಂದಾಯ ಗ್ರಾಮ ಎಂದು ಘೋಷಣೆ ಮಾಡಬೇಕು.
ಹೆಸರು ಹೇಳಲಿಚ್ಚಿಸಿದ ಗಿಡ್ಡನಾಯಕನಾಳ ಗ್ರಾಮದ ಯುವಕ.