ಕೆರೂರ: ಹೆರಕಲ್ ದಕ್ಷಿಣ ವಿಸ್ತರಣೆ ಏತ ನೀರಾವರಿ ಯೋಜನೆಗೆ ಕೈನಕಟ್ಟಿಯಲ್ಲಿ ರವಿವಾರ ಭೂಮಿಪೂಜೆ ಜರುಗಲಿದ್ದು, ರೈತರ ಬಹುದಿನಗಳ ಕನಸು ನನಸಾಗಲಿದೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೂಮಿಪೂಜೆ ನೆರವೇರಿಸಲಿದ್ದಾರೆ.
ಕೃಷ್ಣಾ ನದಿಯ 3.664 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು 15,334 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಈಗಾಗಲೇ 2.04 ಟಿಎಂಸಿ ಅಡಿ ನೀರನ್ನು ಬಳಸಿ ಹೆರಕಲ್ ಉತ್ತರ ಭಾಗದ 3248 ಹೆಕ್ಟೇರ್, ದಕ್ಷಿಣ ಭಾಗದ 6,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ.
ಶಾಸಕ ಮುರಗೇಶ ನಿರಾಣಿ ಹೆರಕಲ್ ದಕ್ಷಿಣ ಭಾಗವನ್ನು ನೀರಾವರಿಗೊಳಪಡಿಸಲು ಉಳಿದ 1.136 ಟಿಎಂಸಿ ಅಡಿ ನೀರನ್ನು ಬಳಸಲು ನಿರ್ಧರಿಸಿದ್ದಾರೆ. ಕೈನಕಟ್ಟಿ ಗ್ರಾಮ ಬಳಿ 2ನೇ ಹಂತದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹೈದ್ರಾಬಾದ ಮೂಲದ ಕೊಯಾ ಕಂಪನಿ ಕನಸ್ಟ್ರಕ್ಷನ್ ಸಂಸ್ಥೆ ಗುತ್ತಿಗೆ ಪಡೆದಿದೆ.18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಲಾದಗಿ ಸಮೀಪ ಘಟಪ್ರಭಾ ನದಿ ನೀರನ್ನು ಸಮುದ್ರ ಮಟ್ಟದಿಂದ 512 ಮೀ ಎತ್ತರದಿಂದ 650 ಮೀ ಎತ್ತರದವರೆಗೆ ಲಿಫ್ಟ್ ಮೂಲಕ ಎತ್ತಿ 18.90 ಕಿ.ಮೀ ದೂರದ ಕೈನಕಟ್ಟಿ ಕ್ರಾಸ್‌ವರೆಗೆ ಹರಿಸಲಾಗುತ್ತದೆ. ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಕೈನಕಟ್ಟಿ, ಶಿಪರಮಟ್ಟಿ, ಜಂಗವಾಡ, ಹವಳ ಖೋಡ, ಹನುಮನೇರಿ, ನರೇನೂರ ತಾಂಡಾ, ಹಾಲಿಗೇರಿ, ಅನವಾಲ ಹಾಗೂ ಬಾದಾಮಿ ಮತಕ್ಷೇತ್ರದ ನೀರಲಕೇರಿ, ರಡ್ಡರ ತಿಮ್ಮಾಪುರ ಗ್ರಾಮಗಳಿಗೆ ಕುಡಿಯುವ ನೀರು, ನೀರಾವರಿ ಸೌಲಭ್ಯ ಜತೆಗೆ ಬೀಳಗಿ ಮತಕ್ಷೇತ್ರದ ಬೆಳ್ಳಿಕಿಂಡಿ, ಶಿಪ್ಪರಮಟ್ಟಿ, ಜಂಗವಾಡ, ಹವಳಕೋಡ ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದೆ.