ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನ ರಜೆ ಸಿಗುತ್ತದೆ. ಆದರೆ, “ಗೃಹಿಣಿ’ಗೆ ಅಂಥ ಅದೃಷ್ಟವಿಲ್ಲ…
ಹೆಂಗಸರ ಕೆಲಸಗಳೇ ಹಾಗೆ. ಮನಸ್ಸಿಲ್ಲದ ಮನಸ್ಸಿನಿಂದ ಬೆಳಗಿನ ಜಾವ ಎದ್ದು, ಗಡಿಬಿಡಿಯಲ್ಲಿಯೇ ತಿಂಡಿ, ಬಿಸಿ ಬಿಸಿ ಟೀ ರೆಡಿ ಮಾಡಿ, ಹಾಸಿಗೆಯ ಮೇಲೆ ಹೊರಳಾಡುತ್ತಿರುವ ಮಗನನ್ನು ಎಬ್ಬಿಸಿ, ಹಾಸಿಗೆಯಲ್ಲೇ ಮಲಗಿದ್ದು “ಲೇ.. ತಿಂಡಿ ರೆಡಿ ಆಯೆ¤àನೇ? ಆಫೀಸ್‌ಗೆ ಹೋಗಬೇಕು..’ ಎಂದು ಕೂಗುವ ಮನೆಯವರ ಸ್ನಾನಕ್ಕೆ ನೀರು ಕಾಯಿಸಿ, ಅವರಿಗೆ ತಿಂಡಿ ಹಾಕಿ, ಮಧ್ಯಾಹ್ನದ ಊಟ ಕಳುಹಿಸಿ, ಮಗನಿಗೆ ಶಾಲೆಗೆ ಹೋಗಲು ರೆಡಿ ಮಾಡಿ… ಅಬ್ಟಾ, ಒಂದೇ ಎರಡೇ? ಯಾವ ಸಾಫ್ಟ್ವೇರ್ ಎಂಜಿನಿಯರ್ ಕೂಡ ಮಾಡದಷ್ಟು ಕೆಲಸ “ಗೃಹಿಣಿ’ ಅನ್ನಿಸಿಕೊಂಡ ಹೆಂಗಸಿನದ್ದು.
ಇಷ್ಟಾದರೆ ಮುಗಿಯಿತೇ? ವಯಸ್ಸಾದ ಅತ್ತೆ-ಮಾವನನ್ನು ಎಬ್ಬಿಸಿ, ಅವರ ಆರೈಕೆ ಮಾಡಿ, ತಿಂಡಿ ಬಡಿಸಿದಾಗ, ಕೆಲವೊಂದು ಮನೆಗಳಲ್ಲಿ ಅತ್ತೆ ರೇಗುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ಮಾತು ಹೀಗಿರುತ್ತದೆ- “ಇದೇನೆ? ಇದ್ಯಾವ ಚಪಾತಿ? ಈ ಥರ ಗಟ್ಟಿ ಇದೆ. ಇದನ್ನಾ ಹೇಗೆ ತಿನ್ನೋದು? ಬೇಕು ಅಂತಾನೇ ಈ ತರಹದ ತಿಂಡಿ ಮಾಡ್ತೀಯಾ?’ ಹೀಗೆಲ್ಲಾ ಬೈಯದಿದ್ರೆ ಕೆಲವು ಅತ್ತೆಯರಿಗೆ ಚಪಾತಿ ಗಂಟಲಿನಲ್ಲಿ ಇಳಿಯಲ್ಲ ಅನ್ಸತ್ತೆ. ಪ್ರತಿದಿನವೂ ಇಂಥ ಬೈಗುಳವೇ ನನಗೆ ಸುಪ್ರಭಾತ.
ಕೊನೆಯಲ್ಲಿ ನಾನು ತಿಂಡಿ ತಿಂದು, ಅಡುಗೆ ಮನೆಯನ್ನು ನೋಡಿದ್ರೆ, ಎಲ್ಲಾ ಚೆಲಾಪಿಲ್ಲಿ! ಅವುಗಳನ್ನೆಲ್ಲ ನೀಟಾಗಿ ಜೋಡಿಸಿ, ಪಾತ್ರೆ ತೊಳೆದು ಅಡುಗೆ ಮನೆಯನ್ನು ಕ್ಲೀನ್ ಮಾಡುವಷ್ಟರಲ್ಲಿ ಬೆವರಿಳಿದಿರುತ್ತೆ. ಉಸ್ಸಪ್ಪಾ! ಎಂದು ಒಂದು ಲೋಟ ನೀರು ಕುಡಿದು ಖುರ್ಚಿಯ ಮೇಲೆ ಕೂರುವಷ್ಟರಲ್ಲಿ ಗಂಟೆ ಹನ್ನೆರಡು. ಮತ್ತೆ ಮಧಾಹ್ನದ ಅಡುಗೆ, ಊಟ ಬಡಿಸುವುದು, ಪಾತ್ರೆ ತೊಳೆಯವುದು.. ಕಡೆಗೆ ಬಟ್ಟೆ ಒಗೆದು, ಅವನ್ನು ಒಣಗಲು ಹಾಕುವ ವೇಳೆಗೆ ಮತ್ತದೇ ಸುಸ್ತು.
ಕೆಲಸಗಳನ್ನೆಲ್ಲಾ ಮುಗಿಸಿ ಸ್ವಲ್ಪ ಹೊತ್ತು ಮಲಗಿ ಏಳುವಷ್ಟರಲ್ಲಿ, ಸಮಯ ನಾಲ್ಕು ಗಂಟೆ. ಅತ್ತೆ-ಮಾವನಿಗೆ ಟೀ, ಸ್ನ್ಯಾಕ್ಸ್ ಮಾಡಿಕೊಟ್ಟು, ಮಗನನ್ನು ಶಾಲೆಯಿಂದ ಕರೆದುಕೊಂಡು ಬಂದು, ಅವನಿಗೆ ತಿಂಡಿ ಕೊಟ್ಟು, ಹೋಂ ವರ್ಕ್ ಬರೆಸುತ್ತಿರುವಾಗಲೇ, ಮನೆಯವರು ಆಫೀಸ್‌ನಿಂದ ಬಂದು, “ಲೇ… ತುಂಬಾ ತಲೆನೋವು ಕಣೇ! ಒಂದು ಕಪ್ ಕಾಫಿ ಕೊಡೇ..’ ಅಂತ ರಾಗ ಎಳೀತಾರೆ. ಅವರಿಗೆ ಕಾಫಿ-ತಿಂಡಿ ಮಾಡಿ ಕೊಟ್ಟು, ಪಾತ್ರೆಗಳನ್ನೆಲ್ಲಾ ತೊಳೆದು, ಅಡುಗೆ ಮನೆಯನ್ನು ಜೋಡಿಸುವಾಗ ರಾತ್ರಿ ಊಟದ ಸಮಯ ಆಗಿರುತ್ತದೆ. ಅತ್ತೆಯಂತೂ ಟಿ.ವಿ. ಮುಂದೆ ಕುಳಿತು ಧಾರಾವಾಹಿಯ ಪಾತ್ರಗಳಿಗೆ ಬೈಯ್ಯುತ್ತಾ, ಟಿ.ವಿ.ಯಲ್ಲಿ ದೇವರನ್ನು ತೋರಿಸಿದರೆ ಅಲ್ಲಿಯೇ ದೇವರ ನಾಮ ಹಾಡುತ್ತಾರೆ. “ಅತ್ತೇ, ಊಟಕ್ಕಾಯ್ತು ಬನ್ನಿ’ ಅನ್ನೋ ಹಾಗೂ ಇಲ್ಲ. “ಇರೇ, ಇದೊಂದು ಸೀರಿಯಲ್ ಮುಗಿಸಿ ಬರ್ತೀನಿ’ ಅಂತಾರೆ. ಇವರಿಗೆಲ್ಲಾ ಊಟ ಬಡಿಸಿ, ನಂತರ ಮಗನನ್ನು ಮಲಗಿಸಿ, ನಾನೂ ಊಟ ಮಾಡಿ, ಉಳಿದ ಕೆಲಸಗಳನ್ನು ಮುಗಿಸಿ ಮಲಗುವ ವೇಳೆಗೆ ರಾತ್ರಿ ಹನ್ನೊಂದಾಗಿರುತ್ತದೆ. ಮತ್ತೆ ಬೆಳಿಗ್ಗೆ ಅದೇ ಕೆಲಸ.. ಅದೇ ರಾಗ.. ಅದೇ ಹಾಡು..ಉಳಿದವರಿಗೆಲ್ಲಾ ಭಾನುವಾರದ ನೆಪದಲ್ಲಾದರೂ ಒಂದು ದಿನದ ರಜೆ ಸಿಗುತ್ತದೆ. ಆದರೆ, ಗೃಹಿಣಿಯರ ಕಥೆ ಹಾಗಿರುವುದಿಲ್ಲ. ಅವಳಿಗೆ ಭಾನುವಾರವೂ ರಜೆ ಸಿಗುವುದಿಲ್ಲ…
ಶ್ರುತಿ ಹೆಗಡೆ ಹುಳಗೋಳ