Advertisement

ತಾಯಿ ಮಕ್ಕಳ ಆರೈಕೆಯಲ್ಲಿ ಸೂಲಗಿತ್ತಿಯರು

06:20 AM May 06, 2018 | |

ಹಿಂದಿನ ವಾರದಿಂದ-
ವಿಶ್ವ ಆರೋಗ್ಯ ಸಂಸ್ಥೆಯ 2016ರ ಅಂಕಿಅಂಶಗಳ ಪ್ರಕಾರ, ಪ್ರತೀದಿನ ಸುಮಾರು 830 ಮಂದಿ ಮಹಿಳೆಯರು ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ತಡೆಯಬಹುದಾದ ಕಾರಣಗಳಿಂದ ಸಾವಿಗೀಡಾಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಮತ್ತು ಬಡ ಮಹಿಳೆಯರಲ್ಲಿ ಬಾಣಂತಿ ಮರಣ ಅತಿ ಹೆಚ್ಚಾಗಿದೆ. ಜಾಗತಿಕವಾಗಿ ಸುಮಾರು 20 ಲಕ್ಷ ಮಂದಿ ನವಜಾತ ಶಿಶುಗಳು ಜನಿಸಿದ 24 ತಾಸುಗಳ ಒಳಗೆ ಮರಣಿಸುತ್ತಿದ್ದಾರೆ. ಸುಮಾರು 26 ಲಕ್ಷ ಮೃತಶಿಶು ಜನನಗಳು ಸಂಭವಿಸುತ್ತಿವೆ. ಶಿಶು ಜನನಕ್ಕೆ ಮುನ್ನ, ಜನನ ಸಂದರ್ಭ ಮತ್ತು ಜನನದ ಬಳಿಕ ಕೌಶಲಯುತ ಆರೈಕೆಯು ಗರ್ಭಿಣಿ ಮಹಿಳೆ ಮತ್ತು ಶಿಶುಗಳ ಪ್ರಾಣವನ್ನು ಉಳಿಸಬಹುದಾಗಿದೆ.

Advertisement

1990 ಮತ್ತು 2015ರ ನಡುವೆ ಜಾಗತಿಕವಾಗಿ ತಾಯಂದಿರ ಮರಣ ಪ್ರಮಾಣವು ಶೇ.44ರಷ್ಟು ಇಳಿಕೆಯಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ 2016ರಿಂದ 2030ರ ನಡುವೆ ಜಾಗತಿಕ ತಾಯಂದಿರ ಮರಣ ಪ್ರಮಾಣವನ್ನು ಪ್ರತೀ 1 ಲಕ್ಷ ಸಜೀವ ಜನನಗಳಿಗೆ 70ಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹೊಂದಲಾಗಿದೆ. ದೇಶದ ಆರೋಗ್ಯದ ದೃಷ್ಟಿಯಿಂದ ಕೆಲವು ಧನಾತ್ಮಕ ಪ್ರಯತ್ನಗಳನ್ನು ನಡೆಸಲು ಅಂತಾರಾಷ್ಟ್ರೀಯ ಸೂಲಗಿತ್ತಿಯರ ದಿನವನ್ನು ಸೂಲಗಿತ್ತಿಯರ ಪಾತ್ರದ ಬಗ್ಗೆ ಸಮಾಜದಲ್ಲಿ ಅರಿವನ್ನು ವೃದ್ಧಿಸುವ ಉದ್ದೇಶ ಹಾಗೂ ಜಾಗತಿಕವಾಗಿ ಹೆಚ್ಚುತ್ತಿರುವ ಸೂಲಗಿತ್ತಿಯರ ಅಗತ್ಯವನ್ನು ಪೂರೈಸುವ ಗುರಿಯಿಂದ ಆಚರಿಸಲಾಗುತ್ತದೆ. ಹೀಗಾಗಿ ಜಾಗತಿಕವಾಗಿ ಶೇ.60ರಷ್ಟಿರುವ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಡೆಯುವುದಕ್ಕಾಗಿ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದ ಹಾಗೂ ಕೌಶಲಪೂರ್ಣರಾದ ಸೂಲಗಿತ್ತಿಯ ಕಾರ್ಯಪಡೆಯನ್ನು ಸೃಷ್ಟಿಸುವುದು; ಸೂಕ್ತ ಸಲಕರಣೆಗಳು ಮತ್ತು ಉಪಕರಣಗಳನ್ನು ಲಭ್ಯಗೊಳಿಸುವುದು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಪ್ರಯತ್ನವಾಗಿದೆ.

ಜಾಗತಿಕವಾಗಿ ಸದ್ಯ ಕೌಶಲಯುಕ್ತ ಮತ್ತು ಚೈತನ್ಯಭರಿತರಾದ ಸೂಲಗಿತ್ತಿಯರ ಕೊರತೆ ಇದೆ, ಕಳಪೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಅಸಮರ್ಪಕ ತರಬೇತಿ ಸೌಲಭ್ಯಗಳು, ಕಳಪೆ ಗುಣಮಟ್ಟದ ನೌಕರ ಯೋಜನೆ ಮತ್ತು ನಿಭಾವಣೆಯಂತಹವು ಇದಕ್ಕೆ  ಕಾರಣಗಳು. ಜಾಗತಿಕವಾಗಿ ಸೂಲಗಿತ್ತಿತನವನ್ನು ಬಲಪಡಿಸುವುದಕ್ಕಾಗಿ ಪ್ರಸೂತಿತಜ್ಞರು ಹಾಗೂ ಸೂಲಗಿತ್ತಿಯರ ನಡುವೆ ಸಹಯೋಗವನ್ನು ವೃದ್ಧಿಸಲು ಅಂತಾರಾಷ್ಟ್ರೀಯ ಗರ್ಭಧಾರಣೆ ಮತ್ತು ಪ್ರಸೂತಿ ಒಕ್ಕೂಟ (ಎಫ್ಐಜಿಒ)ವು ಮಹತ್ವದ ಹೆಜ್ಜೆಗಳನ್ನು ತೆಗೆದುಕೊಂಡಿದೆ. 
 
ಭಾರತದಲ್ಲಿ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಸ್ಥಿತಿಯನ್ನು ಉತ್ತಮಪಡಿಸುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಪಟ್ಟ ವಾಲಂಟರಿ ನ್ಯಾಶನಲ್‌ ರಿವ್ಯೂ 2017 “ಭಾರತ ನವಜಾತ ಕಾರ್ಯಕಾರಿ ಯೋಜನೆ’ ಎಂಬ ಮಾರ್ಗದರ್ಶಿ ಸೂತ್ರವನ್ನು ಸಿದ್ಧ ಪಡಿಸಿದೆ. ಇದು ಐದು ವರ್ಷಕ್ಕೆ ಮುನ್ನವೇ ಅಂದರೆ 2030ರೊಳಗೆ ಜಾಗತಿಕ “ಪ್ರತೀ ನವಜಾತ ಶಿಶು ಕಾರ್ಯಕಾರಿ ಯೋಜನೆ’ಯ ಗುರಿಗಳನ್ನು ಸಾಧಿಸುವ ಗುರಿ ಹೊಂದಿದೆ. ಈ ಅವಕಾಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸೂಚ್ಯಂಕಗಳನ್ನು ಉತ್ತಮಪಡಿಸುವುದಕ್ಕಾಗಿ ತಂತ್ರಜ್ಞಾನವನ್ನು ಉಪಯೋಗಿಸುವ ಉಪಕ್ರಮಗಳನ್ನು ಆರಂಭಿಸಲಾಗಿದೆ. ಉದಾಹರಣೆಗೆ, ಅನ್‌ಮೋಲ್‌ (ಆಕ್ಸಿಲಿಯರಿ ನರ್ಸ್‌ ಮಿಡ್‌ವೈವ್ಸ್‌ ಆನ್‌ಲೈನ್‌) ಎಂಬುದು ಟ್ಯಾಬ್ಲೆಟ್‌ ಆಧಾರಿತ ಆಪ್ಲಿಕೇಶನ್‌ ಆಗಿದ್ದು, ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಎನ್‌ಎಂಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಫ‌ಲಾನುಭವಿಗಳ ಮಾಹಿತಿ ಮತ್ತು ದತ್ತಾಂಶವನ್ನು ಇಲೆಕ್ಟ್ರಾನಿಕ್‌ ಆಗಿ ಅಪ್‌ಲೋಡ್‌ ಮಾಡುವುದಕ್ಕಾಗಿ ಉಪಯೋಗಿಸಬಹುದಾಗಿದೆ. ಹಾಗೆಯೇ, ಐಸಿಡಿಎಸ್‌ ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ದೇಶವ್ಯಾಪಿಯಾಗಿ ಸೇವಾ ಬಟಾವಾಡೆಯ ಮೇಲೆ ರಿಯಲ್‌ ಟೈಮ್‌ ಆಗಿ ನಿಗಾ ವಹಿಸುವುದು ಸಾಧ್ಯವಾಗುತ್ತದೆ. 

ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ ಮತ್ತು ಕಲ್ಯಾಣದ ಬಗ್ಗೆ ಸೂಲಗಿತ್ತಿಯರು ವಹಿಸುವ ಅಪಾರ ಶ್ರಮ ಮತ್ತು ನಿಸ್ವಾರ್ಥ ಸೇವೆಯ ಬಗ್ಗೆ ವೈದ್ಯಕೀಯ ಸಮುದಾಯ ಪ್ರಶಂಸೆ ವ್ಯಕ್ತಪಡಿಸಬೇಕು. ಸೂಲಗಿತ್ತಿಯರ ಈ ಸೇವೆ ಯಾವುದೆ ವಸ್ತು ಅಥವಾ ಹಣ ರೂಪದಲ್ಲಿ ಮೌಲ್ಯಮಾಪನ ಮಾಡುವುದನ್ನು ಮೀರಿದುದಾಗಿದೆ. ಅಂತಾರಾಷ್ಟ್ರೀಯ ಸೂಲಗಿತ್ತಿಯರ ದಿನಕ್ಕಾಗಿ ಅವರಿಗೆ ಶುಭಾಶಯ ವ್ಯಕ್ತಪಡಿಸುವುದರ ಜತೆಗೆ ನಿಸ್ವಾರ್ಥವಾಗಿ ದುಡಿಯುವ ಈ ಸಿಬಂದಿಗಳ ಸಂಖ್ಯೆ ವಿಶೇಷತಃ ಅಭಿವೃದ್ಧಿಶೀಲ ದೇಶಗಳಲ್ಲಿ ವೃದ್ಧಿಸಲಿ ಎಂದು ಹಾರೈಸೋಣ.

Advertisement

Udayavani is now on Telegram. Click here to join our channel and stay updated with the latest news.

Next