ಇಡೀ ಚಿತ್ರಮಂದಿರದಲ್ಲಿ ಒಬ್ಬರೇ ಕೂತು ಆ ಹಾರರ್ ಚಿತ್ರ ನೋಡಿದವರಿಗೆ ಐದು ಲಕ್ಷ ಬಹುಮಾನ! ಈ ಆಫರ್ ಕೇಳುತ್ತಿದ್ದಂತೆಯೇ ಒಪ್ಪಿಬಿಡುತ್ತಾಳೆ ಅವಳು. ಕಾರಣ ಹಣದ ಅವಶ್ಯಕತೆ. ಬಾಡಿಗೆ ಕೊಡುವುದಕ್ಕೆ ಹಣವಿಲ್ಲ, ದಿನನಿತ್ಯದ ಖರ್ಚಿಗೆ ಕಾಸಿಲ್ಲ. ತನಗಲ್ಲದಿದ್ದರೂ, ತನ್ನ ಹಸುಗೂಸು ನೆಮ್ಮದಿಯಾಗಿರಬೇಕೆಂದು ಅವಳು ಈ ಆಫರ್ ಒಪ್ಪುತ್ತಾಳೆ. ಇಂಥದ್ದೊಂದು ಆಫರ್‌ಗೂ ಒಂದು ಕಾರಣವಿದೆ. ಆ ಚಿತ್ರವನ್ನು ನೋಡುವ ಸಂದರ್ಭದಲ್ಲಿ ವಿತರಕನೊಬ್ಬ, ಆ ಚಿತ್ರದಲ್ಲಿ ತನ್ನನ್ನೇ ತಾನು ನೋಡಿಕೊಂಡು, ಶಾಕ್‌ನಿಂದ ಎದೆಯೊಡೆದುಕೊಂಡು ಪ್ರಾಣ ಬಿಟ್ಟಿರುತ್ತಾನೆ.
ಬೇರೆಯವರು ಸಹ ಚಿತ್ರದಲ್ಲಿ ತಮ್ಮನ್ನು ಕಾಣುತ್ತಾರೆ ಎಂಬ ಕುತೂಹಲ ಆ ನಿರ್ದೇಶಕನಿಗೆ. ಸರಿ ಅವನು ಪ್ರಚಾರ ಮಾಡುತ್ತಾನೆ. ಆಕೆ ಒಬ್ಬಂಟಿಯಾಗಿ ಕುಳಿತು ಚಿತ್ರ ನೋಡುವುದಕ್ಕೆ ಬರುತ್ತಾಳೆ. ಚಿತ್ರ ಶುರುವಾಗುತ್ತದೆ. ಒಂದಿಷ್ಟು ಬೆಚ್ಚಿಬೀಳಿಸುವ ದೃಶ್ಯಗಳು ಬರುತ್ತವೆ. ಹಿಂದಿನಿಂದ ಎರಡು ಕೈಗಳು ಬಂದು ಆಕೆಯ ಮುಖ ಮುಚ್ಚುತ್ತದೆ … ಹಾಗಾದರೆ, ಅವಳೂ ಸಾಯುತ್ತಾಳಾ? ಈ ಪ್ರಶ್ನೆಗೆ ಉತ್ತರ ಹೇಳುವುದು ಸಮಂಜಸವಲ್ಲ. ಹಾರರ್ ಚಿತ್ರಗಳನ್ನು ನೋಡಿ ನೋಡಿ ಪ್ರೇಕ್ಷಕರು ಸುಸ್ತಾಗುವುದರ ಜೊತೆಗೆ, ಆ ಟ್ರೆಂಡ್‌ನ ಬಗ್ಗೆ ಆಸಕ್ತಿಯೂ ಕಡಿಮೆಯಾಗುತ್ತಿದೆ ಎಂದರೆ ತಪ್ಪಿಲ್ಲ.
ಏಕೆಂದರೆ, ಅದೇ ಒಂಟಿ ಮನೆ, ಕತ್ತಲೆ-ಬೆಳಕಿನ ಆಟ, ವಿಕಾರವಾದ ಮುಖಗಳು, ಬೆಚ್ಚಿ ಬೀಳಿಸುವ ಹಿನ್ನೆಲೆ ಸಂಗೀತ … ಇವೆಲ್ಲಾ ಇತ್ತೀಚೆಗೆ ಸ್ವಲ್ಪ ಜಾಸ್ತಿಯೇ ಆಗಿದೆ ಎಂದರೆ ತಪ್ಪಿಲ್ಲ. “ಆಕೆ’, ಅದೇ ಶೈಲಿಯಲ್ಲಿರುವ, ಸ್ವಲ್ಪ ವಿಭಿನ್ನವಾದ ಸಿನಿಮಾ ಎಂದರೆ ತಪ್ಪಿಲ್ಲ. ಅದೇ ಶೈಲಿಯಲ್ಲಿರುವ, ಸ್ವಲ್ಪ ವಿಭಿನ್ನವಾದ ಸಿನಿಮಾ ಎಂದರೆ, ಇಲ್ಲೂ ಅದೇ ಅಂಶಗಳು ಇವೆ. ಆದರೆ, ಅದನ್ನೇ ಬೇರೆ ತರಹ ಹೇಳಲಾಗಿದೆ. ಅದಕ್ಕೆ ಕಾರಣ ಚಿತ್ರಕಥೆ. ತನ್ನ ಮಗುವನ್ನು ಕಳೆದುಕೊಂಡ ಒಂಟಿ ಮಹಿಳೆಯೊಬ್ಬಳು ದೆವ್ವವಾಗಿ ಸೇಡು ತೀರಿಸಿಕೊಳ್ಳುವುದು ಚಿತ್ರದ ಕಥೆಯಾದರೂ, ಅದನ್ನು ಹೇಳುವ ರೀತಿ ಬೇರೆ ಇದೆ.
ಪ್ರಮುಖವಾಗಿ ಚಿತ್ರದ ಕಥೆಯಲ್ಲಿ ಎರಡು ಟ್ರಾಕ್‌ಗಳಿವೆ. ಒಂದರಲ್ಲಿ ಲಂಡನ್‌ನಲ್ಲಿರುವ ಪೇಂಟರ್ ಜೀವನದಲ್ಲಿ ಹಲವು ರೀತಿಯ ಚಿತ್ರ-ವಿಚಿತ್ರ ಘಟನೆಗಳಾದರೆ, ಇನ್ನೊಂದು ಕಡೆ ಬೆಂಗಳೂರಿನಲ್ಲಿ ಒಬ್ಬ ಮಹಿಳೆಗೆ ಹಣಕಾಸಿನ ತೊಂದರೆ ಇರುತ್ತದೆ. ಎರಡೂ ಬೇರೆ ಬೇರೆ ಟ್ರಾಕ್‌ಗಳು ಎಂದನಿಸಿದರೂ, ಅವೆರಡಕ್ಕೂ ಕನೆಕ್ಷನ್ ಇದೆ. ಆ ಕನೆಕ್ಷನ್ ಅರ್ಥವಾಗುವುದಕ್ಕೆ ಸ್ವಲ್ಪ ಜಾಸ್ತಿ ತಾಳ್ಮೆಯೇ ಬೇಕು.ಚಿತ್ರ ಮೊದಲು ಶುರುವಾಗುವುದು ಲಂಡನ್‌ನಲ್ಲಿ. ನಂತರ ಬೆಂಗಳೂರಿಗೆ ಶಿಫ್ಟ್ ಆಗುತ್ತದೆ. ಲಂಡನ್‌ನ ಕಥೆ ಹೇಳುತ್ತಲೇ, ಬೆಂಗಳೂರಿನ ಕಥೆಯೂ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಇವೆರೆಡರ ನಡುವೆ ಸಂಬಂಧವೇನು ಎಂದು ಪ್ರೇಕ್ಷಕ ತಲೆ ಕೆರೆದುಕೊಳ್ಳುವುದಷ್ಟೇ ಅಲ್ಲ, ಮೊದಲಾರ್ಧ ಮುಗಿದರೂ ಏನೂ ಆಗದಿದ್ದಾಗ ಸ್ವಲ್ಪ ತಾಳ್ಮೆಗೆಡುತ್ತಾನೆ. ದ್ವಿತೀಯಾರ್ಧದಲ್ಲಿ ಕ್ರಮೇಣ ಎರಡೂ ಟ್ರಾಕ್‌ಗಳಿಗೆ ಸಂಬಂಧವೇನು ಎಂಬುದು ಗೊತ್ತಾಗುತ್ತಾ ಹೋಗುತ್ತದೆ. ಅದೂ ಸ್ಪಷ್ಟವಾಗುವುದಕ್ಕೆ ಕ್ಲೈಮ್ಯಾಕ್ಸ್‌ವರೆಗೂ ಕಾಯಬೇಕು. ಆಗ ಮನಸ್ಸು ಸ್ವಲ್ಪ ನಿರಾಳವಾಗುತ್ತದೆ. ಅಲ್ಲಿಯವರೆಗೂ ಅದೇ ಬೆಚ್ಚಿ-ಬೀಳಿಸುವ, ಹೆದರಿಸುವ, ಯದ್ವಾ-ತದ್ವಾ ಓಡಿಸುವ ತಂತ್ರಗಳು ಮುಂದುವರೆಯುತ್ತಲೇ ಇರುತ್ತದೆ.
ಇಲ್ಲೊಂದು ಮನೆಯಲ್ಲಿ ನಾಯಕಿ ಕತ್ತಲಲ್ಲಿ ಓಡಾಡುತ್ತಾ ಬೆಚ್ಚಿಬಿದ್ದರೆ, ಅಲ್ಲೆಲ್ಲೋ ಇನ್ನೊಂದು ಕಾಡಿನಲ್ಲಿ ಇನ್ನಾéರಿಗೋ ಅದೇ ಅನುಭವಗಳಾಗುತ್ತದೆ. ಲೊಕೇಶನ್‌ಗಳು ಬೇರೆಯಾದರೂ ವಿಷಯ ಅದೇ ಆದ್ದರಿಂದ, ಒಂದು ಹಂತದಲ್ಲಿ ಪ್ರೇಕ್ಷಕನಿಗೆ ಬೋರ್ ಆಗುವುದರ ಜೊತೆಗೆ ಯಾವಾಗ ಎಲ್ಲವೂ ಬಗೆಹರಿಯುತ್ತದೆ ಎಂದನಿಸಿದರೆ ಸಹಜ. ಅದನ್ನೆಲ್ಲಾ ದಾಟಿ ಹೊರಬಂದರೆ, ಚಿತ್ರ ಖುಷಿಯಾಗಬಹುದು.
ಇದು ಹಾಲಿವುಡ್ ಲೆವೆಲ್‌ನ ಸಿನಿಮಾ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರು. ತಂಡದ ಮಾತು ಪೂರಾ ಸುಳ್ಳೇನಲ್ಲ. ಮಲ್ಹರ್ ಭಟ್ ಮತ್ತು ಇಯಾನ್ ಹೋಮ್ಸ್ ಅವರ ಛಾಯಾಗ್ರಹಣ, ಗುರುಕಿರಣ್ ಹಿನ್ನೆಲೆ ಸಂಗೀತ ಹಾಲಿವುಡ್ ಲೆವೆಲ್‌ಗೆ ತಕ್ಕದಾಗಿದೆ. ಅಭಿನಯ ಸಹ ಅಷ್ಟೇ. ಒಂದೆರೆಡು ಪಾತ್ರಗಳು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಗಂಭೀರ. ಅದರಲ್ಲೂ ಚಿರು, ಶರ್ಮಿಳಾ ಮತ್ತು ಪ್ರಕಾಶ್ ಬೆಳವಾಡಿ ಈ ಚಿತ್ರದ ಹೈಲೈಟು.
ನಾಯಕ-ನಾಯಕಿ-ವಿಲನ್ ಇದ್ದರೂ ಇಲ್ಲಿ ಹಾಡು, ಕುಣಿತ, ಫೈಟುಗಳು, ಕಾಮಿಡಿ ಯಾವುದೂ ಇಲ್ಲಿಲ್ಲ. ಚಿತ್ರ ತುಂಬಾ ಕ್ಲಾಸ್ ಆಗಿರುವುದರಿಂದ ಮಾಸ್ ಪ್ರೇಕ್ಷಕರಿಗೆ, ಇಷ್ಟವಿಲ್ಲದ ಕ್ಲಾಸ್‌ನಲ್ಲಿ ಕೂತಂತನಿಸಿದರೆ ಆಶ್ಚರ್ಯವಿಲ್ಲ. ಆದರೆ, ಇದು ಕನ್ನಡದ ಮಟ್ಟಿಗೆ ಹೊಸ ತರಹದ ಪ್ರಯತ್ನವಾಗಿರುವುದರಿಂದ, ಬಂಕ್ ಮಾಡದೆ ನೋಡುವ ಪ್ರಯತ್ನ ಮಾಡಬಹುದು. ಅಂದಹಾಗೆ, “ಆಕೆ’ ಚಿತ್ರವು ತಮಿಳಿನ “ಮಾಯ’ ಎಂಬ ಚಿತ್ರದ ರೀಮೇಕು.
ಚಿತ್ರ: ಆಕೆ
ನಿರ್ದೇಶನ: ಕೆ.ಎಂ. ಚೈತನ್ಯ
ನಿರ್ಮಾಣ: ಕಲೈ ಮತ್ತು ಸೂರಿ
ತಾರಾಗಣ: ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ, ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್ ಮುಂತಾದವರು
* ಚೇತನ್ ನಾಡಿಗೇರ್