ಮಳವಳ್ಳಿ: ನಿಟ್ಟೂರು ಕೋಡಿಹಳ್ಳಿ ಮತ್ತು ಎಚ್.ಬಸಾಪುರ ಗ್ರಾಮದ ಮಧ್ಯೆ ಇರುವ ಇಗ್ಗಲೂರು ನಾಲೆಯ ಬಳಿ ಮಂಗಳವಾರ ರಾತ್ರಿ ಹೆಬ್ಟಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
ತಾಲೂಕಿನ ವಳಗೆರೆ ದೊಡ್ಡಿಗ್ರಾಮದ ಆನಂದ್ ಕಾರ್ಯನಿಮಿತ್ತ ನಿಟ್ಟೂರು ಗ್ರಾಮಕ್ಕೆ ತೆರಳಿ ವಾಪಸ್ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾಗ ಇಗ್ಗಲೂರು ನಾಲೆಯ ಸಮೀಪದಲ್ಲಿರುವ ರಾಮು ತೋಟದ ಬಳಿ ಸುಮಾರು 12 ಅಡಿ ಉದ್ದದ ಹೆಬ್ಟಾವು ಹೋಗುತ್ತಿದ್ದನ್ನು ನೋಡಿ ಗಾಬರಿಗೊಂಡರು. ಕೂಡಲೇ ನಿಟ್ಟೂರು ಕೋಡಿಹಳ್ಳಿ ಮತ್ತು
ಬಸಾಪುರ ಗ್ರಾಮದವರಿಗೆ ವಿಷಯ ತಿಳಿಸಿದಾಗ ಹೆಬ್ಟಾವನ್ನು ನೋಡಲು ಜನರದಂಡೆ ಸ್ಥಳದಲ್ಲಿ ಜಮಾಯಿಸಿತು.
ನಿಟ್ಟೂರು ಕೋಡಿಹಳ್ಳಿ ಗ್ರಾಮದ ವಾಸಿ ರುಕ್ಕು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ ಮೇರೆಗೆ ಅರಣ್ಯರಕ್ಷಕ ತಾಜು ಫ್ರಾನ್ಸಿಸ್, ಬಸವಣ್ಣ ಸ್ಥಳಕ್ಕೆ ಭೇಟಿ ನೀಡಿ ಹೆಬ್ಟಾವನ್ನು ಸುರಕ್ಷಿತವಾಗಿ ತೆಗೆದುಕೊಂಡು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಈ ಸಂದರ್ಭದಲ್ಲಿ ರುಕ್ಕು ಮಾತನಾಡಿ, ಗ್ರಾಮಸ್ಥರು ಈಗಾಗಲೇ ಚಿರತೆಗಳ ಹಾವಳಿಯಿಂದ ಭಯಭೀತರಾಗಿದ್ದಾರೆ.
ಸಾಕು ಪ್ರಾಣಿಗಳಾದ ಆಡು, ಕುರಿ, ಮತ್ತು ಸಾಕು ನಾಯಿಗಳನ್ನು ಹಿಡಿದು ತಿನ್ನುತ್ತಿರುವುದರಿಂದ ನಮಗೆ ರಾತ್ರಿ ವೇಳೆ ಹೊರ ಬರಲು ಭಯ ಪಡುವ ಪರಿಸ್ಥಿತಿ ಇದೆ. ಇದರ ಜೊತೆಗೆ ಈಗ ಹೆಬ್ಟಾವು ಕಾಣಿಸಿಕೊಂಡು ಜನರ ಆತಂಕವನ್ನು ಹೆಚ್ಚಿಸಿದೆ. ನಾವು ಹೊಲ-ಗದ್ದೆಗಳಿಗೆ ಹೋಗುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಅಂತರಹಳ್ಳಿ ಗುಡ್ಡ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ರೈತರು ಆತಂಕದಲ್ಲಿದ್ದಾರೆ. ಚಿರತೆ ಸೆರೆಗೆ ಬೋನು ಇಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.