Advertisement

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

11:57 AM Jul 15, 2024 | Team Udayavani |

ಕನ್ನಡ ಭಾಷೆಯಲ್ಲಿ “ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬ ನಾಣ್ನುಡಿ ಇದೆ. ಇದರ ಅರ್ಥ ಸ್ಪಷ್ಟ. ಹಾಲು ಬೆಳ್ಳಗಿರುವುದು ಹೌದಾದರೂ ಬೆಳ್ಳಗಿನ ದ್ರವಗಳೆಲ್ಲ ಹಾಲಲ್ಲ ಎಂಬ ಒಂದು ರೀತಿಯ ಸರಳ ಎಚ್ಚರಿಕೆ ಇದರಲ್ಲಿದೆ. ಇದೇ ಭಾವವನ್ನು ನಾವು ವೈದ್ಯಕೀಯದಲ್ಲಿ ಉಪಯೋಗಿಸುವುದಾದರೆ, “ಮಲದಲ್ಲಿ ರಕ್ತ ಬಂದಾಗಲೆಲ್ಲ ಮೂಲವ್ಯಾಧಿ (ಪೈಲ್ಸ್‌) ಕಾರಣವಲ್ಲ’ ಎಂದು ಹೇಳಬಹುದಾಗಿದೆ. ಏನಿದರ ಒಳಾರ್ಥ? ತಿಳಿಯೋಣ ಬನ್ನಿ.

Advertisement

“ಡಾಕ್ಟ್ರೇ, ನನಗೆ ಪೈಲ್ಸ್‌ ಆಗಿದೆ. ಸ್ವಲ್ಪ ನೋಡಿ ಔಷಧ ಕೊಡಿ’ ಎಂಬ ಕೋರಿಕೆಯೊಂದಿಗೆ ಆಸ್ಪತ್ರೆಗೆ ಬರುವ ರೋಗಿಗಳು ವಿರಳವೇನಲ್ಲ. “ಪೈಲ್ಸ್‌ ಅಂದರೆ ಕಾಯಿಲೆಯ ಹೆಸರು ಮಾರಾಯರೆ. ಅದನ್ನು ನಾನು ಹೇಳಬೇಕು. ನೀವು ನಿಮ್ಮ ಸಮಸ್ಯೆ ಹೇಳಿದರೆ ಸಾಕು’ ಎಂದು ಸಮಾಧಾನ ಪಡಿಸಿದ ಅನಂತರ ಮಲ ವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವದ ವಿಷಯ ಹೊರಬರುತ್ತದೆ. ಅದು ಪೈಲ್ಸ್‌ನಿಂದಲೇ ಎಂದು ಅವರು ಗಟ್ಟಿಯಾಗಿ ನಂಬಿರುತ್ತಾರೆ ಕೂಡ. ಈ ರೀತಿಯ ನಂಬಿಕೆ ಕೆಲವೊಮ್ಮೆ ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂಬ ಬಗ್ಗೆ ತಿಳಿಯಪಡಿಸುವುದೇ ಈ ಲೇಖನದ ಆಶಯ.

ಮಲ ವಿಸರ್ಜನೆ ಮಾಡುವಾಗ ರಕ್ತಸ್ರಾವ ಆದಲ್ಲಿ ಅದಕ್ಕೆ ಮೂಲವ್ಯಾಧಿ ಅಥವಾ ಪೈಲ್ಸ್‌ ಸಾಮಾನ್ಯ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಸಂದರ್ಭದಲ್ಲಿ  ನೋವಿನ ಅನುಭವ ಇರುವುದಿಲ್ಲ. ಮಲದ್ವಾರದಲ್ಲಿರುವ ರಕ್ತನಾಳ ಒಡೆಯುವುದರಿಂದ ಮಲವಿಸರ್ಜನೆಯ ಅನಂತರ ರಕ್ತ ತೊಟ್ಟಿಕ್ಕುತ್ತದೆ. ಪದೇ ಪದೆ ರಕ್ತಸ್ರಾವವಾಗುವುದಿಲ್ಲ. ಮಲದ್ವಾರದಲ್ಲಿರುವ “ಫಿಶರ್‌’ ಕಾಯಿಲೆಯಿಂದ ರಕ್ತಸ್ರಾವ ಉಂಟಾದಾಗ ರಕ್ತವು ಮಲಕ್ಕೆ ಅಂಟಿಕೊಂಡೇ ಬರುತ್ತದೆ.

ಮಲವಿಸರ್ಜನೆಯ ಅನಂತರ ಅತೀವ ನೋವು ಮತ್ತು ಉರಿ ಇರುವುದು ಸಾಮಾನ್ಯ. ಫಿಶರ್‌ ಕೂಡ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯೇ. ಇಲ್ಲಿ ಮಲದ್ವಾರದ ಹೊರಚರ್ಮಕ್ಕೆ ಗಾಯ ಉಂಟಾಗುವುದರಿಂದ ನೋವು ಮತ್ತು ರಕ್ತಸ್ರಾವ ಉಂಟಾಗುತ್ತದೆ. ಇಲ್ಲಿಯೂ ಕೂಡ ಪದೇ ಪದೆ ರಕ್ತಸ್ರಾವ ಆಗುವುದಿಲ್ಲ.

Advertisement

ಮೇಲ್ಕಾಣಿಸಿದ ಎರಡು ಸಾಮಾನ್ಯ ಕಾಯಿಲೆಗಳ ಹೊರತಾಗಿಯೂ ಹಲವಾರು ಹೆಚ್ಚು ಅಪಾಯಕಾರಿ ಕಾಯಿಲೆಗಳಲ್ಲಿಯೂ ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದಿದೆ. ದೊಡ್ಡ ಕರುಳಿನ ಉರಿಯೂತ (ಪ್ರೊ ಕ್ವೈಟಿಸ್‌) ಇದರಲ್ಲೊಂದು. ಇಲ್ಲಿ ರೋಗಿಗೆ ಆಗಾಗ ರಕ್ತಮಿಶ್ರಿತ ಮಲವಿಸರ್ಜನೆ ಆಗುತ್ತದೆ. ದಿನಕ್ಕೆ 6-8 ಬಾರಿ ಆಗುವುದೂ ಇದೆ. ಹೊಟ್ಟೆನೋವೂ ಇರಬಹುದು.

ರಕ್ತಹೀನತೆ ಇರುವ ಸಾಧ್ಯತೆ ಹೆಚ್ಚು. ಇಲ್ಲಿ ಸಮಸ್ಯೆ ದೊಡ್ಡ ಕರುಳಿನಲ್ಲಿರುತ್ತದೆ. ಪೈಲ್ಸ್‌ ಯಾ ಫಿಶರ್‌ನಂತೆ ಮಲದ್ವಾರದಲ್ಲಲ್ಲ. ಹೊಟ್ಟೆನೋವಿನೊಂದಿಗೆ ರಕ್ತ ವಿಸರ್ಜನೆ ಆಗುತ್ತಿದ್ದಲ್ಲಿ ದೊಡ್ಡಕರುಳಿನ ಎಂಡೋಸ್ಕೋಪಿ (ಕೊಲೊನೋ ಸ್ಕೋಪಿ) ತಪಾಸಣೆ ಮಾಡಿ, ಉರಿಯೂತದ ಇರುವಿಕೆಯನ್ನು ಬಯಾಪ್ಸಿಯ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಇದರಂತೆಯೇ ದೊಡ್ಡ ಕರುಳಿನ ಹುಣ್ಣು, ಡೈವರ್ಟಿಕ್ಯುಲೋಸಿಸ್‌ ಕಾಯಿಲೆ, ರಕ್ತನಾಳಗಳ ದೋಷ ಇತ್ಯಾದಿಗಳೂ ಮಲದಲ್ಲಿ ರಕ್ತ ವಿಸರ್ಜನೆಗೆ ಕಾರಣವಾಗಬಹುದು. ಇವೆಲ್ಲದರಲ್ಲಿಯೂ ಕೊಲೆನೊಸ್ಕೋಪಿ ಬಹಳ ಆವಶ್ಯಕ. ಇವೆಲ್ಲದರ ಹೊರತಾಗಿಯೂ ಮಲದಲ್ಲಿ ರಕ್ತ ವಿಸರ್ಜನೆಯಾಗುವಂತೆ ಮಾಡುವ ಘೋರ ಕಾಯಿಲೆಯೊಂದಿದೆ. ಅದೆಂದರೆ ದೊಡ್ಡ ಕರುಳಿನ ಅಂತ್ಯಭಾಗದ ಕ್ಯಾನ್ಸರ್‌.

ಇಲ್ಲಿಯೂ ಆಗಾಗ ರಕ್ತಮಿಶ್ರಿತ ಮಲ ಅಥವಾ ಸಿಂಬಳದಂತಹ ಪದಾರ್ಥ ಮಲದ್ವಾರದಿಂದ ವಿಸರ್ಜನೆಯಾಗುತ್ತದೆ. ಮಲವಿಸರ್ಜನೆಯ ಅನಂತರ ಇನ್ನೂ ಪೂರ್ಣವಾಗಿ ಮಲ ಹೊರಹೋಗಿಲ್ಲ ಎಂಬ ಭಾವನೆ ಇದ್ದು, ಮಲದ್ವಾರದಲ್ಲಿ ನೋವೂ ಇರಬಹುದು. ರೋಗಿಯ ಬಾಯಿರುಚಿ ಕೆಟ್ಟಿದ್ದು, ತೂಕ ಕಡಿಮೆಯಾಗಿರುವ ಸೂಚನೆಯಿದ್ದರಂತೂ ಕ್ಯಾನ್ಸರ್‌ ಕಾಯಿಲೆಯ ಇರುವಿಕೆಯ ಬಗ್ಗೆ ವೈದ್ಯರು ಜಾಗೃತರಾಗಿರಬೇಕಾಗುತ್ತದೆ.

ಇಲ್ಲಿ ಗುದದ್ವಾರದ ಬೆರಳಿನ ತಪಾಸಣೆ ಮೂಲಕ ಅವರಿಗೆ ಕ್ಯಾನ್ಸರ್‌ನ ಅರಿವು ಉಂಟಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಈ ರೀತಿಯ ತಪಾಸಣೆಯನ್ನು ಶಸ್ತ್ರಚಿಕಿತ್ಸಾ ತಜ್ಞರು ಮಾತ್ರ ಮಾಡುವುದರಿಂದ ಮಲವಿಸರ್ಜನೆಯಲ್ಲಿ ರಕ್ತಸ್ರಾವ ಇರುವ ರೋಗಿಗಳು ಶಸ್ತ್ರಚಿಕಿತ್ಸಾ ತಜ್ಞರನ್ನೇ ಮೊದಲ ಭೇಟಿ ಮಾಡುವುದು ಸೂಕ್ತ. ಅವರು ಬೆರಳಿನ ಮೂಲಕ ತಪಾಸಣೆ ನಡೆಸಿ, ಎಂಡೋಸ್ಕೋಪಿ ಬೇಕಿದ್ದಲ್ಲಿ ಮಾತ್ರ ಅದರ ಸಲಹೆ ನೀಡುತ್ತಾರೆ. ಇಲ್ಲದಿದ್ದಲ್ಲಿ ತಾವೇ ತಕ್ಕ ಪರಿಹಾರ ಸೂಚಿಸುತ್ತಾರೆ. ಹಲವಾರು ಬಾರಿ ಔಷಧ ಮತ್ತು ಮುಲಾಮು ಹಚ್ಚುವಿಕೆಯೊಂದಿಗೆ ಆಹಾರದಲ್ಲಿ ಬದಲಾವಣೆಯೇ ಸಾಕಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಬೇಕಾಗುವುದಿದೆ.

ಯಾವ ಕಾಯಿಲೆಗೆ ಯಾವ ಚಿಕಿತ್ಸೆ ಎಂದು ಚರ್ಚಿಸುವುದು ಇಲ್ಲಿ ಅಪ್ರಸ್ತುತ. ನಮ್ಮಷ್ಟಕ್ಕೆ ನಾವೇ, “ಅದು ಪೈಲ್ಸ್‌’ ಎಂದುಕೊಂಡು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಅಥವಾ ನಿರ್ಲಕ್ಷ್ಯ ಮಾಡುವುದರಿಂದ ಪೈಲ್ಸ್‌ ಅಲ್ಲದೆ ಇತರ ಅಪಾಯಕಾರಿ ಕಾಯಿಲೆಗಳು ಇದ್ದಲ್ಲಿ ಅವುಗಳನ್ನು ಬೆಳೆಯಲು ಬಿಟ್ಟಂತಾಗುತ್ತದೆ.

ಅಪರೂಪಕ್ಕೆ ಕ್ಯಾನ್ಸರ್‌ ಕಾಯಿಲೆಯೂ “ಪೈಲ್ಸ್‌’ನ ಸೋಗು ಹಾಕಿ ಬರುವ ಸಾಧ್ಯತೆ ಇರುವುದರಿಂದ ಮಲದಲ್ಲಿ ರಕ್ತಸ್ರಾವ ಇರುವ ರೋಗಿಗಳು ಶಸ್ತ್ರಚಿಕಿತ್ಸಾ ತಜ್ಞರ ಬಳಿ ಒಮ್ಮೆಯಾದರೂ ತಪಾಸಣೆ ಮಾಡಿಕೊಳ್ಳುವುದು ಸೂಕ್ತ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವುದೇ ಲೇಖನದ ಉದ್ದೇಶ.

-ಡಾ| ಶಿವಾನಂದ ಪ್ರಭು,

ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರು

ಕೆಎಂಸಿ ಆಸ್ಪತ್ರೆ, ಮಂಗಳೂರು ಮತ್ತು ಮುಖ್ಯ ವೈದ್ಯಾಧಿಕಾರಿ

ದುರ್ಗಾ ಸಂಜೀವನಿ ಮಣಿಪಾಲ್‌ ಆಸ್ಪತ್ರೆ

ಕಟೀಲು (ಕಟೀಲು ಕೆಎಂಸಿ)

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next