Advertisement

Hemmady: ಚೌತಿ ಹಬ್ಬಕ್ಕೆ ಊರಿಗೆಲ್ಲ ಸಿಹಿ ಹಂಚುವ “ಹೆಮ್ಮಾಡಿ ಕಬ್ಬು”

01:41 PM Sep 18, 2023 | Team Udayavani |

ಕುಂದಾಪುರ: ಗಣೇಶ ಚತುರ್ಥಿ ಆಚರಣೆಗೆ ಎಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಚೌತಿ ಹಬ್ಬದಲ್ಲಿ ಕಬ್ಬಿಗೆ ವಿಶೇಷ ಪ್ರಾಶಸ್ತ್ಯವಿದೆ. ಕುಂದಾಪುರ, ಬೈಂದೂರು ಭಾಗದ ಬಹುತೇಕ ಕಡೆಗಳಲ್ಲಿ ಚೌತಿ ಹಬ್ಬ ಸೇರಿದಂತೆ ಮುಂಬರುವ ಬಹುತೇಕ ಹಬ್ಬಗಳಿಗೆ ಹೆಮ್ಮಾಡಿಯ ಬುಗುರಿಕಡುವಿನಲ್ಲಿ ಬೆಳೆಯುವ ಕಬ್ಬುವೇ ಸಿಹಿ ಉಣಿಸುತ್ತದೆ.

Advertisement

ಹೆಮ್ಮಾಡಿ ಗ್ರಾಮದ ಸಂತೋಷನಗರ ಸಮೀಪದ ಬುಗುರಿಕಡುವಿನಲ್ಲಿ ಶೀನ ಪೂಜಾರಿ ಎಂಬುವರು ಗೌರಿ ಹಬ್ಬ, ಚೌತಿ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಾರೆ. ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಅವರು ಪ್ರತೀ ವರ್ಷ ಈ ಕಬ್ಬು ಬೆಳೆದು, ಹಬ್ಬಗಳಿಗೆ ಮಾರುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ.

ಗಣೇಶ ಚತುರ್ಥಿ ಹಬ್ಬದಿಂದ ಆರಂಭಗೊಂಡು, ಉತ್ಥಾನ ದ್ವಾದಶಿ (ತುಳಸಿ ಹಬ್ಬ) ಹಬ್ಬ, ನವರಾತ್ರಿ, ದೀಪಾವಳಿ, ಕೊಡಿ ಹಬ್ಬ, ಉಪ್ಪುಂದ ಹಬ್ಬಗಳಿಗೆ ಇಲ್ಲಿಂದಲೇ ಅನೇಕ ಮಂದಿ ಕಬ್ಬು ತೆಗೆದುಕೊಂಡು ಹೋಗುತ್ತಾರೆ. ಕುಂದಾಪುರ, ಬೈಂದೂರು, ಕೋಟೇಶ್ವರ, ಗಂಗೊಳ್ಳಿ, ಹೆಮ್ಮಾಡಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಇವರಲ್ಲಿಗೆ ಬಂದು ಕಬ್ಬು ತೆಗೆದುಕೊಂಡು ಹೋಗಿ ಮಾರುತ್ತಾರೆ. ತುಳಸಿ ಹಬ್ಬಕ್ಕೆ ಹೆಮ್ಮಾಡಿ ಗ್ರಾಮದ ಬಹುತೇಕ ಮನೆಯವರು ಇವರಿಂದಲೇ ಕಬ್ಬು ಖರೀದಿಸುವುದು ವಾಡಿಕೆ.

ಬೆಳೆಗಾರರ ಸಂಖ್ಯೆ ಇಳಿಮುಖ
ಮೊದಲು ಹೆಮ್ಮಾಡಿಯ ಈ ಬುಗುರಿಕಡುವಿನಲ್ಲಿ ಅನೇಕ ಮಂದಿ ಕಬ್ಬು ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದುಬಾರಿ ಕೂಲಿ, ಕೆಲಸಕ್ಕೆ ಜನ ಸಿಗದಿರುವುದು, ನೀರಿನ ಸಮಸ್ಯೆ, ಪ್ರತಿಕೂಲ ಹವಾಮಾನ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತ ಸಹಿತ ಇನ್ನಿತರ ಕಾರಣಗಳಿಂದ ಕಬ್ಬು ಬೆಳೆಯುವವರ ಸಂಖ್ಯೆ ಇಳಿಮುಖಗೊಂಡಿದೆ. ಕೆಲ ವರ್ಷಗಳವರೆಗೆ 3-4 ಮಂದಿಯಿದ್ದರೆ, ಈಗ ಕೇವಲ ಒಬ್ಬರು ಮಾತ್ರ ಬೆಳೆಯುತ್ತಿದ್ದಾರೆ.

ಬೆಳೆ ಕಡಿಮೆ; ಬೇಡಿಕೆ ಹೆಚ್ಚು 
ಈ ಬಾರಿ ಕೇವಲ 75-80 ಸೆಂಟ್ಸ್‌ ಜಾಗದಲ್ಲಿ ಮಾತ್ರ ಬೆಳೆಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಬೇರೆ ಜಿಲ್ಲೆಗಳಿಂದ ಅಥವಾ ಹೊರ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬರಬೇಕಾಗಿದೆ. ಈ ಬಾರಿ ಭಾರೀ ಗಾಳಿಯ ಸಮಸ್ಯೆ ಇಲ್ಲದ್ದರಿಂದ, ಮಳೆಯೂ ಅಗತ್ಯದಷ್ಟು ಬಂದಿರುವುದರಿಂದ ಬೆಳೆಗೆ ಯಾವುದೇ ತೊಂದರೆ ಇರಲಿಲ್ಲ. ಉತ್ತಮ ಬೆಳೆಯೂ ಬಂದಿದೆ. ಈ ವರ್ಷ 1 ಕಬ್ಬಿನ ಜೊಲ್ಲೆಗೆ 40 ರೂ., ಒಂದು ಜೋಡಿ (2 ಕಬ್ಬಿನ ಜೊಲ್ಲೆ) ಗೆ 80 ರೂ. ದರದಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿದೆ.
* ಶೀನ ಪೂಜಾರಿ ಬುಗುರಿಕಡು, ಕಬ್ಬು ಬೆಳೆಗಾರರು

Advertisement
Advertisement

Udayavani is now on Telegram. Click here to join our channel and stay updated with the latest news.

Next