Advertisement

ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

02:35 AM Dec 20, 2018 | Team Udayavani |

ಹೆಮ್ಮಾಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಈ ಕುರಿತು ಸಂಬಂಧಪಟ್ಟವರಲ್ಲಿ ಸಮಸ್ಯೆ ಹೇಳಿಕೊಂಡರೆ ಗಮನವೇ ಕೊಡುವುದಿಲ್ಲ ಎನ್ನುವ ಆಕ್ರೋಶದ ಮಾತುಗಳು ಹೆಮ್ಮಾಡಿ ವಿಶೇಷ ಗ್ರಾಮಸಭೆಯಲ್ಲಿ ಕೇಳಿಬಂತು. ಹೆಮ್ಮಾಡಿ ಆದರ್ಶ ಯುವಕ ಮಂಡಲ ಸಭಾಂಗಣದಲ್ಲಿ ಮಂಗಳವಾರ ಹೆಮ್ಮಾಡಿ ಗ್ರಾಮ ಪಂಚಾಯತ್‌ಉದ್ಯೋಗ ಖಾತ್ರಿ ಯೋಜನೆ ವಿಶೇಷ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹರೀಶ್‌ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂತೋಷನಗರಕ್ಕೆ ಬಂದು ಹೋಗಬೇಕಿದ್ದರೆ ಹೆಮ್ಮಾಡಿ ಸರ್ಕಲ್‌ಗೆ ಹೋಗಿ ಅಲ್ಲಿಂದ ತಲ್ಲೂರು ವೃತ್ತದಲ್ಲಿ ತಿರುವು ಪಡೆದು ಬರಬೇಕಾಗುತ್ತದೆ. ಸರ್ಕಲ್‌, ಡೈವರ್ಶನ್‌, ಕೂಡು ರಸ್ತೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು. ಗುತ್ತಿಗೆ ಪಡೆದವರೂ ಕಿಮ್ಮತ್ತು ಕೊಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಹೋರಾಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾ.ಪಂ. ಸದಸ್ಯ ಸಯ್ಯದ್‌ ಯಾಸಿನ್‌ ತಿಳಿಸಿದರು.

Advertisement

ಬಾಡಿಗೆಗೆ ರಿಕ್ಷಾದವರೂ ಬರಲ್ಲ
ನಮ್ಮ ಮನೆಗಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಬಾಡಿಗೆಗೆ ಕರೆದರೆ ರಿಕ್ಷಾದವರನ್ನು ಕರೆದರೆ ಬರುವುದೇ ಇಲ್ಲ. ದ್ವಿಚಕ್ರ ವಾಹನ, ಸೈಕಲ್‌ ಕೂಡ ಸಂಚರಿಸುವುದು ಕಷ್ಟ. ರಸ್ತೆ ಹೊಂಡಾಗುಂಡಿ ಮುಚ್ಚಿ ಸರಿ ಮಾಡಿಕೊಡಲು ಪಂಚಾಯತ್‌ಗೆ ಮನವಿ ಮಾಡಿ ಸಾಕಾಗಿದೆ. ಮೂವತ್ತುಮುಡಿ ರಸ್ತೆಯಲ್ಲಿ ಜೆಲ್ಲಿ ಹಾಕಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಹುಂಚನಕೇರಿ ವಾಸಿಗಳು ತಿಳಿಸಿದರು. ಕ್ರಿಯಾಯೋಜನೆಯಲ್ಲಿ ಸೇರಿಸಿ ಎರಡೂ ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಗ್ರಾ.ಪಂ. ಪಿಡಿಒ ಭರವಸೆ ನೀಡಿದರು.

ಕಾಮಗಾರಿ ಅವಾಂತರ
ಹೆದ್ದಾರಿ ಸೇತುವೆ ನಿರ್ಮಾಣದ ವೇಳೆ ಕಲ್ಲುಮಣ್ಣು ರಾಶಿ ಹಾಕಿದ್ದು, ತೆರವು ಮಾಡದ ಕಾರಣ ಉಪ್ಪುನೀರು ನುಗ್ಗಿ ಕೃಷಿ ಮಾಡದಂತಾಗಿದೆ. ಗುತ್ತಿಗೆ ಪಡೆದವರಿಗೆ ಸಂಗ್ರಹವಾದ ಕಲ್ಲುಮಣ್ಣು ತೆರವು ಮಾಡಲು ಸೂಚಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಿಂಡಿ ಅಣೆಕಟ್ಟು ಹಲಗೆ ಸಮಸ್ಯೆಯಿಂದ ಪರಿಸರದ ಬಾವಿಗಳ ನೀರು ಉಪ್ಪಾಗುತ್ತಿವೆ. 20 ವರ್ಷಗಳ ಹಿಂದೆ ಕೇಬಲ್‌ ಮೂಲಕ ವಿದ್ಯುತ್‌ ಸಂಪರ್ಕ ನೀಡಿದ್ದು, ಕೇಬಲ್‌ ವ್ಯಾಲಿಡಿಟಿ ಮುಗಿದರೂ ವಿದ್ಯುತ್‌ ಸಂಪರ್ಕ ಬದಲಾಯಿಸಿಲ್ಲ. ಮೆಸ್ಕಾಂ ಕಂಬ ಅಳವಡಿಸುವ ಬಗ್ಗೆ ವಿಳಂಬ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದರು. ವಿದ್ಯುತ್‌ ಲೈನ್‌ ಸಮಸ್ಯೆ ಬಗ್ಗೆ ಆದ್ಯತೆ ನೆಲೆಯಲ್ಲಿ ಪರಿಹರಿಸುವ ಭರವಸೆಯನ್ನು ಪಿಡಿಒ ನೀಡಿದರು.

ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿ ಇಬ್ರಾಹಿಂಪುರ್‌ ಹಾಗೂ ಗ್ರಾ.ಪಂ. ಬಿಡಿಪಿ ಮಂಜಯ್ಯ ಬಿಲ್ಲವ ಕ್ರಿಯಾಯೋಜನೆ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ಅಂತೋನಿ ಲೂಯಿಸ್‌, ಸದಸ್ಯರಾದ ಆನಂದ ಪಿ. ಎಚ್‌., ರಾಘವೇಂದ್ರ ಪೂಜಾರಿ, ಸುಧಾಕರ ದೇವಾಡಿಗ ಕಟ್ಟು, ಆಶಾ, ಜಲಜಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಗ್ರಾ.ಪಂ.ಗೆ ಸಲ್ಲಿಕೆಯಾದ ವಿವಿಧ ಬೇಡಿಕೆಗಳನ್ನು ಪ್ರಸ್ತಾವಿಸಿದರು. ಸಿಬಂದಿ ಸುರೇಶ ಪೂಜಾರಿ ವಂದಿಸಿದರು. 

ಕುಡಿಯಲು ನೀರು ಕೊಡಿ
ನಮ್ಮ ಬಾವಿಯಲ್ಲಿ ಮೊದಲು ಶುದ್ಧ ನೀರು ಸಿಗುತ್ತಿತ್ತು. ಕುಡಿಯುವ ನೀರಿನ ಸಮಸ್ಯೆ ಇರಲಿಲ್ಲ. ಕಳೆದ ಒಂದೆರಡು ವರ್ಷದಿಂದ ಸಿಗಡಿ ಕೆರೆ ಆದ ಬಳಿಕ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ. ನಮ್ಮ ಸಮಸ್ಯೆ ಹೇಳಿದರೂ ಸ್ಪಂದಿಸುವವರಿಲ್ಲ. ಹುಂಚನಕೇರಿಯ ಮನೆಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಹಿಂದೆ ಹೀಗಿರಲಿಲ್ಲ. ಸಿಗಡಿ ಕೆರೆಯಲ್ಲಿ ನಿಲ್ಲಿಸುವ ಉಪ್ಪು ನೀರು ಇದಕ್ಕೆ ಕಾರಣ. ನಮಗೆ ಕುಡಿಯುವ ನೀರು ಕೊಡಿ. ಇಲ್ಲದಿದ್ದರೆ ಸಿಗಡಿ ಕೆರೆ ಬಂದ್‌ ಮಾಡಿ ಎಂದು ಆ ಭಾಗದ ನಿವಾಸಿಗರು ಮನವಿ ಮಾಡಿದರು.

Advertisement

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಆಗ್ರಹ
ಹೆಮ್ಮಾಡಿ ಪೇಟೆಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳ ಕಸ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಪಂಚಾಯತ್‌ ಈ ಬಗ್ಗೆ ಗಮನ ಹರಿಸಬೇಕು. ಎಲ್ಲ ಕಡೆಗಳಲ್ಲಿರುವಂತೆ ಹೆಮ್ಮಾಡಿಯಲ್ಲಿಯೂ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಿ ಎಂದು ಗ್ರಾಮಸ್ಥರಾದ ಚಂದ್ರ ಪೂಜಾರಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next