Advertisement

Kottigehara: ವಾಹನ ಸವಾರರಿಂದ ಕಲುಷಿತಗೊಳ್ಳುತ್ತಿದೆ ಹೇಮಾವತಿ ನದಿ…

03:50 PM Mar 12, 2024 | Team Udayavani |

ಕೊಟ್ಟಿಗೆಹಾರ: ಕಾಫಿನಾಡಿನ ಮಡಿಲಲ್ಲಿ ಅನೇಕ ಕೆರೆಗಳು, ನದಿಗಳು ಹರಿಯುವ ತಾಣವಾಗಿದ್ದು ಇಲ್ಲಿ ಹೇಮಾವತಿ ನದಿ ರೈತರ ಪಾಲಿಗೆ ಜೀವಜಲವಾಗಿದೆ. ಹೇಮಾವತಿ ನೀರಿನ ಹರಿವು ಮಳೆಯ ಕೊರತೆಯಿಂದ ಕ್ಷೀಣಿಸಿರುವುದರಿಂದ ಜೀವ ಜಲಕ್ಕಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

Advertisement

ಬಣಕಲ್ ನಲ್ಲಿ ಸಂಗಮವಾಗುವ ಹೇಮಾವತಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದು ಜನರಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗಲಿದೆ. ಇದರ ನಡುವೆ ಬತ್ತಿದ ನೀರಲ್ಲಿ ಬಣಕಲ್ ಸಮೀಪದ ಹೇಮಾವತಿ ನದಿಯಲ್ಲಿ ವಾಹನ ಸವಾರರು ಸಾಲುಗಟ್ಟಿ ತಮ್ಮ ವಾಹನಗಳನ್ನು ತೊಳೆಯುತ್ತಿರುವುದರಿಂದ ರಾಸಾಯನಿಕಯುಕ್ತ ಪದಾರ್ಥಗಳು ನೀರಿಗೆ ಸೇರಿ ಕಲುಷಿತಗೊಂಡು ಮಾನವನಾದಿಯಾಗಿ ನೀರಿನ ಆಶ್ರಯ ಪಡೆಯುತ್ತಿರುವ ಜಲಚರಗಳು, ಜೀವ ಸಂಕುಲ ಕೂಡ ಸಂಕಷ್ಟಕ್ಕೆ ಸಿಲುಕಿವೆ. ಪ್ರತಿನಿತ್ಯ ಕಾಫಿನಾಡಲ್ಲಿ ಹೇಮಾವತಿ ನದಿ ಬತ್ತುವ ಹಂತಕ್ಕೂ ತಲುಪಿದ್ದರಿಂದ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಇದರ ಮಧ್ಯೆ ವಾಹನ ಸವಾರರ ಹುಚ್ಚಾಟದಿಂದ ಜನರಿಗೆ ರೋಗಗಳಿಗೂ ಆಹ್ವಾನ ನೀಡಿದಂತಾಗಿದೆ. ಮಳೆಯ ಅಭಾವದಿಂದ ಕಾಫಿನಾಡು ಕಾದ ಹೆಂಚಂತಾಗಿದೆ. ಬಿಸಿಲ ನಡುವೆಯೂ ಸುಡುವ ನೆಲದಲ್ಲಿ ಹಸಿರಿಲ್ಲದೇ ಜಾನುವಾರುಗಳು ಕೂಡ ಮೇವಿನ ಕೊರತೆ ಎದುರಿಸುತ್ತಿವೆ. ವರ್ಷ ಕಳೆದಂತೆ ಮಲೆನಾಡಿನ ತಾಪಮಾನ ವಿಪರೀತ ಎನ್ನುವಂತೆ 28ರಿಂದ 32ಡಿಗ್ರಿಗೆ ಏರಿದ್ದು ಇದು ಪಕ್ಕದ ಬಯಲು ಸೀಮೆ ನಾಚಿಸುವಷ್ಟು ವಾತಾವರಣ ಮಲೆನಾಡಿನಲ್ಲಿ ಬಿಸಿಬಿಸಿಯಾಗಿ ಬದಲಾಗುತ್ತಿರುವುದು ಕಳವಳಕ್ಕೆ ಎಡೆಮಾಡಿದಂತಾಗಿದೆ.

‘ಹೇಮಾವತಿ ನದಿಯಲ್ಲಿ ವಾಹನ ತೊಳೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದನ್ನು ತಡೆಯಲು ಆ ದಾರಿಯಲ್ಲಿ ಸೂಚನಾ ಫಲಕ ಅಳವಡಿಸಿ ನದಿಗೆ ತೆರಳದಂತೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿದರೆ ದಂಡ ವಿಧಿಸಲಾಗುವುದು’.
– ಅತಿಕಾಭಾನು, ಬಣಕಲ್ ಗ್ರಾ.ಪಂ.ಅಧ್ಯಕ್ಷೆ.

‘ವಾಹನ ಸವಾರರು ನದಿಯಲ್ಲಿ ವಾಹನ ತೊಳೆಯುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದು ಹಲವು ವಾಹನಗಳಿಗೆ ದಂಡ ವಿಧಿಸಲಾಗಿದೆ’.
-ಮಧುಕುಮಾರ್, ಸದಸ್ಯ, ಬಣಕಲ್ ಗ್ರಾ.ಪಂ.

– ಸಂತೋಷ್ ಅತ್ತಿಗೆರೆ

Advertisement

ಇದನ್ನೂ ಓದಿ: Humanity: ಕೈ ಮುರಿದುಕೊಂಡ ಕೋತಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next