Advertisement

ಹೇಮಾವತಿ ಬಲದಂಡೆ ನಾಲೆಗೆ ಅನುದಾನ ಬಿಡುಗಡೆ

09:13 PM Feb 11, 2020 | Lakshmi GovindaRaj |

ಹೊಳೆನರಸೀಪುರ: ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಹೇಮಾವತಿ ಬಲದಂಡೆ ನಾಲೆ ಕಾಮಗಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 422 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಹಳ್ಳಿಮೈಸೂರು ಹೋಬಳಿ ಬಿಜೆಪಿ ಮುಖಂಡ ಡಿ.ಆರ್‌. ಶಿವಣ್ಣ ತಿಳಿಸಿದರು.

Advertisement

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಲೆ ಕಾಮಗಾರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಧುಸ್ವಾಮಿ ಅವರ ಗಮನಕ್ಕೆ ತಾರದೇ ನೀರಾವರಿ ಅಧಿಕಾರಿಗಳು ಕಾಮಗಾರಿ ಆರಂಭಿಸಿ ಗುಣಮಟ್ಟವಿಲ್ಲದಂತೆ ಕಾಮಗಾರಿ ಭರದಿಂದ ಸಾಗಿದೆ. ಈ ಬಗ್ಗೆ ಅಧಿಕಾರಿಗಳು ಗುಣಮಟ್ಟ ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಹೇಮಾವತಿ ನೀರಾವರಿ ಇಲಾಖೆ ಎನ್‌ಎಚ್‌ಪಿ ಬಲದಂಡನಾಲೆ ಎಚ್‌ಆರ್‌ಬಿಸಿ ಹೇಮಾವತಿ ಬಲದಂಡೆ ನಾಲೆ ಕಾಮಗಾರಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಯೋಜನೆ ರೂಪಿಸಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಮಗಾರಿಗೆ ಟೆಂಡರ್‌ ಆಗಿದ್ದು ಅದು 422 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ: ಗೊರೂರಿನಿಂದ ದೊಡ್ಡಕಾಡನೂರು 92.104 ಮೀ. ಇದ್ದು, 57 ಉದ್ದದ ಈ ನಾಲೆ ಈ ಭಾಗದ ಶಾಸಕ ಎ.ಟಿ.ರಾಮಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಚಿವರ ಗಮನಕ್ಕೆ ತರದೇ ಅಧಿಕಾರಿಗಳು ತಾರತುರಿಯಲ್ಲಿ ಕಾಮಗಾರಿಗೆ ಚಾಲನೆ ಮಾಡಿದ್ದಾರೆ ಎಂದು ದೂರಿದರು.

ಜೆಡಿಎಸ್‌ ಪುಕ್ಕಟೆ ಪ್ರಚಾರ: ಜೆಡಿಎಸ್‌ ಮುಖಂಡರು ಈ ಕಾಮಗಾರಿಯನ್ನು ನಾವೇ ಮಾಡಿದ್ದೀವಿ ಎಂದು ಹಳ್ಳಿಗಳಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು. 2008ರಲ್ಲಿ ಹರದನ ಹಳ್ಳಿಯಲ್ಲಿ ಮೊರಾರ್ಜಿ ಶಾಲೆ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಹೊಳೆನರಸೀಪುರದ ಬಸ್‌ ಸ್ಟಾಂಡನ್ನೂ ಬಿಜೆಪಿ ಅಧಿಕಾರಾವಧಿಯಲ್ಲಿ ಮಂಜೂರಾಗಿತ್ತು. ಇನ್ನೂ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದರೂ ಮಾಜಿ ಸಚಿವ ರೇವಣ್ಣ ಅವರು ವಿನಾ ಕಾರಣ ಬಿಜೆಪಿ ವಿರುದ್ಧ ದೂರುತ್ತಿದ್ದಾರೆಂದು ಆಪಾದಿಸಿದರು.

Advertisement

ಜೆಡಿಎಸ್‌ ಮುಖಂಡರು ಸಣ್ಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸುತ್ತಾ ಇದು ನಮ್ಮ ಕೊಡುಗೆ ಎಂದು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೇಮಾವತಿ ನಾಲೆ ಯೋಜನೆಗೆ 422 ಕೋಟಿ ರೂ. ಬಿಡುಗಡೆ ಮಾಡಿದ್ದರೂ ಈ ಬಗ್ಗೆ ಚಕಾರವೆತ್ತಿಲ್ಲ ಎಂದು ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಡಿ.ಶಾಂತರಾಜು ಹಾಗೂ ಮುಖಂಡ ಸಿದ್ದರಾಮೇಗೌಡ ಹಾಜರಿದ್ದರು.

ಸಾಲಿಗ್ರಾಮ ಕ್ಷೇತ್ರಕ್ಕೆ ಸೇರಿಸುವ ಹುನ್ನಾರ: ಮಾಜಿ ಸಚಿವ ರೇವಣ್ಣ ಅವರು ಹಳ್ಳಿಮೈಸೂರು ಹೋಬಳಿಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಪಕ್ಕದ ಸಾಲಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಶಾಂತರಾಜು ಆರೋಪಿಸಿದರು.

ಕಳೆದ 2008 ರಲ್ಲಿ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿದ್ದ ಹಳ್ಳಿ ಮೈಸೂರು ಹೋಬಳಿಯನ್ನು ಅರಕಲಗೂಡು ತಾಲೂಕಿಗೆ ಸೇರ್ಪಡೆ ಮಾಡಲಾಗಿತ್ತು. ಆದರೆ ರೇವಣ್ಣ ಅವರು ಮತ್ತೂಮ್ಮೆ ಸಾಲಿಗ್ರಾಮಕ್ಕೆ ಸೇರಿಸಲು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಹೇಮಾವತಿ ಬಲದಂಡೆ ನಾಲೆ ಕಾಮಗಾರಿಗೆ 40 ವರ್ಷಗಳ ಹಿಂದೆ ಅಂದಿನ ಶಾಸಕರಾಗಿದ್ದ ಎ.ದೊಡ್ಡೇಗೌಡರು ಹೋರಾಟ ನಡೆಸಿದ್ದರು. ಈ ನಾಲೆ ಕಾಮಗಾರಿಗೆ ಜೆಡಿಎಸ್‌ ಕೊಡುಗೆ ಏನೂ ಇಲ್ಲ.
-ಶಾಂತರಾಜು, ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next