ತುಮಕೂರು: ಹೇಮಾವತಿ ನೀರನ್ನು ನಾಲೆಯ ಮೂಲಕ ಕೆರೆಗೆ ಅಕ್ರಮವಾಗಿ ಹರಿಸುವುದನ್ನು ತಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಮುಂದಾಗಿದ್ದನ್ನು ಖಂಡಿಸಿ ಹೋರಾಟ ನಡೆಸುತ್ತಿರುವಾಗಲೇ ರೈತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಗ್ಗೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಸೋಮ್ಲಾಪುರದಲ್ಲಿ ನಡೆದಿದೆ.
ರೈತ ಚೆಲುವರಾಜು (35) ಮೃತ ವ್ಯಕ್ತಿ. ಚೇಳೂರು ಹೋಬಳಿಯ ಸೋಮ್ಲಾಪುರದ ಬಳಿಯ ನಾಲೆಯಿಂದ ಕೆರೆಗೆ ನೀರು ಹರಿಸುತ್ತಿರುವಾಗ ಕೆರೆಗಳ ತೂಬು ಮುಚ್ಚಲು ಹೇಮಾವತಿ ನಾಲಾ ಇಲಾಖಾ ಅಧಿಕಾರಿಗಳು ಮುಂದಾಗಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಆದರೆ ರೈತರ ಯಾವುದೇ ಮನವಿ, ಆಕ್ರೋಶಕ್ಕೆ ಕ್ಯಾರೇ ಎನ್ನದ ಅಧಿಕಾರಿಗಳು ಪೊಲೀಸ್ ಭದ್ರತೆ ನಡುವೆ ತೂಬು ಮುಚ್ಚಲು ಮುಂದಾದರು. ಇದರಿಂದ ಮನನೊಂದ ಚಲುವರಾಜು ಹಠಾತ್ತಾಗಿ ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ನೀರಿನ ರಭಸ ಹೆಚ್ಚಾಗಿದ್ದರಿಂದ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ರೈತರು ಆತನನ್ನು ರಕ್ಷಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಇದನ್ನು ಕಂಡ ರೈತರು ತಕ್ಷಣ ಅಲ್ಲಿದ್ದ ಅಧಿಕಾರಿಗಳ ಮೇಲೆ ಹರಿಹಾಯ್ದರು. ಅಧಿಕಾರಿಗಳ ವಾಹನಗಳ ಟೈರಿನ ಗಾಳಿ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ರೈತ ಆತ್ಮಹ ತ್ಯೆ ಸುದ್ದಿ ಸುತ್ತಮುತ್ತಲ ಗ್ರಾಮಗಳಿಗೆ ಹರಡಿ ಸಾವಿರಾರು ರೈತರು ಜಮಾವಣೆಗೊಂಡು ರಸ್ತೆ ಮಧ್ಯ ಟೈರ್‌ಗಳನ್ನು ಸುಟ್ಟು ತಮ್ಮ ಆಕ್ರೋಶ ಪ್ರದರ್ಶಿಸಿದರು. ಶಿರಾ- ಮೈಸೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಹೇಮಾವತಿ ನಾಲಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಅಧಿಕಾರಿಗಳನ್ನು ಸರ್ಕಾರಿ ವಾಹನದಲ್ಲಿ ಕೂಡಿ ಹಾಕಿ ವಾಹನ ಪಂಚರ್ ಮಾಡಿದ ಘಟನೆಯೂ ನಡೆಯಿತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಬಿ. ಗೋಪಿನಾಥ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಶಾಸಕ ಎಸ್. ಆರ್ ಶ್ರೀನಿವಾಸ್ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು. ಆದರೆ ರೈತರು ಸೋಮಾಲಪುರ ಕೆರೆಗೆ ನೀರು
ಬಿಡಬೇಕು ಮೃತ ಕುಟಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಮೃತನ ದೇಹಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಹೇಮಾವತಿ ನೀರಿಗಾಗಿ ಹೋರಾಟ ನಡೆಸುತ್ತಿದ್ದ ಅಮಾಯಕ ರೈತನೊಬ್ಬನ ಬಲಿಯಾಗಿದೆ. ಒಂದು ವಾರದಿಂದ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳದೆ ಅವರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ನೀರಾವರಿ ಇಲಾಖೆ ನಿರ್ಲಕ್ಷ್ಯವೇ ರೈತನ ಸಾವಿಗೆ ಕಾರಣವಾಗಿದ್ದು, ಕೂಡಲೇ ಸರ್ಕಾರ ಮೃತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಒದಗಿಸಬೇಕು.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ