Advertisement

ಶ್ರೀಶೈಲದಲ್ಲಿ ಭಕ್ತರ ಸೌಲಭ್ಯಕ್ಕೆ ಸೂಕ್ತ ಕ್ರಮ: ಸಿಎಂ

10:00 AM May 11, 2017 | |

ಬೆಂಗಳೂರು: ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣ ಸಂಬಂಧ ಇರುವ ಭೂ ವ್ಯಾಜ್ಯ ಇತ್ಯರ್ಥ ಸಂಬಂಧ ಅಲ್ಲಿನ ಮುಖ್ಯಮಂತ್ರಿ ಹಾಗೂ ಮುಜರಾಯಿ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ನಡೆದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಸಮಾರಂಭ  ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಶೈಲ ಕ್ಷೇತ್ರಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಅವರ ಅನುಕೂಲಕ್ಕಾಗಿ ಅತಿಥಿಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ಭೂವ್ಯಾಜ್ಯ ಇದ್ದ ಕಾರಣ ಸಾಧ್ಯವಾಗಿಲ್ಲ. ಹೀಗಾಗಿ, ಅಲ್ಲಿನ ಮುಖ್ಯಮಂತ್ರಿ ಹಾಗೂ ಅಲ್ಲಿನ ಮುಜರಾಯಿ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಶ್ರೀಶೈಲ ಕೇತ್ರದಲ್ಲಿ ರಾಜ್ಯದ ಭಕ್ತರಿಗೆ ಸೂಕ್ತ ವಸತಿಗೃಹ, ಶೌಚಾಲಯ ವ್ಯವಸ್ಥೆಗಳಿಲ್ಲ ಎಂದು ಹೇಳಿದ್ದನ್ನು ಕೇಳಿದ್ದೇನೆ.ಅತಿಥಿಗೃಹ ಸೇರಿ ಇತರ ಸೌಲಭ್ಯ ಕಲ್ಪಿಸಲು ಆರ್ಥಿಕ ನೆರವು ನೀಡಲಾಗುವುದು ಎಂದರು. ಇತ್ತೀಚೆಗೆ ನಡೆದ ರೆಡ್ಡಿ ಜನಾಂಗದ ಸಮಾವೇಶದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಬೇಕು ಎಂದು ಮುಖಂಡರು ಮನವಿ ಮಾಡಿದ್ದರು. ಅಂದು ನೀಡಿದ್ದ ಭರವಸೆಯಂತೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದಲೇ ಆಚರಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವರ್ಷ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸರ್ಕಾರದಿಂದಲೇ ಜಯಂತಿ ಆಚರಣೆಯಾಗಲಿದೆ ಎಂದು ತಿಳಿಸಿದರು.

ಯಾರನ್ನೂ ಖುಷಿಪಡಿಸಲು ಇಲ್ಲವೇ ಮತಕ್ಕಾಗಿ ಈ ರೀತಿಯ ಆಚರಣೆಗಳನ್ನು ಮಾಡುತ್ತಿಲ್ಲ. ಬದಲಿಗೆ ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯಿಂದ ಇರಬೇಕು ಎಂಬುದು ಇದರ ಆಶಯ. ಸದ್ಯದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸುವ ಮೂಲಕ ಮಾಜಿ ಸಿಎಂ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಪ್ರತಿಷ್ಠಾಪನೆಗೂ ಪ್ರಯತ್ನ ನಡೆಸಲಾಗುವುದು ಎಂದು ಪ್ರಕಟಿಸಿದರು.

ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ವಿಜಯಪುರದ ವಿಶ್ವವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿ ಅವರ ಹೆಸರನ್ನಿಟ್ಟಿರುವುದು, ಕಲಬುರಗಿ ವಿ.ವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನಪೀಠ ರಚನೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಪ್ರದರ್ಶಿಸುವ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು’ ಎಂದು ಹೇಳಿದರು.

Advertisement

ವ್ಯಕ್ತಿ ಪೂಜೆಯಲ್ಲ:
ಸಚಿವ ಬಸವರಾಜ ರಾಯರೆಡ್ಡಿ, “ಯಾವುದೇ ವರ್ಗದ ಜನರನ್ನು ಸೆಳೆಯಲು ಸರ್ಕಾರ ಮಹಾನುಭಾವರ ಜಯಂತಿ ಆಚರಣೆಗೆ ಮುಂದಾಗಿಲ್ಲ. ಯಾವ ಮಹಾಪುರುಷರು ಅವರು ಜನಿಸಿದ ಜಾತಿಯ ಸ್ವತ್ತಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿಗೂ ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಬೆಲೆ ನೀಡಿದವರಲ್ಲ. ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಕಡ್ಡಾಯ ಅಳವಡಿಕೆ ಮೂಲಕ ಅವರ ತತ್ವ ಪ್ರಸಾರ ಮಾಡುವ ಉದ್ದೇಶವಿದೆಯೇ ಹೊರತು ಮೂರ್ತಿ- ವ್ಯಕ್ತಿ ಪೂಜೆಗಲ್ಲ ಎಂದು ಹೇಳಿದರು.

ಬಸವೇಶ್ವರರ ಭಾವಚಿತ್ರ ಪ್ರದರ್ಶಿಸುವ ಸರ್ಕಾರದ ನಿರ್ಧಾರಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕೂಡ ಅಭಿನಂದನೆ ಸಲ್ಲಿಸಿದರು. ಸಚಿವರಾದ ಉಮಾಶ್ರೀ, ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ, ಸಂಸದರಾದ ಕೆ.ಎಚ್‌.ಮುನಿಯಪ್ಪ, ಕೆ.ಸಿ.ರಾಮಮೂರ್ತಿ, ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ವಿಧಾನಸಭೆಯ ಉಪಸಭಾಪತಿ ಶಿವಶಂಕರರೆಡ್ಡಿ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ ಇತರರು ಉಪಸ್ಥಿತರಿದ್ದರು.

ಇವನಾರವ ಎನ್ನದಿರಿ…
“ನಾನು ಬಸವಣ್ಣನವರ ಅನುಯಾಯಿ. ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಲು ಪ್ರಯತ್ನಿಸುತ್ತೇನೆ. ಬಸವ ಜಯಂತಿಯಂದು ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೆ. ದಾಸೋಹ ಹಾಗೂ ಕಾಯಕವೇ ಕೈಲಾಸ ತತ್ವವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ’ ಎಂದು  ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಣ್ಣನವರ “ಇವನಾರವ ಇವನಾರವ…’ ವಚನ ಉಲ್ಲೇಖೀಸಿ, “ಎಲ್ಲರೂ ವಚನವನ್ನು ಬಾಯಲ್ಲಿ ಹೇಳುತ್ತಾರೆ. ಆದರೆ ಪಾಲಿಸುವುದಿಲ್ಲ’ ಎಂದು ಹೇಳಿದರು. ಬಳಿಕ ವೇದಿಕೆಯಲ್ಲಿದ್ದ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಉದ್ದೇಶಿಸಿ, “ಶಾಮನೂರು ಶಿವಶಂಕರಪ್ಪನವರೇ ವೀರಶೈವರಿಗೆ ಅನ್ಯಾಯವಾಗಿದೆ ಎನ್ನುತ್ತೀರಿ. ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದುಕೊಳ್ಳಬೇಕು. ಬಸವಣ್ಣ ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next