Advertisement
– ಇದೊಂದು ಮಾಮೂಲಿ ಜಾನರ್ ಸಿನಿಮಾವಲ್ಲ, ಸಾಕಷ್ಟು ಹೊಸತನದಿಂದ ಕೂಡಿದೆನಿರ್ದೇಶಕ ಹೇಮಂತ್ ಹೀಗೆ ಹೇಳುತ್ತಾ ಹೋದರು. ಅವರು ಹೇಳಿದ್ದು “ಕವಲುದಾರಿ’ ಚಿತ್ರದ ಬಗ್ಗೆ. ಪುನೀತ್‌ರಾಜಕುಮಾರ್ ನಿರ್ಮಾಣದ “ಕವಲುದಾರಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು ಸಾಕಷ್ಟು ತಡವಾಗಿ. ಅದನ್ನು ಹೇಮಂತ್ ಕೂಡಾ ಒಪ್ಪಿಕೊಳ್ಳುತ್ತಾರೆ. “”ಕವಲುದಾರಿ’ ಚಿತ್ರದ ನಿರೂಪಣೆ, ಶೈಲಿ ಎಲ್ಲವೂ ಹೊಸ ಥರದಲ್ಲಿದೆ. ಹಾಗಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಸಣ್ಣದೊಂದು ಉದಾಹರಣೆ ಹೇಳಬೇಕೆಂದ್ರೆ, ಚಿತ್ರದ ಹಿನ್ನೆಲೆ ಸಂಗೀತವನ್ನು ವಿಶೇಷವಾಗಿ ವಿನ್ಯಾಸ ಮಾಡಲು ನಿರ್ಧರಿಸಿದ್ದೆವು. ಅದಕ್ಕಾಗಿ ವಿದೇಶದಲ್ಲಿ ನುರಿತ ಸುಮಾರು 100ಕ್ಕೂ ಹೆಚ್ಚು ಸಂಗೀತಗಾರರನ್ನು ಬಳಸಿಕೊಳ್ಳುವ ಪ್ಲಾನ್ ಮಾಡಿಕೊಂಡೆವು. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯ ಇದಕ್ಕೆ ಹಿಡಿಯಿತು. ಇಂತಹ ಕುಸುರಿ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾದಾಗ ಸಹಜವಾಗಿಯೇ ಚಿತ್ರ ತಡವಾಗುತ್ತದೆ. ಒಂದು ಒಳ್ಳೆ ಚಿತ್ರ ಮಾಡೋದಕ್ಕೆ ಹೊರಟಾಗ ಕೆಲವೊಮ್ಮೆ ಹೆಚ್ಚಾಗಿಯೇ ಸಮಯ ತೆಗೆದುಕೊಳ್ಳುತ್ತದೆ’ ಎನ್ನುತ್ತಾರೆ.
Related Articles
Advertisement
ಹೇಮಂತ್ ರಾವ್ ಅವರ ಪ್ರಕಾರ “ಕವಲುದಾರಿ’ ಚಿತ್ರ ಮುಂಬರುವ ಫೆಬ್ರವರಿ ಅಂತ್ಯದೊಳಗೆ ತೆರೆಗೆ ಬರಲಿದೆ. ಸದ್ಯ “ಕವಲುದಾರಿ’ಯ ಪ್ರಮೋಷನಲ್ ಕೆಲಸಗಳು ಶುರುವಾಗಿದೆ. “ಶೀಘ್ರದಲ್ಲಿಯೇ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಲಿದೆ. ಪುನೀತ್ ರಾಜಕುಮಾರ್ ಅಭಿನಯದ “ನಟ ಸಾರ್ವಭೌಮ’ ಚಿತ್ರದ ಜೊತೆಯಲ್ಲೇ “ಕವಲುದಾರಿ’ ಚಿತ್ರದ ಟ್ರೇಲರ್‌ನ್ನು ರಿಲೀಸ್ ಮಾಡುವ ಯೋಚನೆ ಇದೆ. ನಮ್ಮ ಪ್ಲಾನ್ ಪ್ರಕಾರ ಫೆಬ್ರವರಿ ಕೊನೆಯೊಳಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದೇವೆ’ ಎನ್ನುವುದು ಹೇಮಂತ್ ರಾವ್ ಮಾತು.
ಇನ್ನು “ಕವಲುದಾರಿ’ ಚಿತ್ರದಲ್ಲಿ ರಿಷಿ, ಅನಂತನಾಗ್, ಸುಮನ್ ರಂಗನಾಥ್, ಅಚ್ಯುತ ಕುಮಾರ್, ರೋಷಿನಿ ಪ್ರಕಾಶ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತವಿದೆ. “”ಕವಲುದಾರಿ’ ಮಿಸ್ಟರಿ ಡ್ರಾಮಾ, ಇದರಲ್ಲಿ ಹ್ಯೂಮನ್ ಎಲಿಮೆಂಟ್ಸ್ ಇದೆ. ನಮ್ಮ ಸಿನಿಮಾದ ಬಗ್ಗೆ ನಾವು ಮಾತಾಡೋಕ್ಕಿಂತ ಬಿಡುಗಡೆಯಾದ ಮೇಲೆ ಪ್ರೇಕ್ಷಕರೇ ಮಾತನಾಡುತ್ತಾರೆ ಅನ್ನೋ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ್ ರಾವ್.
ಸಾಮಾನ್ಯವಾಗಿ ಇಂದಿನ ಹಲವು ನಿರ್ದೇಶಕರು ವರ್ಷಕ್ಕೆ ಕನಿಷ್ಟ ಒಂದು ಸಿನಿಮಾವಾದ್ರೂ ರಿಲೀಸ್ ಆಗಬೇಕು. ಇಲ್ಲದಿದ್ದರೆ ತಮ್ಮ ಕೆರಿಯರ್ ಗ್ರಾಫ್ ಇಳಿಯಬಹುದು ಎಂಬ ಯೋಚನೆಯಲ್ಲಿರುತ್ತಾರೆ. ಇನ್ನು ಹೇಮಂತ್ ರಾವ್ ಅವರಿಗೆ ಈ ಯೋಚನೆ ಬಂದಿಲ್ಲವೇ? ಎಂದರೆ, ಅದಕ್ಕೆ ಅವರು ಕೊಡುವ ಉತ್ತರ, “”ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮುಗಿದು ಸುಮಾರು 3 ವರ್ಷಗಳಾಗುತ್ತ ಬಂತು. ಎರಡನೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಹಾಗಂತ ನನಗೆ ಯಾವ ಬೇಸರವಾಗಲಿ, ಅರ್ಜೆನ್ಸಿಯಾಗಲಿ ಇಲ್ಲ. ಇಡೀ ನನ್ನ ಸಿನಿಮಾ ಕೆರಿಯರ್‌ನಲ್ಲಿ ಐದೇ ಸಿನಿಮಾ ಮಾಡಿದ್ರೂ ಪರವಾಗಿಲ್ಲ ಅದು ನನಗೆ ಖುಷಿ ಕೊಡುವಂತಿರಬೇಕು. ಹಿಂತಿರುಗಿ ನೋಡಿದಾಗ ಅಲ್ಲೇನಾದ್ರೂ ಮಾರ್ಕ್ ಇರಬೇಕು. ಹಾಗಾಗಿ ಯಾವುದೇ ಒತ್ತಡವಿಲ್ಲದೆ, ಖುಷಿಯಿಂದ ಸಿನಿಮಾ ಮಾಡುತ್ತೇನೆ. ಒಂದು ಸಿನಿಮಾ ಆಗುವವರೆಗೆ ಬೇರೆ ಸಿನಿಮಾದ ಬಗ್ಗೆ ಯೋಚನೆ ಮಾಡಲ್ಲ’ ಎನ್ನುತ್ತಾರೆ.
ಜಿ.ಎಸ್.ಕಾರ್ತಿಕ ಸುಧನ್