Advertisement

ಇ -ಟೆಂಡರ್‌ ಪಾರದರ್ಶಕ, ಪಕ್ಷಾತೀತವಾಗಿದೆ: ನಿಂಬಾಳ್ಕರ್‌

11:41 PM Dec 27, 2020 | sudhir |

ಬೆಂಗಳೂರು : “ನಿರ್ಭಯಾ ಯೋಜನೆ’ಯ 619 ಕೋ. ರೂ. ಬೃಹತ್‌ ಇ-ಟೆಂಡರ್‌ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಹಾಗೂ ಪಕ್ಷಾತೀತವಾಗಿ ನಡೆಯುತ್ತಿದ್ದು, ಈ ಮಧ್ಯೆ ಇ-ಟೆಂಡರ್‌ನಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ.(ಬಿಇಎಲ್‌) ಅನ್ನು ಅನರ್ಹಗೊಳಿಸಲಾಗಿದೆ ಎಂಬುದು ಸುಳ್ಳು ಎಂದು ಇ-ಟೆಂಡರ್‌ ಅಹ್ವಾನ ಸಮಿತಿ ಹಾಗೂ ಪರಿಶೀಲನ ಸಮಿತಿಯ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಸ್ಪಷ್ಟಪಡಿಸಿದರು.

Advertisement

ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸುರಕ್ಷಾ ನಗರ ಯೋಜನೆಯ ಟೆಂಡರ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಗಳಲ್ಲಿ ಹುರುಳಿಲ್ಲ. ಸಾಕ್ಷ್ಯಧಾರಗಳಿಲ್ಲದೆ ಕೆಲವು ವಿಚಾರಗಳು ಪ್ರಸ್ತಾಪವಾಗಿವೆ. ಜತೆಗೆ ಟೆಂಡರ್‌ ಪ್ರಕ್ರಿಯೆ ನಿಯಮಾನುಸಾರ ಇರಲಿಲ್ಲ ಎಂದು ಆರೋಪಿಸಲಾಗಿದೆ. ಆದರೆ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ಸಮಿತಿ ರಚಿಸಲಾಗಿದೆ. ಜತೆಗೆ ಸರಕಾರದ ಮಟ್ಟದಲ್ಲಿ ಅಪೆಕ್ಸ್‌ ಸಮಿತಿ ಕೂಡ ಕಾರ್ಯನಿರ್ವಹಿಸಲಿದೆ. ಅನಂತರ ಆಹ್ವಾನ ಸಮಿತಿ, ಪರಿಶೀಲನ ಸಮಿತಿ, ಅಂಗೀಕಾರ ಸಮಿತಿ ಕಾರ್ಯ ನಿರ್ವಹಿಸಲಿವೆ. ಆದರೂ ಒಂದು ಕಂಪೆನಿಗೆ ಅನುಕೂಲ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅವರು ಸ್ಪಷ್ಟಪಡಿಸಿದರು.

ಈ ಮಧ್ಯೆ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಕಂಪೆನಿಯ ಪ್ರತಿನಿಧಿಗೆ ಗೃಹ ಇಲಾಖೆಯಿಂದ ಕರೆ ಮಾಡಿ ಮಾಹಿತಿ ಕೇಳಿರುವ ಬಗ್ಗೆ ಡಿ.7ರಂದು ಸರಕಾರಕ್ಕೆ ಪತ್ರ ಬರೆದಿದೆ. ಈ ವಿಚಾರ ತನಿಖಾ ಹಂತದಲ್ಲಿ ಇರುವಾಗ ಹೆಚ್ಚು ಮಾತನಾಡುವುದಿಲ್ಲ. ತನ್ನ ಮೇಲಿನ ಐಎಂಎ ಪ್ರಕರಣವೂ ನ್ಯಾಯಾಲಯದಲ್ಲಿದೆ ಎಂದು ಅವರು ಹೇಳಿದರು.
ಬಿಇಎಲ್‌ ಅನರ್ಹಗೊಳಿಸಿಲ್ಲ ಇ-ಟೆಂಡರ್‌ನಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ. (ಬಿಇಎಲ್) ಅನ್ನು ಅನರ್ಹಗೊಳಿಸಲಾಗಿತ್ತು
**
ಸರಕಾರದ ದಿಕ್ಕು ತಪ್ಪಿಸುತ್ತಿರುವ ನಿಂಬಾಳ್ಕರ್‌: ರೂಪಾ
ಹೇಮಂತ್‌ ನಿಂಬಾಳ್ಕರ್‌ ಸಾರ್ವಜನಿಕರು, ಮಾಧ್ಯಮ ಮತ್ತು ಸರಕಾರದ ದಿಕ್ಕು ತಪ್ಪಿಸುತ್ತಿದ್ದಾರೆ. ಮೂರನೇ ಟೆಂಡರ್‌ನಲ್ಲಿ ಹಣಕಾಸು ಇಲಾಖೆಯ ನಿಯಮ ಉಲ್ಲಂಘನೆಯಾಗಿದೆ. ಬಿಇಎಲ್‌ ಪ್ರಧಾನಮಂತ್ರಿಗೆ ನೀಡಿದ ತನ್ನ ದೂರಿನಲ್ಲಿ ವೈಯಕ್ತಿಕವಾಗಿ ನಿರ್ದಿಷ್ಟ ಬಿಡ್‌ದಾರರ ಪರವಾಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಎರಡು ಬಾರಿ ಟೆಂಡರ್‌ ರದ್ದಾಗಲು ಕಾರಣವಾದ ದೂರಿಗೆ ನಿಂಬಾಳ್ಕರ್‌ ಸೂಕ್ತ ಉತ್ತರ ನೀಡಲಿಲ್ಲ. ಇದು ಕನ್ಸಲ್ಟೆನ್ಸಿ ಸರ್ವಿಸಸ್‌ ಟೆಂಡರ್‌ ಅಲ್ಲ. ಕೆಟಿಪಿಪಿ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ. ಸೇಫ್‌ ಸಿಟಿ ಯೋಜನೆಯ ಇಡೀ ಪ್ರಕ್ರಿಯೆಯಲ್ಲಿ ಹೇಮಂತ್‌ ನಿಂಬಾಳ್ಕರ್‌ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಹಾಡಿನ ಮೂಲಕ ರೂಪಾ ಟಾಂಗ್‌
ಪುರಭವನದಲ್ಲಿ ಜರಗಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೂಪಾ ಅವರು ಅಧಿಕಾರಿಯೊಬ್ಬರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ವೀಡಿಯೋ ವೈರಲ್‌ ಆಗಿದೆ. “ನನಗೆ ಇವತ್ತು ಹಾಡಬೇಕೆಂದು ಅನಿಸುತ್ತಿಲ್ಲ. ಆದರೂ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಹಾಡು ನೆನಪಾಗುತ್ತಿದೆ. “ಟಿಕ್‌ ಟಿಕ್‌ ಬರುತ್ತಿದೆ ಕಾಲ, ಮುಗಿಯುವುದು ನಿನ್ನ ಮೋಸದ ಜಾಲ. ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ, ಅಧಿಕಾರಿ ಗೌರವ ನಿನಗಿಲ್ಲ. ಎಚ್ಚರಿಕೆ ದುಷ್ಟನೇ ಎಚ್ಚರಿಕೆ’ ಎಂದು ತುಸು ಬದಲಾಯಿಸಿ ಹಾಡಿದ್ದು, ಇದು ಪರೋಕ್ಷವಾಗಿ ನಿಂಬಾಳ್ಕರ್‌ಗೆ ಟಾಂಗ್‌ ನೀಡಿದ್ದಾಗಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next