ಜಾರ್ಖಂಡ್: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಇಡಿ ಸಮನ್ಸ್ ಜಾರಿ ಮಾಡಿದ್ದು ಅದರಂತೆ ಇಂದು (ಬುಧವಾರ) ಮಧ್ಯಾಹ್ನ 1 ಗಂಟೆಗೆ ಸಿಎಂ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಸಿಎಂ ಸೊರೆನ್ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಸಾಧ್ಯತೆ ಕೂಡಾ ಹೆಚ್ಚಿದೆ ಎನ್ನಲಾಗಿದೆ.
ಒಂದು ವೇಳೆ ಸೊರೇನ್ ಅವರನ್ನು ಅಧಿಕಾರಿಗಳು ಬಂಧಿಸಿದರೆ ಅವರ ಸ್ಥಾನಕ್ಕೆ ಅವರ ಪತ್ನಿ ಕಲ್ಪನಾ ಸೋರೆನ್ ಸಿಎಂ ಸ್ಥಾನ ಅಲಂಕರಿಸಬಹುದು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಮೂಲಗಳು ಹೇಳಿವೆ.
ಮಂಗಳವಾರ ಸಂಜೆ ನಡೆದ ಆಡಳಿತಾರೂಢ ಮೈತ್ರಿಕೂಟದ ಶಾಸಕರ ಸಭೆಯಲ್ಲಿ ಸೋರೆನ್ ಈ ಘೋಷಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಂತದಲ್ಲಿ ಸರ್ಕಾರವನ್ನು ಉಳಿಸುವುದು ಬಹುಮುಖ್ಯವಾಗಿರುವುದರಿಂದ ಶಾಸಕರು ಕೂಡ ಈ ನಿರ್ಧಾರವನ್ನು ಒಪ್ಪಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನ ಮೈತ್ರಿಕೂಟದ ಎಲ್ಲಾ ಶಾಸಕರು ಮುಖ್ಯಮಂತ್ರಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಆರೋಗ್ಯ ಸಚಿವ ಬನ್ನಾ ಗುಪ್ತಾ ಮಂಗಳವಾರ ತಡರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಂದು ವೇಳೆ ಸೊರೇನ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದರೆ, ಅವರ ಪತ್ನಿ ಕಲ್ಪನಾ ರಾಜ್ಯದ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಹಾಲಿ ಮುಖ್ಯಮಂತ್ರಿ ಬಂಧನಕ್ಕೂ ಮುನ್ನ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ. ಈ ಪ್ರಕ್ರಿಯೆಯನ್ನು ಇ.ಡಿ. ಅಧಿಕಾರಿಗಳು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ED Raid: ತರೀಕೆರೆ ವಾಣಿಜ್ಯ ಅಧಿಕಾರಿ ನೇತ್ರಾವತಿ ಮನೆ ಮೇಲೆ ಲೋಕಾಯುಕ್ತ ದಾಳಿ
ಇಡಿ ವಿಚಾರಣೆ ಬಳಿಕ ಯಾವ ಅಧಿಕಾರಿಗಳು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.